Advertisement

ರಾತ್ರಿ ಪಾಳಿ ವೈದ್ಯರ ನೇಮಕಕ್ಕೆ ಕೊಕ್ಕೆ

11:49 AM Feb 19, 2020 | Naveen |

ವಾಡಿ: ಪಟ್ಟಣದ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ರಾತ್ರಿ ಪಾಳಿಯಲ್ಲಿ ಕರ್ತವ್ಯ ನಿರ್ವಹಿಸಲು ವಿವಿಧ ಗ್ರಾಮಗಳ ಪ್ರಾಥಮಿಕ ಆರೋಗ್ಯ ಕೇಂದ್ರಗಳ ವೈದ್ಯರ ನೇಮಕಕ್ಕೆ ಜಿಲ್ಲಾ ಆರೋಗ್ಯ ಇಲಾಖೆ ಹೊರಡಿಸಿದ್ದ ಆದೇಶ ರದ್ದಾಗಿದೆ. ಜನರ ಬೇಡಿಕೆಗೆ ಸ್ಪಂದಿಸಿ ದಿನದ 24 ತಾಸು ಆರೋಗ್ಯ ಸೇವೆ ನೀಡಲು ಮುಂದಾಗಿ ಆರೋಗ್ಯ ಇಲಾಖೆ ಹೊರಡಿಸಿದ್ದ ಆದೇಶವನ್ನು ವಿನಾಕಾರಣ ರದ್ದುಪಡಿಸಿದ್ದರಿಂದ ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿದೆ.

Advertisement

ನಾಲವಾರ, ವಾಡಿ ವ್ಯಾಪ್ತಿಯ ಗ್ರಾಮಗಳ ಜನರ ಅನುಕೂಲಕ್ಕಾಗಿ ವಾಡಿ ಸರಕಾರಿ ಸಮುದಾಯ ಆರೋಗ್ಯ ಕೇಂದ್ರಕ್ಕೆ 30 ಹಾಸಿಗೆಗಳ ಸೌಲಭ್ಯ ಒದಗಿಸಲಾಗಿದ್ದು, ವೈದ್ಯರ ಕೊರತೆಯಿಂದಾಗಿ ಒಳ ರೋಗಿಗಳಿಗೆ ಚಿಕಿತ್ಸೆ ಇಲ್ಲವಾಗಿದೆ. ಕೇವಲ ಹೊರ ರೋಗಿಗಳಿಗೆ ಮಾತ್ರ ಮಾತ್ರೆ ವಿತರಿಸಿ, ಚುಚ್ಚುಮದ್ದು ನೀಡಿ ಹೊರ ತಳ್ಳಲಾಗುತ್ತಿದೆ ಎನ್ನುವುದು ಸ್ಥಳೀಯರ ಆರೋಪವಾಗಿದೆ.

ರಾತ್ರಿ ಪಾಳಿಯಲ್ಲಿ ವೈದ್ಯರ ಅನುಪಸ್ಥಿತಿ ಕಾರಣಕ್ಕೆ ಸಾವು-ನೋವುಗಳು ಸಂಭವಿಸುತ್ತಿವೆ ಎನ್ನುವ ಸಂಘ ಸಂಸ್ಥೆಗಳ ದೂರಿನ ಮೇರೆಗೆ ಎಚ್ಚೆತ್ತುಕೊಂಡಿದ್ದ ಆರೋಗ್ಯ ಇಲಾಖೆ 2019 ಡಿಸೆಂಬರ್‌ 11ರಂದು ರಾತ್ರಿ ಪಾಳಿಗೆ ವೈದ್ಯರ ನೇಮಕ ಮಾಡಿತ್ತು. ಇನ್ನೇನು ವಾಡಿ ಸರಕಾರಿ ಆಸ್ಪತ್ರೆಗೆ ರಾತ್ರಿ ವೇಳೆಯೂ ವೈದ್ಯರ ಸೇವೆ ಲಭ್ಯವಾಗಲಿದೆ ಎನ್ನುವ ಆಶಾಭಾವನೆ ಹೊಂದಿದ್ದ ಸ್ಥಳೀಯರಿಗೆ ಮತ್ತೆ ನಿರಾಶೆ ಎದುರಾಗಿದೆ.

ಹಿಂದಿನ ಜಿಲ್ಲಾ ಆರೋಗ್ಯ ವೈದ್ಯಾಧಿಕಾರಿ (ಡಿಎಚ್‌ಒ)ಡಾ| ಎಂ.ಕೆ. ಪಾಟೀಲ ವರ್ಗಾವಣೆಯಾಗಿರುವ ಕಾರಣಕ್ಕೆ ಅವರು ಹೊರಡಿಸಿರುವ ಆದೇಶ ಪತ್ರವೂ ಕಸದ ಬುಟ್ಟಿಗೆ ಸೇರಿಕೊಂಡಿದೆ.

ವೈದ್ಯರ ರಾತ್ರಿ ಸೇವಾ ವಿವರ ಹೀಗಿತ್ತು: ಮೊದಲ ಮತ್ತು ಮೂರನೇ ಸೋಮವಾರ ದಿಗ್ಗಾಂವ ಆಸ್ಪತ್ರೆಯ ಡಾ| ಖಾಜಾ ಮೈನೂದ್ದೀನ್‌. ಮೊದಲನೇ ಮಂಗಳವಾರ ಮತ್ತು ಮೂರನೇ ಮಂಗಳವಾರ ಅಲ್ಲೂರು (ಕೆ) ಆಸ್ಪತ್ರೆಯ ಡಾ| ಅಮೃತ್‌. ಹೀಗೆ ಸರತಿ ಸಾಲಿನಂತೆ
ಕೊಲ್ಲೂರು, ರಾವೂರ, ನಾಲವಾರ, ದಂಡೋತಿ, ವಾಡಿ, ಟೆಂಗಳಿ, ಕೋರವಾರ, ಮಾಡಬೂಳ ಹಾಗೂ ಅರಣಕಲ್‌ ಪ್ರಾಥಮಿಕ ಆರೋಗ್ಯ ಕೇಂದ್ರಗಳ ವೈದ್ಯರನ್ನು ನೇಮಿಸಲಾಗಿತ್ತು. ತಮಗೆ ನಿಗದಿಪಡಿಸಿದ ದಿನಗಳಂದು ಕಡ್ಡಾಯವಾಗಿ ರಾತ್ರಿ ಪಾಳಿಯಲ್ಲಿ ಆಸ್ಪತ್ರೆಯಲ್ಲಿದ್ದು ವೈದ್ಯಕೀಯ ಸೇವೆ ನೀಡಬೇಕು ಎನ್ನುವ ಖಡಕ್‌ ಸೂಚನೆ ರವಾನೆಯಾಗಿತ್ತು. ಆದರೆ ಆದೇಶ ಹೊರಡಿಸಿ ಎರಡು ತಿಂಗಳು ಗತಿಸಿದರೂ ರಾತ್ರಿ ಪಾಳಿಗೆ ವೈದ್ಯರು ಹಾಜರ್‌ ಆಗಿಲ್ಲ. ಬಡ ರೋಗಿಗಳ ಗೋಳಾಟ ಯಥಾಸ್ಥಿತಿ ಮತ್ತೆ ಮುಂದುವರಿದಿದೆ.

Advertisement

ಸಂಘಟನೆಗಳ ಆಕ್ರೋಶ: ವಾಡಿ ಸರ್ಕಾರಿ ಆಸ್ಪತ್ರೆ, ನಿರಂತರ ವೈದ್ಯರ ಕೊರತೆ ಎದುರಿಸುತ್ತಾ ಬಂದಿದೆ. ರಾತ್ರಿ ವೇಳೆ ಆಸ್ಪತ್ರೆಗೆ ಬರುವ ರೋಗಿಗಳಿಗೆ ವೈದ್ಯರ ಸೇವೆ ಲಭ್ಯವಾಗುತ್ತಿಲ್ಲ. ಕಲಬುರಗಿ ನಗರಗಳ ಆಸ್ಪತ್ರೆಗೆ ತೆರಳುವ ಮಾರ್ಗ ಮಧ್ಯೆ ಅನೇಕ ರೋಗಿಗಳು ಪ್ರಾಣ ಕಳೆದುಕೊಂಡಿರುವ ಘಟನೆಗಳು ಸಾಕಷ್ಟಿವೆ. ಆಸ್ಪತ್ರೆಯಲ್ಲಿ ಹಾವು, ಚೇಳು ಕಡಿತದ ರೋಗಿಗಳಿಗೆ ಔಷಧ ಸಿಗದೆ ಕೆಲವರು ಅಸುನೀಗಿದ್ದಾರೆ. ಮಾತ್ರೆ, ಔಷಧ, ಮೂಲಸೌಕರ್ಯ ಕೊರತೆಯಿಂದ ಈ ಆಸ್ಪತ್ರೆ ಬಡ ರೋಗಿಗಳ ಪಾಲಿಗೆ ಇದ್ದೂ ಇಲ್ಲದಂತಾಗಿದೆ. ರಾತ್ರಿ ಪಾಳಿ ವೈದ್ಯರ ನೇಮಕ ಮುಖ್ಯವಾಗಿದೆ.

ರಾತ್ರಿ ಪಾಳಿ ವೈದ್ಯರ ನೇಮಕ ಆದೇಶ ರದ್ದುಪಡಿಸಿದ್ದು ಬಡ ರೋಗಿಗಳಿಗೆ ಮಾಡಿದ ದ್ರೋಹವಾಗಿದೆ ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ, ಎಸ್‌ಯುಸಿಐ (ಸಿ), ಮಾನವ ಬಂಧುತ್ವ ವೇದಿಕೆ, ಎಸ್‌ ಡಿಪಿಐ, ಎಐಡಿವೈಒ, ಕರವೇ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಾನು ವಾಡಿ ಆಸ್ಪತ್ರೆ ಆಡಳಿತಾಧಿ ಕಾರಿಯಾಗಿದ್ದ ಸಂದರ್ಭದಲ್ಲಿ ಜನರ ಬೇಡಿಕೆಗೆ ಸ್ಪಂದಿಸಿ ವಿವಿಧ ಗ್ರಾಮಗಳ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಹತ್ತಾರು ವೈದ್ಯರ ಪಟ್ಟಿ ಸಿದ್ಧಪಡಿಸಿ ವಾಡಿ ಆಸ್ಪತ್ರೆಯಲ್ಲಿ ರಾತ್ರಿ ಪಾಳಿ ಸೇವೆಗೆ ನೇಮಿಸಬೇಕು ಎಂದು ಜಿಲ್ಲಾ ವೈದ್ಯಾಧಿಕಾರಿಗಳಲ್ಲಿ ಮನವಿ ಮಾಡಿಕೊಂಡಿದ್ದೆ. ಈ ಕುರಿತು ಈ ಹಿಂದಿನ ಡಿಎಚ್‌ಒ ಅಧಿಕೃತ ಆದೇಶ ಹೊರಡಿಸಿದ್ದರು. ಆದರೆ ಅದು ಜಾರಿಗೆ ಬರಲಿಲ್ಲ. ವಾಡಿ ಆಸ್ಪತ್ರೆಯ ಹಾಲಿ ಆಡಳಿತಾಧಿಕಾರಿ ರಿಜಿಉಲ್ಲಾ ಖಾದ್ರಿ ಅವರು ಮತ್ತೂಮ್ಮೆ ಈ ವಿಷಯವನ್ನು ಡಿಎಚ್‌ಒ ಡಾ| ಎಂ. ಜಬ್ಟಾರ್‌ ಎದುರು ಪ್ರಸ್ತಾಪಿಸಬೇಕಾಗುತ್ತದೆ.
„ಡಾ| ಸುರೇಶ ಮೇಕಿನ್‌,
   ತಾಲೂಕು ವೈದ್ಯಾಧಿಕಾರಿ, ಚಿತ್ತಾಪುರ

Advertisement

Udayavani is now on Telegram. Click here to join our channel and stay updated with the latest news.

Next