ವಾಡಿ: ರೈತರಿಂದ ಹತ್ತಿ ಖರೀದಿಸಲು ಬಂದ ದಲ್ಲಾಳಿಯೊಬ್ಬ ತೂಕದಲ್ಲಿ ಮೋಸ ಮಾಡುತ್ತಿದ್ದ ಘಟನೆ ಬೆಳಕಿಗೆ ಬಂದಿದ್ದು, ಮೋಸ ಹೋದ ರೈತರು ದಲ್ಲಾಳಿಯ ಹತ್ತಿ ಲಾರಿ ತಡೆದು ಆಕ್ರೋಶ ವ್ಯಕ್ತಪಡಿಸಿದ ಪ್ರಸಂಗ ಅಣ್ಣಿಕೇರಾ ಗ್ರಾಮದಲ್ಲಿ ನಡೆದಿದೆ.
ಲಾಡ್ಲಾಪುರ ಗ್ರಾಮ ಸಮೀಪದ ಅಣ್ಣಿಕೇರಾ ಗ್ರಾಮಕ್ಕೆ ಕಳೆದ ಎರಡು ತಿಂಗಳಿಂದ ಹತ್ತಿ ಖರೀದಿಸಲು ರೈತರ ಬಳಿ ಬರುತ್ತಿರುವ ದಲ್ಲಾಳಿಗಳು, ಸುಮಾರು 3000 ಕ್ವಿಂಟಲ್ ಹತ್ತಿಯನ್ನು ತೂಕದಲ್ಲಿ ಮೋಸ ಮಾಡಿ ಖರೀದಿಸಿದ್ದಾರೆ. ಎಲೆಕ್ಟ್ರಾನಿಕ್ ತೂಕದ ಯಂತ್ರವನ್ನು ರಿಮೋಟ್ ಕಂಟ್ರೋಲ್‌ನಿಂದ ನಿಯಂತ್ರಿಸುವ ತಂತ್ರಗಾರಿಕೆ ಕಲೆ ದಲ್ಲಾಳಿಗಳಿಗೆ ತಿಳಿದಿದ್ದು, ಸರಳವಾಗಿ ರೈತರನ್ನು ವಂಚಿಸಿದ್ದಾರೆ.
ದಲ್ಲಾಳಿ ಬರುವ ಮುಂಚೆ ಹತ್ತಿ ತೂಕ ಮಾಡಿಟ್ಟುಕೊಂಡಿದ್ದ ರೈತರು, ದಲ್ಲಾಳಿಯ ಯಂತ್ರದ ತೂಕದಲ್ಲಿ ಶೇ.20 ರಷ್ಟು ವ್ಯತ್ಯಾಸ ಬಂದಿದ್ದನ್ನು ಗಮನಿಸಿದರು. ಇದು ರೈತರ ಅನುಮಾನಕ್ಕೆ ಕಾರಣವಾಯಿತು. ದಲ್ಲಾಳಿಯಿಂದ ಮೋಸಕ್ಕೊಳಗಾಗಿದ್ದು ಅರಿವಿಗೆ ಬಂದ ತಕ್ಷಣ ಹತ್ತಿ ಲಾರಿಯನ್ನು ತಡೆದು ವಾಗ್ವಾದ ನಡೆಸಿದರು.
ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಬಿದರಾಣಿ ಗ್ರಾಮದ ಶಿವರೆಡ್ಡಿಗೌಡ ಎನ್ನುವರು ಎರಡು ತಿಂಗಳಿಂದ ಹಣ್ಣಿಕೇರಾ ಹಾಗೂ ಸುತ್ತಲ ಗ್ರಾಮಗಳು, ತಾಂಡಾಗಳ ರೈತರಿಂದ ಹತ್ತಿ ಖರೀದಿಸುತ್ತಿದ್ದಾರೆ. ರೈತರು ಮಾಡಿಟ್ಟ ತೂಕಕ್ಕೂ ಮತ್ತು ದಲ್ಲಾಳಿಗಳು ಮಾಡುವ ತೂಕಕ್ಕೂ ಭಾರಿ ವ್ಯತ್ಯಾಸ ಕಂಡುಬಂದಿದೆ. ಹತ್ತಿಯನ್ನು ಹೊತ್ತು ಸಾಗುತ್ತಿದ್ದ ಲಾರಿಯನ್ನು ತಡೆದು ಪ್ರತಿಭಟನೆ ನಡೆಸಿದ್ದಾರೆ. ಈವರೆಗೂ 30ರಿಂದ 40 ಲಾರಿ ಹತ್ತಿ ಖರೀದಿಯಾಗಿದೆ. ಇದರಲ್ಲೂ ಸಾಕಷ್ಟು ಮೋಸವಾಗಿರುವುದು ಸ್ಪಷ್ಟವಾಗಿದೆ.
ಪ್ರಕರಣ ವಾಡಿ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ದೂರು ಸ್ವೀಕರಿಸಿರುವ ಪಿಎಸ್‌ಐ ವಿಜಯಕುಮಾರ ಭಾವಗೆ ಆರೋಪಿ ದಲ್ಲಾಳಿ ಪತ್ತೆಗೆ ಮುಂದಾಗಿದ್ದಾರೆ. ಹತ್ತಿ ಖರೀದಿಸುವ ನೆಪದಲ್ಲಿ ದಲ್ಲಾಳಿಗಳು ರೈತರಿಗೆ ಭಾರಿ ಮೋಸ ಮಾಡುತ್ತಿದ್ದು, ನಾಲವಾರ ವಲಯದ ಹಲವು ಗ್ರಾಮಗಳಿಗೂ ಈ ಮೋಸಗಾರರು ಕಾಲಿಟ್ಟಿದ್ದಾರೆ. ಪೊಲೀಸರು ಈ ಜಾಲವನ್ನು ಭೇದಿಸಬೇಕು
ಎಂದು ರೈತರು ಆಗ್ರಹಿಸಿದ್ದಾರೆ.