ವಾಡಿ: ರಾಜ್ಯಾದ್ಯಂತ ಸಾರಿಗೆ ಸಂಸ್ಥೆ ನೌಕರರು ಬುಧವಾರದಿಂದ ಮುಷ್ಕರ ಹಮ್ಮಿಕೊಂಡಿದ್ದರಿಂದ ಖಾಸಗಿ ವಾಹನಗಳ ದರ್ಬಾರ್ ಹೆಚ್ಚಿತ್ತು. ಪಟ್ಟಣದ ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿ ಮೇಲೆ ಸಾರಿಗೆ ಸಂಸ್ಥೆ ಬಸ್‌ಗಳ ಓಡಾಟ ಸ್ಥಗಿತವಾಗಿತ್ತು. ಹೀಗಾಗಿ ಖಾಸಗಿ ವಾಹನಗಳ ಪ್ರಯಾಣ ದರ ಸಾಮಾನ್ಯವಾಗಿ ಗಗನಕ್ಕೇರಿತ್ತು.
ಬಸ್‌ಗಳು ನಿಲ್ಲುತ್ತಿದ್ದ ಸ್ಥಳದಲ್ಲಿ ಕ್ರೂಸರ್, ಆಟೋ, ಕಾರುಗಳ ದರ್ಭಾರ್ ಕಂಡು ಬಂತು. ಕಲಬುರಗಿ, ಯಾದಗಿರಿ ನಗರಗಳಿಗೆ ಹೋಗಲು ಅಣಿಯಾಗಿದ್ದ ನೂರಾರು ಪ್ರಯಾಣಿಕರು, ಖಾಸಗಿ ವಾಹನಗಳ ದರ ಕೇಳಿ ಧಂಗಾಗಿ ಹೋದರು.
ಪ್ರತಿದಿನದಂತೆ ನಿಗದಿತ ಸಾರಿಗೆ ವೆಚ್ಚ ಪಡೆಯಬೇಕಾದ ಕ್ರೂಸರ್ ಚಾಲಕರು, ದುಪ್ಪಟ್ಟು ಹಣಕ್ಕೆ ಬೇಡಿಕೆಯಿಡುತ್ತಿದ್ದರು. 45 ಕಿ.ಮೀ ಅಂತರದ ವಾಡಿ-ಕಲಬುರಗಿ, ವಾಡಿ-ಯಾದಗಿರಿ ಮಧ್ಯೆ ಪ್ರಯಾಣ ದರ 50ರೂ.ಗಳನ್ನು ಸರ್ಕಾರವೇ ನಿಗದಿಪಡಿಸಿದೆ. ಆದರೆ ಬುಧವಾರ ಕ್ರೂಸರ್ ಚಾಲಕರು ವಾಡಿ-ಕಲಬುರಗಿಗೆ ತಲುಪಿಸಲು 100ರೂ. ಪೀಕಿದರು.
ದೇವರಿಗೆ ಬಂದವರು ದಾರಿ ಕಾಣದಾದರು: ಈ ಭಾಗದ ಪ್ರತಿಷ್ಠಿತ ಭಕ್ತಿ ಕೇಂದ್ರಗಳಾದ ಬಳವಡಗಿ ಏಲಾಂಬಿಕೆ, ಕೊಂಚೂರು ಶ್ರೀ ಹನುಮಾನ, ನಾಲವಾರದ ಶ್ರೀ ಕೋರಿಸಿದ್ಧೇಶ್ವರ, ರಾವೂರ ಶ್ರೀ ಸಿದ್ಧಲಿಂಗೇಶ್ವರ, ಸನ್ನತಿಯ ಶ್ರೀ ಚಂದ್ರಲಾಂಬಿಕೆ, ಲಾಡ್ಲಾಪುರದ ಹಾಜಿ ಸರ್ವರ್, ಹಳಕರ್ಟಿಯ ಶ್ರೀ ವೀರಭದ್ರೇಶ್ವರ ದೇವರ ದರ್ಶನಕ್ಕಾಗಿ ವಿವಿಧೆಡೆಯಿಂದ ಬಂದಿದ್ದ ಭಕ್ತರು ಸಾರಿಗೆ ಸೌಲಭ್ಯವಿಲ್ಲದೇ ತೊಂದರೆ ಅನುಭವಿಸುವಂತೆ ಆಯಿತು. ಬಳವಡಗಿ ಏಲಾಂಬಿಕೆ ದರ್ಶನಕ್ಕಾಗಿ ಮಹಾರಾಷ್ಟ್ರದ ಸೊಲ್ಲಾಪುರದಿಂದ ಮಂಗಳವಾರವೇ ಆಗಮಿಸಿದ್ದ ಶಿವಗಂಗಾ, ಇಮಲಾಬಾಯಿ ಎನ್ನುವವರು ಬುಧವಾರ ವಾಪಸ್ ಊರಿಗೆ ಹೊರಡಲು ಬಸ್ ಇಲ್ಲ ಎನ್ನುವುದನ್ನು ಅರಿತು ಪರದಾಡಿದರು. ಕ್ರೂಸರ್ ಏರಿದವರು ಪ್ರಯಾಣ ದರ ಕೇಳಿ ಕೆಳಗಿಳಿದರು.
ಕರ್ನಾಟಕದಲ್ಲಿ ಬಸ್ ಬಂದ್ ಇರ್ತಾವ ಅಂತ ಗೊತ್ತಿರಲಿಲ್ಲ. ಪಾದುಕೆ ಕಟ್ಟಿಕೊಂಡವರು ನಾವು. ಬಳವಡಗಿ ಯಲ್ಲಮ್ಮನ ಬಳಿ ಬಂದಿದ್ದೆವು. ಬಸ್ ಬಂದ್ ಅವಾ ಅಂದ್ರ 10ರಿಂದ 20ರೂ. ಹೆಚ್ಚಿಸಬೇಕು. ನೂರು ರೂ. ಕೇಳುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಸ್ಥಳೀಯ ಬಹುತೇಕ ವ್ಯಾಪಾರಿಗಳು, ಕಾಲೇಜು ವಿದ್ಯಾರ್ಥಿಗಳು ಕಲಬುರಗಿಗೆ ಹೋಗುವುದನ್ನೇ ಕೈಬಿಟ್ಟರು. ಬಸ್ ಬಂದ್ ದಿನವನ್ನು ಖಾಸಗಿ ವಾಹನಗಳು ಸುಲಿಗೆ ದಿನವನ್ನಾಗಿ ಆಚರಿಸಿದ್ದು ಸ್ಪಷ್ಟವಾಗಿ ಗೋಚರಿಸಿತು.