ವಾಡಿ: ಸುಮಾರು ನಾಲ್ಕು ನೂರು ಜನಸಂಖ್ಯೆ ಹೊಂದಿರುವ ಊರಿನ ಕಟ್ಟಕಡೆಯ ಬಡಾವಣೆ. ಹಾಸುಗಲ್ಲಿನಿಂದ ಹೊಚ್ಚಿಕೊಂಡ ಹೆಂಚಿನ ಮಾಳಿಗೆ ಮನೆಗಳು. ತಂಬಿಗೆ ಹಿಡಿದು ಬಯಲಿಗೆ ಹೊರಟು ಮುಜುಗರ ಅನುಭವಿಸುವ ಶಿಕ್ಷಿತ ಯುವತಿಯರು. ಮಡುಗಟ್ಟಿದ ಕೊಳೆ, ಪಾಚಿ-ಮುಳ್ಳು ಪೊದೆಗಳ ನಡುವೆ ಕುಡಿಯುವ ನೀರಿನ ಗುಮ್ಮಿ. ಶುಚಿತ್ವ ಕಾಣದ ಟ್ಯಾಂಕಿನಲ್ಲಿ ಹುಳುಗಳ ಜಲಕ್ರೀಡೆ. ಜೀವಜಲ ವಿಷವಾಗಿದ್ದರೂ ಉದರ ಸೇರಿಸಿಕೊಂಡು ಅನಾರೋಗ್ಯದೊಂದಿಗೆ ಕಾಲ ದೂಡುವ ಅಮಾಯಕ ನಿವಾಸಿಗಳು… ಚಿತ್ತಾಪುರ ವಿಧಾನಸಭೆ ಮೀಸಲು ಮತಕ್ಷೇತ್ರ ವ್ಯಾಪ್ತಿಯ ಹಳಕರ್ಟಿ ಗ್ರಾಮದ ದಲಿತ ಕೇರಿಯ ಜನರ ಬದುಕಿನ ದುಸ್ಥಿತಿಯಿದು.
ಊರಿನ ಕೊನೆಯಲ್ಲಿ ಬದುಕು ಕಟ್ಟಿಕೊಂಡಿರುವ ಈ ದಲಿತ ಕುಟುಂಬಗಳು ಕುಡಿಯಲು ಶುದ್ಧ ನೀರಿಲ್ಲದೆ ಪರದಾಡುತ್ತಿವೆ. ಬಹಿರ್ದೆಸೆ ಪದ್ಧತಿ ಇಲ್ಲಿ ಜೀವಂತವಿದ್ದು, ಸ್ವಚ್ಛ ಭಾರತ ಯೋಜನೆ ನೆಲಕಚ್ಚಿದೆ. ಕುಡಿಯುವ ನೀರು, ಶೌಚಾಲಯ, ಸ್ವಚ್ಛತೆ, ಚರಂಡಿ ಸೌಲಭ್ಯಗಳಂತ ಮೂಲಭೂತ ಹಕ್ಕುಗಳಿಂದ ಇಲ್ಲಿನ ಜನರು ವಂಚಿತರಾಗಿದ್ದಾರೆ.
ಬಡಾವಣೆಯ ಜಲಮೂಲ ರೋಗಗ್ರಸ್ತವಾಗಿದ್ದು, ಶುದ್ಧ ನೀರಿನ ಭಾಗ್ಯ ಇಲ್ಲವಾಗಿದೆ. ದಲಿತ ಜನಾಂಗದ ಎಡ ಮತ್ತು ಬಲ ಸಮುದಾಯಗಳ ಅನುಕೂಲಕ್ಕಾಗಿ ಗ್ರಾ.ಪಂ ವತಿಯಿಂದ ಬಡಾವಣೆಯಲ್ಲಿ ಶುದ್ಧ ನೀರಿನ ಘಟಕ (ಆರ್‌ಒ ಪ್ಲ್ಯಾಂಟ್ ) ಅಳವಡಿಸಲಾಗಿದೆ. 5ರೂ. ಶುಲ್ಕ ಪಡೆದು ಒಂದು ಕೊಡ ನೀರು ವಿತರಿಸಲಾಗುತ್ತಿದೆ. ಹೀಗೆ ಖರೀದಿಸಲಾದ ಶುದ್ಧ ನೀರು ಬೆಳಗ್ಗೆ ನಾಲಿಗೆಗೆ ರುಚಿ ನೀಡಿದರೆ, ಸಂಜೆ ವೇಳೆಗೆ ಕಹಿ ಅನುಭವ ನೀಡುತ್ತದೆ. ನೀರು ಶುದ್ಧೀಕರಣಕ್ಕೆ ಬಳಕೆ ಮಾಡಲಾಗುತ್ತಿರುವ ರಾಸಾಯನಿಕ ಮಿಶ್ರಣದಲ್ಲಿ ವ್ಯತ್ಯಾಸ ಉಂಟಾಗುತ್ತಿದ್ದು, ಶುದ್ಧ ನೀರು ಸಹ ಕಹಿಯಾಗಿ ಬಾಯಾರಿಕೆ ನೀಗಿಸದಂತಾಗಿದೆ.
ಆರೋಗ್ಯ ಇಲಾಖೆ ಅಧಿಕಾರಿಗಳು ಯಾವ ನೀರನ್ನು ಕುಡಿಯಬಾರದು ಎಂದು ಆದೇಶ ನೀಡಿದ್ದಾರೋ ಅದೇ ನೀರನ್ನು ಕುಡಿದು ಬದುಕುತ್ತಿದ್ದೇವೆ. ಕೊಳವೆಬಾವಿ ನೀರು ಉಪ್ಪಾದರೆ, ಶುದ್ಧೀಕರಣದ ನೀರು ಕಹಿಯಾಗಿದೆ. ನಮ್ಮ ಗೋಳು ಯಾರು ಕೇಳಬೇಕು ಎಂದು ಬಡಾವಣೆಯ ಲಕ್ಷ್ಮೀ ಪರತೂರಕರ, ಮರೆಮ್ಮ ಹುಡೇಕರ, ಗಂಗಮ್ಮಾ ಬುಳ್ಳಾನೋರ, ಶರಣಮ್ಮ ಹರಗುಳಕರ ಮತ್ತಿತರರು ತಮ್ಮ ಸಂಕಷ್ಟ ತೋಡಿಕೊಂಡಿದ್ದಾರೆ.
ಗ್ರಾಮಕ್ಕೆ ಪ್ಲೋರಾಯಿಡ್ ನೀರು ಪೂರೈಕೆ: ಗ್ರಾ.ಪಂ ಆಡಳಿತ ಕೇಂದ್ರ ಸ್ಥಾನ ಹೊಂದಿರುವ ಹಳಕರ್ಟಿ ಗ್ರಾಮದಲ್ಲಿ ನದಿ, ಹಳ್ಳ, ಬಾವಿಗಳಲ್ಲಿ ಜಲಮೂಲವಿಲ್ಲದ ಕಾರಣ ಬೋರ್‌ವೆಲ್ ನೀರನ್ನೇ ಗ್ರಾಮಕ್ಕೆ ಸರಬರಾಜು ಮಾಡಲಾಗುತ್ತಿದೆ. ಮೂರು ವರ್ಷಗಳ ಹಿಂದೆ ಶಿಥಿಲಾವಸ್ಥೆಗೆ ತಲುಪಿದ್ದ ನೀರಿನ ಟ್ಯಾಂಕ್ ಧರೆಗುರುಳಿತ್ತು. 1.0 ಲಕ್ಷ ಲೀಟರ್ ಸಾಮರ್ಥ್ಯದ ಹೊಸ ನೀರಿನ ಟ್ಯಾಂಕ್ ನಿರ್ಮಿಸಲಾಗಿದ್ದು, ಗ್ರಾ.ಪಂ ಆಡಳಿತಕ್ಕೆ ಇನ್ನೂ ಹಸ್ತಾಂತರವಾಗಿಲ್ಲ. ಟ್ಯಾಂಕ್ ಕಾಮಗಾರಿ ಕಳಪೆಯಾಗಿದೆ ಎಂಬ ಗ್ರಾಮಸ್ಥರ ಆರೋಪದ ಹಿನ್ನೆಲೆಯಲ್ಲಿ ಟ್ಯಾಂಕ್ ಬಳಕೆಗೆ ಹಿನ್ನಡೆ ಉಂಟಾಗಿದೆ. ಪರಿಣಾಮ ಪ್ಲೋರಾಯಿಡ್ ಅಂಶ ಹೊಂದಿರುವ ಮತ್ತು ಕುಡಿಯಲು ಯೋಗ್ಯವಲ್ಲದ ನೀರನ್ನು ವಿವಿಧ ಬಡಾವಣೆಗಳಿಗೆ ಸರಬರಾಜು ಮಾಡುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ.
ಬೋರ್‌ವೆಲ್ ನೀರಿನಲ್ಲಿ ಪ್ಲೋರಾಯಿಡ್ ಅಂಶ ಎಷ್ಟಿದೆ ಎನ್ನುವುದನ್ನು ತಿಳಿಯಲು ನೀರನ್ನು ಪರೀಕ್ಷೆಗೆ ಕಳುಹಿಸಿದ್ದೇವೆ. ಆರೋಗ್ಯ ಇಲಾಖೆ ಅಧಿಕಾರಿಗಳ ಆದೇಶದಂತೆ ವರದಿ ಬರುವವರೆಗೂ ನಳಗಳಿಗೆ ಪೂರೈಸಲಾಗುತ್ತಿರುವ ಬೋರ್‌ವೆಲ್ ನೀರನ್ನು ಕುಡಿಯದಂತೆ ಜನರಿಗೆ ಎಚ್ಚರಿಕೆ ನೀಡಲಾಗಿದೆ. ಕೇವಲ ಗೃಹ ಬಳಕೆಗೆ ಮಾತ್ರ ನಳದ ನೀರು ಉಪಯೋಗಿಸುವಂತೆ ಕೋರಲಾಗಿದೆ. ಕುಡಿಯುವ ನೀರಿಗಾಗಿ ಗ್ರಾಮದ ದಲಿತರ ಬಡಾವಣೆಯಲ್ಲಿ ಮತ್ತು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಚೇರಿ ಬಳಿ ಶುದ್ಧ ನೀರಿನ ಘಟಕ (ಆರ್‌ಒ ಪ್ಲ್ಯಾಂಟ್) ಸ್ಥಾಪಿಸಲಾಗಿದೆ. ಹೊಸ ನೀರಿನ ಟ್ಯಾಂಕ್ ಸಿದ್ಧಗೊಂಡಿದ್ದು, ನಮಗೆ ಹಸ್ತಾಂತರಗೊಂಡ ತಕ್ಷಣವೇ ಪೈಪ್‌ಲೈನ್ ಜೋಡಣೆ ಮಾಡುತ್ತೇವೆ.
ಮಲ್ಲಪ್ಪ ಹಿಪ್ಪರಗಿ,
ಪಿಡಿಒ, ಹಳಕರ್ಟಿ ಗ್ರಾಪಂ
ಮಡಿವಾಳಪ್ಪ ಹೇರೂರ