ವಾಡಿ: ಮುಂಗಾರು ಆರ್ಭಟಿಸಿದ ನಂತರ ನಾಲವಾರ ಹಾಗೂ ವಾಡಿ ವಲಯದಲ್ಲಿ ಕೃಷಿ ಚಟುವಟಿಕೆ ಗರಿಗೆದರಿದ್ದು, ರೈತರು ಬಿತ್ತನೆ ಕಾಯಕದಲ್ಲಿ ತೊಡಗಿದ್ದಾರೆ.
ಸನ್ನತಿ ಭೀಮಾ ತೀರದ ಕಪ್ಪು ಭೂಮಿಯ ಸಾಲುಗಳಲ್ಲಿ ಈ ವರ್ಷವೂ ಹತ್ತಿ ಬೀಜವನ್ನೇ ಹೆಚ್ಚಿನ ಪ್ರಮಾಣದಲ್ಲಿ ಉತ್ತುತ್ತಿರುವುದು ಕಂಡುಬಂದಿದೆ. ಉಳಿದಂತೆ ತೊಗರಿ ಈ ಭಾಗದ ಪ್ರಮುಖ ಬೆಳೆಯಾಗಿದೆ. ನಾಲವಾರ ವಲಯದಲ್ಲಿ ಈಗಾಗಲೇ 66 ಎಂ.ಎಂ ಮಳೆಯಾಗಿದೆ. ಸನ್ನತಿ, ರಾಂಪುರಹಳ್ಳಿ, ಮಾರಡಗಿ, ಅಳ್ಳೊಳ್ಳಿ, ಭೀಮನಳ್ಳಿ, ಕೊಲ್ಲೂರು, ಉಳಂಡಗೇರಾ, ಕನಗನಹಳ್ಳಿ ಭಾಗಗಳಲ್ಲಿ ಉತ್ತಮ ಮಳೆಯಾಗಿದೆ.
ಭೀಮಾ ನದಿ ಬ್ಯಾರೇಜ್ ವ್ಯಾಪ್ತಿಯ ಸನ್ನತಿ ಭೂಮಿಯಂತೂ ಹಸಿರಿನಿಂದ ಆವರಿಸಿ ಮಲೆನಾಡಿನಂತೆ ಕಂಗೊಳಿಸುತ್ತಿವೆ. ಕಳೆದ ಮೂರ್‍ನಾಲ್ಕು ದಿನಗಳ ಹಿಂದೆ ಸುರಿದ ಧಾರಾಕಾರ ಮಳೆಯಿಂದ ಈಗಾಗಲೇ ಬಿತ್ತಿದ ಬೆಳೆಗೆ ಮತ್ತು ಬಿತ್ತಲಿರುವ ಭೂಮಿಗೂ ಹೆಚ್ಚು ಅನುಕೂಲಕರವಾಗಿದೆ. ಕೋವಿಡ್ ಆತಂಕದಿಂದಾಗಿ ರೈತರ ಮಧ್ಯೆ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಜಿಲ್ಲಾಧಿಕಾರಿಗಳ ಆದೇಶದಂತೆ ನಾಲವಾರ ರೈತ ಸಂಪರ್ಕ ಕೇಂದ್ರ ಸಹಿತ ಕೊಲ್ಲೂರು, ಅಳ್ಳೊಳ್ಳಿ ಮತ್ತು ಭೀಮನಳ್ಳಿ ಗ್ರಾಮಗಳಲ್ಲಿ ಬೀಜ ವಿತರಣಾ ಕೇಂದ್ರಗಳನ್ನು ಸ್ಥಾಪಿಸಿರುವುದು ಆಯಾಭಾಗದ ರೈತರಿಗೆ ತುಸು ಅನುಕೂಲವಾಗಿದೆ ಎನ್ನಬಹುದು.
ಸನ್ನತಿ ಭೀಮಾ ನದಿಯಲ್ಲಿ ಬ್ಯಾರೇಜ್ ಹಿನ್ನೀರು ಅಪಾರ ಪ್ರಮಾಣದಲ್ಲಿ ಸಂಗ್ರಹವಿದ್ದು, ಸನ್ನತಿ ಸೇರಿದಂತೆ ಬನ್ನೇಟಿ, ಕನಗನಹಳ್ಳಿ, ಕೊಲ್ಲೂರು, ಉಳಂಡಗೇರಾ, ತರ್ಕಸ್‌ಪೇಟೆ ಗ್ರಾಮಗಳಲ್ಲಿ ಮಲೆನಾಡು ರೂಪದ ನೀರಾವರಿ ಕೃಷಿ ಭೂಮಿಗಳಿದ್ದು, ಆ ಭಾಗದಲ್ಲಿ ಭತ್ತ ನಾಟಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಆದರೆ ತೊಗರಿ ಮತ್ತು ಹತ್ತಿ ಬಿತ್ತನೆಯಲ್ಲಿ ತೊಡಗಿರುವ ಒಣ ಭೂಮಿ ರೈತರು ಮೋಡಗಳನ್ನೆ ನೆಚ್ಚಿ ಬೇಸಾಯಕ್ಕಿಳಿದಿದ್ದಾರೆ. 14 ಪಂಚಾಯತಿ ವ್ಯಾಪ್ತಿಯ ರೈತರ ಮಧ್ಯೆ ಕೇವಲ ಮೂವರು ಸಹಾಯಕ ಕೃಷಿ ಅಧಿಕಾರಿಗಳು ಕಾರ್ಯನಿರ್ವಹಿಸುತ್ತಿದ್ದು, ಇನ್ನೂ ಮೂರು ಸಹಾಯಕ ಕೃಷಿ ಅಧಿಕಾರಿಗಳ ಕೊರತೆ ನಾಲವಾರ ರೈತ ಸಂಪರ್ಕ ಕೇಂದ್ರವನ್ನು ಕಾಡುತ್ತಿದೆ.
ನಾಲವಾರ ವಲಯದಲ್ಲಿ ಇದುವರೆಗೂ ಟಿಎಸ್-3ಆರ್ ತೊಗರಿ ಬೀಜಗಳನ್ನು ಹೆಚ್ಚು ಬಳಕೆ ಮಾಡಲಾಗುತ್ತಿತ್ತು. ಇದೇ ಮೊದಲ ಬಾರಿಗೆ ರೈತರಿಗೆ ಜಿಆರ್‌ಜಿ-811 ತೊಗರಿ ಬೀಜಗಳ ವಿತರಣೆ ಮಾಡಲಾಗಿದೆ. ಈ ಹೊಸ ಬೀಜ ತಳಿ ಕುರಿತು ರೈತರಲ್ಲಿ ಭರವಸೆ ಮೂಡಿಸುವುದರ ಜತೆಗೆ ಜಾಗೃತಿ ಮೂಡಿಸಲಾಗುತ್ತಿದೆ. ಒಟ್ಟು 80 ಕ್ವಿಂಟಲ್ ತೊಗರಿ, 60 ಕ್ವಿಂಟಲ್ ಹೆಸರು, 64 ಕ್ವಿಂಟಲ್ ಭತ್ತ ಬೀಜ ವಿತರಣೆ ಮಾಡಲಾಗಿದೆ. ನಾಲವಾರ ರೈತ ಸಂಪರ್ಕ ಕೇಂದ್ರ ವ್ಯಾಪ್ತಿಗೆ ಬರುವ ಒಟ್ಟು 14 ಗ್ರಾ.ಪಂಗಳ ಆಧೀನದ ಒಟ್ಟು 25000 ಹೆಕ್ಟೇರ್ ಕೃಷಿ ಭೂಮಿಗೆ ಈಗಾಗಲೇ ಬೀಜಗಳ ವಿತರಣೆಯಾಗಿದ್ದು, ಬಿತ್ತನೆ ಕಾರ್ಯ ಶುರುವಾಗಿದೆ.
ರಮೇಶ ಕೆಲ್ಲೂರ,
ಸಹಾಯಕ ಕೃಷಿ ಅಧಿಕಾರಿ, ರೈತ ಸಂಪರ್ಕ ಕೇಂದ್ರ, ನಾಲವಾರ
ಮಡಿವಾಳಪ್ಪ ಹೇರೂರ