ವಾಡಿ: ಕೊಂಚೂರು ಗ್ರಾಮಕ್ಕೆ ಸರ್ಕಾರಿ ಪ್ರೌಢಶಾಲೆ ಮಂಜೂರು ಮಾಡುವ ಮೂಲಕ ನಾವು ಬಾಲ ಕಾರ್ಮಿಕರಾಗುವುದನ್ನು ತಪ್ಪಿಸಬೇಕು ಎಂದು ಒತ್ತಾಯಿಸಿ ಕಲಬುರಗಿ ಮಾರ್ಗದರ್ಶಿ ಸಂಸ್ಥೆ ನೇತೃತ್ವದಲ್ಲಿ ಬಳವಡಗಿ, ಕಡಬೂರ, ಚಾಮನೂರು ಹಾಗೂ ಕೊಂಚೂರ ಗ್ರಾಮಗಳ ಮಕ್ಕಳು ಶಿಕ್ಷಣ ಇಲಾಖೆಗೆ ಮನವಿ ಸಲ್ಲಿಸಿದರು.
ಈ ಕುರಿತು ಲಾಡ್ಲಾಪುರ ಗ್ರಾಪಂ ಅಧ್ಯಕ್ಷ ಹಾಗೂ ಅಭಿವೃದ್ಧಿ ಅಧಿಕಾರಿಗಳ ಮೂಲಕ ಶಿಕ್ಷಣ ಇಲಾಖೆಗೆ ಮಕ್ಕಳ ಸಮ್ಮುಖದಲ್ಲಿ ಮನವಿ ಸಲ್ಲಿಸಿರುವ ಮಾರ್ಗದರ್ಶಿ ಸಂಸ್ಥೆಯ ಜಿಲ್ಲಾ ಸಂಯೋಜಕ ರಾಹುಲ್ ಮಾಳಗೆ, ಶಾಲೆ ಸೌಲಭ್ಯ ಇಲ್ಲದ್ದಕ್ಕೆ ಮಕ್ಕಳು ಶಾಲೆ ತೊರೆದು ಕೂಲಿಯತ್ತ ಹೊರಡುತ್ತಿದ್ದಾರೆ. ಇದನ್ನು ತಪ್ಪಿಸಲು ಕೂಡಲೇ ಮುಂದಾಗಬೇಕು ಎಂದು ಅಧಿ ಕಾರಿಗಳು ಮತ್ತು ಚುನಾಯಿತ ಜನಪ್ರತಿನಿಧಿ ಗಳನ್ನು ಕೋರಿದರು.
ಚಿತ್ತಾಪುರ ತಾಲೂಕಿನ ನಾಲವಾರ ಹೋಬಳಿ ವ್ಯಾಪ್ತಿಯ ಕೊಂಚೂರು ಗ್ರಾಮದಲ್ಲಿ ಸುಮಾರು ಎರಡು ಸಾವಿರ ಜನಸಂಖ್ಯೆ ಇದೆ. ಇಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಇದ್ದು, ಒಂದರಿಂದ ಎಂಟನೇ ತರಗತಿ ವರೆಗೆ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ. ಕೊಂಚೂರು ಗ್ರಾಮ ಸೇರಿದಂತೆ ಸಮೀಪದ ಇತರೆ ಗ್ರಾಮಗಳಾದ ಬಳವಡಗಿ, ಚಾಮನೂರು ಹಾಗೂ ಕಡಬೂರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳ ಎಂಟನೇ ತರಗತಿ ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 94 ಮಕ್ಕಳು ಎಂಟನೇ ತರಗತಿಯಲ್ಲಿ ಅಭ್ಯಾಸ ಮಾಡುತ್ತಿದ್ದಾರೆ.
ವಿಪರ್ಯಾಸವೆಂದರೆ ಈ ನಾಲ್ಕು ಹಳ್ಳಿಯ ಮಕ್ಕಳ ಪಾಲಿಗೆ ಒಂಭತ್ತನೇ ಮತ್ತು ಹತ್ತನೇ ತರಗತಿಗಳ ಶಿಕ್ಷಣ ಎಂಬುದು ಗಗನಕುಸುಮವಾಗಿ ಪರಿಣಿಮಿಸಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ. ದೂರದ ವಾಡಿ ಪಟ್ಟಣ ಅಥವಾ ನಾಲವಾರ ಗ್ರಾಮಗಳ ಸರ್ಕಾರಿ ಪ್ರೌಢಶಾಲೆಗಳಿಗೆ ಪ್ರವೇಶ ಪಡೆಯಲಾಗದೆ ಅನೇಕ ಜನ ಬಡ ವಿದ್ಯಾರ್ಥಿಗಳು ಶಿಕ್ಷಣವನ್ನೇ ಸ್ಥಗಿತಗೊಳಿಸಿದ್ದಾರೆ.
ಇನ್ನೂ ದೂರದ ವಾಡಿ ನಗರಕ್ಕೆ ಪ್ರೌಢ ಶಿಕ್ಷಣಕ್ಕಾಗಿ ನಿತ್ಯ ಖಾಸಗಿ ವಾಹನಗಳಲ್ಲಿ ಪ್ರಯಾಣ ಬೆಳೆಸುವ ಮಕ್ಕಳು ಹೈರಾಣಾಗುತ್ತಿದ್ದಾರೆ. ಶಾಲೆ ಬಿಟ್ಟ ಬಹುತೇಕ ಮಕ್ಕಳು ಕೃಷಿ ಕೂಲಿ ಕೆಲಸಕ್ಕೆ ತೆರಳಿ ಬಾಲಕಾರ್ಮಿಕರಾಗುತ್ತಿದ್ದಾರೆ. ಹೆಣ್ಣು ಮಕ್ಕಳು ಬಾಲ್ಯ ವಿವಾಹ ಪದ್ಧತಿಗೆ ಬಲಿಯಾಗುತ್ತಿದ್ದಾರೆ. ಆದ್ದರಿಂದ ಕೊಂಚೂರು ಗ್ರಾಮಕ್ಕೆ ಪ್ರೌಢಶಾಲೆ ಮಂಜೂರಾದರೆ ನೂರಾರು ಮಕ್ಕಳಿಗೆ ಗ್ರಾಮದಲ್ಲಿಯೇ ಹೆಚ್ಚಿನ ಶಿಕ್ಷಣ ಲಭ್ಯವಾಗುತ್ತದೆ.
ಈ ಕುರಿತು ಸರ್ಕಾರ ಮತ್ತು ಶಿಕ್ಷಣ ಇಲಾಖೆ ಗಂಭೀರವಾಗಿ ಚಿಂತಿಸಿ ಶಾಲೆ ಮಂಜೂರು ಮಾಡಿಸಬೇಕು ಎಂದು ಮನವಿ ಮಾಡಿದ್ದಾರೆ. ಮನವಿ ಸ್ವೀಕರಿಸಿದ ಲಾಡ್ಲಾಪುರ ಗ್ರಾಪಂ ಅಧ್ಯಕ್ಷ ಸಾಬಣ್ಣ ಆನೇಮಿ ಹಾಗೂ ಅಭಿವೃದ್ಧಿ ಅಧಿಕಾರಿ ಗುರುನಾಥರೆಡ್ಡಿ ಹೂವಿನಬಾವಿ ಮನವಿಯನ್ನು ಮೇಲಧಿ ಕಾರಿಗಳಿಗೆ ರವಾನಿಸಿ ಸೂಕ್ತ ಕ್ರಮಕ್ಕೆ ಮುಂದಾಗುವಂತೆ ಕೋರುತ್ತೇವೆ ಎಂದು ಪ್ರತಿಕ್ರಿಯಿಸಿದ್ದಾರೆ. ಗ್ರಾಪಂ ಸದಸ್ಯ ಈರಣ್ಣ ಮಲಕಂಡಿ, ಶಾಂತಕುಮಾರ ಎಣ್ಣಿ ಇದ್ದರು.