ವಾಡಿ: ಚಿತ್ತಾಪುರ ತಾಲೂಕಿನ ಲಾಡ್ಲಾಪುರ ಗ್ರಾಮದ ಹಾಜಿಸರ್ವರ್ ಜಾತ್ರೆಯಲ್ಲಿ ಭಾನುವಾರ ನಡೆದ ಕುಸ್ತಿ ಹಾಗೂ ಭಾರ ಎತ್ತುವ ಸ್ಪರ್ಧೆಗಳು ಗಮನ ಸೆಳೆದವು.
ಗ್ರಾಮದ ಹನುಮಾನ ದೇವರ ದೇವಸ್ಥಾನದ ಆವರಣದಲ್ಲಿ ಶನಿವಾರ ಸಂಜೆ 6:00 ರಿಂದ ರವಿವಾರ ಬೆಳಿಗ್ಗೆ 9:00 ಗಂಟೆವರೆಗೆ ಜರುಗಿದ ಕೈಕುಸ್ತಿ ಸ್ಪರ್ಧೆಯಲ್ಲಿ ಸುಮಾರು 500ಕ್ಕೂ ಹೆಚ್ಚು ವಿವಿಧ ಭಾಗಗಳಿಂದ ಆಗಮಿಸಿದ್ದ ಕುಸ್ತಿಪಟುಗಳು, ಆಕರ್ಷಕ ಪ್ರದರ್ಶನ ನೀಡುವ ಮೂಲಕ ಜಾತ್ರೆಯ ಮೆರಗು ಹೆಚ್ಚಿಸಿದರು.
ಇನ್ನೊಂದೆಡೆ ಭಾರ ಎತ್ತುವ ಸ್ಪರ್ಧೆ ನಡೆದು ಭಕ್ತರಿಗೆ ಮನರಂಜನೆ ನೀಡಿತು. 215 ಕೆ.ಜಿ ಉಸುಕಿನ ಚೀಲವನ್ನು ಹೆಗಲ ಮೇಲೆ ಎತ್ತಿ ಗಮನ ಸೆಳೆದ 28 ವರ್ಷ ವಯಸ್ಸಿನ ಯುವಕ, ಯಾದಗಿರಿ ಜಿಲ್ಲೆಯ ಸುರಪುರ ತಾಲ್ಲೂಕಿನ ಶಾರದಳ್ಳಿ ಗ್ರಾಮದ ಮರೆಪ್ಪ ದೊರೆ ವೀಕ್ಷಕರಿಂದ ಚಪ್ಪಾಳೆಗಿಟ್ಟಿಸಿಕೊಂಡ. ಜಾತ್ರಾಮಹೋತ್ಸವ ಸಮಿತಿ ಕೊಡಮಾಡುವ 3 ಗ್ರಾಂ. ಬಂಗಾರದ ಉಂಗುರ ಬಹುಮಾನ ಪಡೆದು ಗೆಲುವಿನ ನಗೆ ಬೀರಿದ. ಅಲ್ಲದೆ 200 ಕೆ.ಜಿ ಭಾರ ಎತ್ತಿ ದ್ವಿತೀಯ ಸ್ಥಾನ ಪಡೆದ ಕಾಶಪ್ಪ ಗೋಗಿ ಹಾಗೂ ಶಹಾಪುರ ತಾಲ್ಲೂಕಿನ ಮಟ್ನಳ್ಳಿ ಗ್ರಾಮದ ಯಲ್ಲಪ್ಪ ಅವರು 5 ಗ್ರಾಂ ಬೆಳ್ಳಿ ಕಡಗವನ್ನು ಬಹುಮಾನವಾಗಿ ಪಡೆದರು.
ಕೈಕುಸ್ತಿ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಏಶಪ್ಪ ಅಲ್ಲಿಪುರ ಅವರಿಗೆ ಗ್ರಾಮದ ಮುಖಂಡರು 5 ಗ್ರಾಂ ಬೆಳ್ಳಿ ಕಡಗ ತೊಡಿಸಿ ಸನ್ಮಾನಿಸಿದರು.
ಇದನ್ನೂ ಓದಿ: Jalabala Vaidya: ಖ್ಯಾತ ರಂಗಕರ್ಮಿ, ಅಕ್ಷರ ಥಿಯೇಟರ್‌ನ ಸಹ ಸಂಸ್ಥಾಪಕಿ ಜಲಬಾಲ ನಿಧನ