Advertisement

ನಕಲಿ ವೈದ್ಯರ ಮೊರೆ ಹೋಗದಿರಿ

04:52 PM Mar 07, 2020 | Naveen |

ವಾಡಿ: ಕೊರೊನಾ ವೈರಸ್‌ ತಡೆಗೆ ಖಚಿತ ಔಷಧ ಇನ್ನೂ ಪತ್ತೆಯಾಗಿಲ್ಲ, ಈ ಮಧ್ಯೆ ನಕಲಿ ವೈದ್ಯರ ಔಷಧ ವ್ಯಾಪಾರ ದಂಧೆ ಶುರುವಾಗಿದೆ ಎನ್ನಲಾಗಿದ್ದು, ವಂಚಕರನ್ನು ನಂಬಿ ಹಣ-ಆರೋಗ್ಯ ಕಳೆದುಕೊಳ್ಳಬೇಡಿ ಎಂದು ಚಿತ್ತಾಪುರ ತಾಲೂಕು ವೈದ್ಯಾಧಿಕಾರಿ ಸುರೇಶ ಮೇಕಿನ್‌ ಎಚ್ಚರಿಸಿದರು.

Advertisement

ಶುಕ್ರವಾರ ಪಟ್ಟಣದ ಪುರಸಭೆ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಕೊರೊನಾ ವೈರಸ್‌ ಜಾಗೃತಿ ಸಭೆ ಉದ್ದೇಶಿಸಿ ಅವರು ಮಾತನಾಡಿದರು. ಚೀನಾ ದೇಶದಲ್ಲಿ ಲಕ್ಷಕ್ಕೂ ಹೆಚ್ಚು ಜನರಲ್ಲಿ ಕೊರೊನಾ ವೈರಸ್‌ ಪತ್ತೆಯಾಗಿದ್ದು, ಸಾವಿರಾರು ಜನರ ಸಾವಿಗೆ ಕಾರಣವಾಗಿದೆ. ಪ್ರಪಂಚದ 76 ದೇಶಗಳಿಗೆ ಈ ವೈರಸ್‌ ಹರಡಿದೆ. ಹರಡುವ ಕೊರೊನಾ ರೋಗಾಣುಗಳ ತೀವ್ರತೆ ಹೆಚ್ಚಿದ್ದು, ಭಾರತಕ್ಕೂ ಕಾಲಿಟ್ಟಿರುವ ಮಹಾಮಾರಿ ಕೊರೊನಾ ಜನರಲ್ಲಿ ಆತಂಕ ಮೂಡಿಸಿದೆ. ಕರ್ನಾಟಕದಲ್ಲಿ ಇದುವರೆಗೂ ಒಂದೂ ಪ್ರಕರಣಗಳು ಪತ್ತೆಯಾಗಿಲ್ಲ. ಪರಿಣಾಮವಾಗಿ ಜನರು ಭಯಭೀತರಾಗುವ ಅಗತ್ಯವಿಲ್ಲ ಎಂದರು.

ಮುಂಜಾಗ್ರತಾ ಕ್ರಮವಾಗಿ ಕೆಮ್ಮು ಮತ್ತು ಶೀತ ಕಾಣಿಸಿಕೊಂಡವರಿಂದ ದೂರವಿರಿ. ಅಲ್ಲದೇ ಕಲ್ಯಾಣ ಕರ್ನಾಟಕದಲ್ಲಿ ಬಿಸಿಲಿನ ತಾಪಮಾನ ಹೆಚ್ಚಿರುವುದರಿಂದ ಸಾಮಾನ್ಯವಾಗಿ ಈ ವೈರಸ್‌ಗಳು ಬಹಳ ಹೊತ್ತು ನೆಲದ ಮೇಲೆ ಬದುಕುಳಿಯುವುದಿಲ್ಲ. ಹೀಗಾಗಿ ನಾವು ತುಸು ಧೈರ್ಯವಾಗಿರಬಹುದು ಎಂದು ಹೇಳಿದರು.

ಶಂಕಿತರಿಗೆ ಚಿಕಿತ್ಸೆ ನೀಡಲು ಈಗಾಗಲೇ ತಾಲೂಕು ಆಸ್ಪತ್ರೆಯಲ್ಲಿ ವಿಶೇಷ ಕೊಠಡಿ ಮೀಸಲಿಡಲಾಗಿದೆ. ವಿಪರೀತ ಜ್ವರ, ಕೆಮ್ಮು, ಶೀತ, ತಲೆನೋವು ಕಾಣಿಸಿಕೊಂಡರೆ ತಕ್ಷಣ ಆಸ್ಪತ್ರೆಗೆ ಬನ್ನಿ. ರೋಗ ಪತ್ತೆಗೆ ಬೇಕಾದ ವಿವಿಧ ಪರೀಕ್ಷೆಗಳನ್ನು ಮಹಾರಾಷ್ಟ್ರದ ಪುಣೆ ನಗರದಲ್ಲಿರುವ ಪ್ರಯೋಗಾಲಯಕ್ಕೆ ಕಳುಹಿಸಲಾಗುವುದು. ಅಲ್ಲದೇ ನಕಲಿ ವೈದ್ಯರು ಕಂಡುಬಂದರೆ ತಕ್ಷಣ ಮಾಹಿತಿ ಕೊಡಿ. ಅಂತಹವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದರು.

ಪುರಸಭೆ ಮುಖ್ಯಾಧಿಕಾರಿ ವಿಠ್ಠಲ ಹಾದಿಮನಿ ಮಾತನಾಡಿ, ಪ್ರತಿ ಹತ್ತು ನಿಮಿಷಕ್ಕೊಮ್ಮೆ ನೀರು ಕುಡಿಯುವ ಮೂಲಕ ಗಂಟಲು ಒಣಗದಂತೆ ನೋಡಿಕೊಳ್ಳಿ. ಪೌಷ್ಟಿಕ ಆಹಾರ ಸೇವನೆ ಮಾಡಿ ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಿ. ಕೈಗಳನ್ನು ಸಾಬೂನಿನಿಂದ ತೊಳೆದು ಸ್ವತ್ಛವಾಗಿಟ್ಟುಕೊಳ್ಳಿ. ಜನನಿಬೀಡ ಪ್ರದೇಶಗಳಿಗೆ ಹೋಗಬೇಡಿ ಎಂದು ಸಲಹೆ ನೀಡಿದರು.

Advertisement

ಪುರಸಭೆ ಅಧ್ಯಕ್ಷೆ ಮೈನಾಬಾಯಿ ರಾಠೊಡ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಮಲ್ಲಯ್ಯ ಗುತ್ತೇದಾರ, ರೈಲು ನಿಲ್ದಾಣ ವ್ಯವಸ್ಥಾಪಕ ಎಸ್‌.ಎನ್‌. ದೇಸಾಯಿ, ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ರಿಜೀವುಲ್ಲಾ ಖಾದ್ರಿ, ಪುರಸಭೆ ಸದಸ್ಯರಾದ ಭೀಮಶಾ ಜಿರೊಳ್ಳಿ, ದೇವಿಂದ್ರ ಕರದಳ್ಳಿ, ರಾಜೇಶ ಅಗರವಾಲ, ಮಹ್ಮದ್‌ ಗೌಸ್‌, ತಿಮ್ಮಯ್ಯ ಪವಾರ, ಪೃಥ್ವಿರಾಜ ಸೂರ್ಯವಂಶಿ, ಜೈನಾಬಾಯಿ ನಾಯಕ, ಮರಗಪ್ಪ ಕಲಕುಟಗಿ, ಮುಖಂಡರಾದ ನಾಗೇಂದ್ರ ಜೈಗಂಗಾ, ಶ್ರವಣಕುಮಾರ ಮೌಸಲಗಿ, ತುಕಾರಾಮ ರಾಠೊಡ, ರಾಜಾ ಪಟೇಲ ಪಾಲ್ಗೊಂಡಿದ್ದರು. ಮನೋಜಕುಮಾರ ಹಿರೋಳಿ ಸ್ವಾಗತಿಸಿದರು. ಸಮುದಾಯ ಸಂಘಟಕ ಕಾಶಿನಾಥ ಧನ್ನಿ ನಿರೂಪಿಸಿದರು. ಪರಿಸರ ಅಭಿಯಂತರ ಸಂಗಮೇಶ ಕಾರಬಾರಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next