Advertisement

ನೀರಿಗಾಗಿ ಬೀದಿಗಿಳಿದ ಜನ

12:38 PM May 03, 2020 | Naveen |

ವಾಡಿ: ಬೇಸಿಗೆ ಆರಂಭದ ದಿನದಲ್ಲಿಯೇ ಕುಡಿಯುವ ನೀರಿನ ಹಾಹಾಕಾರ ಭುಗಿಲೆದ್ದಿದ್ದು, ಕೋವಿಡ್ ಸಂಕಟದ ಕಂಟೇನ್ಮೆಂಟ್‌ ಜೋನ್‌ ಬಡಾವಣೆಗಳಲ್ಲಿನ ಜನರು ಕುಡಿಯುವ ನೀರಿಗಾಗಿ ಕಾದಾಡುತ್ತಿದ್ದಾರೆ. ಕುಡಿಯುವ ನೀರಿಗಾಗಿ ಭೀಮಾ ಮತ್ತು ಕಾಗಿಣಾ ನದಿ ಮೂಲವನ್ನೇ ನೆಚ್ಚಿರುವ ಪಟ್ಟಣದ ಜನತೆಗೆ ಕಳೆದ ಹತ್ತಾರು ದಿನಗಳಿಂದ ಕುಡಿಯುವ ನೀರಿನ ಸಮಸ್ಯೆ ತಲೆದೋರಿದೆ.

Advertisement

ಎರಡೂ ನದಿಗಳೀಗ ಬತ್ತಿದ್ದರಿಂದ ಎಲ್ಲೆಡೆ ಖಾಲಿ ಕೊಡಗಳ ಪ್ರದರ್ಶನ ಕಂಡುಬರುತ್ತಿದೆ. ಎರಡು ವರ್ಷದ ಮಗುವಿಗೆ ಕೋವಿಡ್ ಸೋಂಕು ದೃಢಪಟ್ಟ ಕಾರಣಕ್ಕೆ ನಗರದಲ್ಲಿ ಲಾಕ್‌ಡೌನ್‌ ಮತ್ತಷ್ಟು ಬಿಗಿಗೊಂಡಿದೆ. ಮನೆಯಲ್ಲಿರಬೇಕಾದ ಜನರು ಕೊಡಗಳೊಂದಿಗೆ ಬೀದಿಗೆ ಬಂದು ನೀರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ನಳಗಳ ಎದುರು ನೂರಾರು ಜನ ಮಹಿಳೆಯರು ಗುಂಪು ಸೇರುವ ಮೂಲಕ ಸಾಮಾಜಿಕ ಅಂತರ ನಿಯಮ ಧಿಕ್ಕರಿಸುತ್ತಿದ್ದಾರೆ. ನದಿಯಲ್ಲಿ ನೀರು ಕಡಿಮೆಯಾಗುತ್ತಿದ್ದಂತೆ ಪುರಸಭೆ ಅಧಿಕಾರಿಗಳು ಐದಾರು ದಿನಕ್ಕೊಮ್ಮೆ ಬಡಾವಣೆಗಳಿಗೆ ನೀರು ಸರಬರಾಜು ಮಾಡುತ್ತಿದ್ದಾರೆ. ಕಂಟೇನ್ಮೆಂಟ್‌ ಜೋನ್‌ ಪ್ರದೇಶಕ್ಕೆ ಒಳಪಟ್ಟಿರುವ ಪಿಲಕಮ್ಮಾ ದೇವಿ ಬಡಾವಣೆ, ಮಲ್ಲಿಕಾರ್ಜುನ ದೇವಸ್ಥಾನ ಬಡಾವಣೆ, ಕಲಕಮ್‌ ಏರಿಯಾ ಹೀಗೆ ಒಟ್ಟು ನಾಲ್ಕು ಬಡಾವಣೆಗಳಲ್ಲಿ ಜನರು ನೀರಿಗಾಗಿ ಪರಿತಪಿಸುತ್ತಿದ್ದಾರೆ.

ನಳಗಳಿಗೆ ಸರಬರಾಜು ಆಗುತ್ತಿರುವ ನೀರು ಕುಡಿಯಲು ಯೋಗ್ಯವಿಲ್ಲ. ಶುದ್ಧ ನೀರಿಗಾಗಿ ಪ್ರತಿ ತಿಂಗಳು ಲಕ್ಷಾಂತರ ರೂ. ಖರ್ಚು ಮಾಡುವ ಪುರಸಭೆ ಯೋಗ್ಯವಾದ ನೀರು ಕೊಡುತ್ತಿಲ್ಲ. ಎಸಿಸಿ ಕಂಪನಿ ಕೊಡುತ್ತಿರುವ ಶುದ್ಧ ನೀರಿಗಾಗಿ ಮುಗಿಬೀಳಬೇಕಾದ ಪರಸ್ಥಿತಿ ಬಂದಿದೆ. ಮನೆಯೊಳಗೆ ಕುಳಿತರೆ ನಮಗೆ ನೀರು ತಂದು ಕೊಡೋರ್ಯಾರು? ಸರಕಾರದ ನಳಗಳಿಗೆ ನಿತ್ಯ ಶುದ್ಧ ನೀರು ಬರುವಂತೆ ಕ್ರಮಕೈಗೊಳ್ಳಬೇಕು ಎಂದು ಬಡಾವಣೆ ಜನರು ಆಗ್ರಹಿಸಿದ್ದಾರೆ. ಕುಡಿಯುವ ನೀರಿಗಾಗಿ ಹೊರಗೆ ಬರಲೂ ಸಹ ಪೊಲೀಸರು ನಿರ್ಬಂಧ ಹೇರುತ್ತಿದ್ದಾರೆ. ಇದರಿಂದ ನಮಗೆ ಮಾನಸಿಕ ಹಿಂಸೆಯಾಗುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next