Advertisement

ಮಂಡ್ಯದ ಜಲಯೋಧ ಕಾಮೇಗೌಡರಿಗೆ ಲಕ್ಷಣ್ಮ ನಮನ

06:00 AM Jul 31, 2018 | |

ಮಂಡ್ಯ: ಕಾಮೇಗೌಡರ ಜಲಸಂರಕ್ಷಣಾ ಕಾರ್ಯ ಈಗ ದೇಶಾದ್ಯಂತ ಸುದ್ದಿ ಮಾಡುತ್ತಿದೆ.ಬೇಸಿಗೆಯಲ್ಲಿ ತಮ್ಮೂರಿನ ಜನ -ಜಾನುವಾರುಗಳಿಗೆ ಕುಡಿಯುವ ನೀರು ಒದಗಿಸಲು ಸ್ವಂತ ಖರ್ಚಲ್ಲಿ 14 ಚೆಕ್‌ ಡ್ಯಾಂಗಳನ್ನು ನಿರ್ಮಿಸಿದ ಜಲಯೋಧ ಈಗ ಟ್ವೀಟ್‌ ಲೋಕದ ಕಣ್ಮಣಿ.

Advertisement

ಯಾವುದೇ ಫ‌ಲಾಪೇಕ್ಷೆಯಿಲ್ಲದೆ, ಸ್ವಂತ ದುಡಿಮೆಯ 15 ಲಕ್ಷ ರೂ. ವ್ಯಯಿಸಿ ನೀರಿನ ಹೊಂಡಗಳನ್ನು ರಚಿಸಿದ
ಮಂಡ್ಯದ ಮಳವಳ್ಳಿಯ ದಾಸನದೊಡ್ಡಿ ಗ್ರಾಮದ ಈ ಕುರಿಗಾಹಿಯನ್ನು ಹಿರಿಯ ಕ್ರಿಕೆಟಿಗ ವಿವಿಎಸ್‌ ಲಕ್ಷ್ಮಣ್‌
ಗುರುತಿಸಿದ್ದಾರೆ. ಜಲಸಂರಕ್ಷಣೆ ಮಾಡುತ್ತಿರುವ ಕಾಮೇಗೌಡರಿಗೆ ಪ್ರಣಾಮಗಳು ಎಂದು ಲಕ್ಷ್ಮಣ್‌ ಶ್ಲಾಘಿಸಿ ಟ್ವೀಟ್‌ ಮಾಡಿದ್ದಾರೆ.

ಕಾಮೇಗೌಡರ ಜನೋಪಯೋಗಿ ಕಾರ್ಯಕ್ಕೆ ಈ ಹಿಂದೆಯೇ ಹತ್ತು ಹಲವು ಪ್ರಶಸ್ತಿಗಳು ಅವರನ್ನು ಹುಡುಕಿಕೊಂಡು ಬಂದಿದ್ದವು. ರಾಜ್ಯದ ಜನರಿಗೆ ಇವರ ಕಾರ್ಯ ಪರಿಚಿತವಾಗಿತ್ತು. ಇದೀಗ ವಿ.ವಿ.ಎಸ್‌. ಲಕ್ಷ್ಮಣ್‌ರಂತಹ ಕ್ರಿಕೆಟ್‌ ದಿಗ್ಗಜರ ಟ್ವೀಟ್‌ನಿಂದಾಗಿ ಕಾಮೇಗೌಡರ ಖ್ಯಾತಿ ರಾಷ್ಟ್ರ ಮಟ್ಟಕ್ಕೆ ಪಸರಿಸಿದೆ.

ಕಾಮೇಗೌಡರ ಪರಿಚಯ: ಪರಿಸರ ಸಂರಕ್ಷಣೆಯಲ್ಲಿ ಸಾವಿರಾರು ಗಿಡಗಳನ್ನು ನೆಟ್ಟು ಪೋಷಣೆಯೊಂದಿಗೆ
ಅಂತರ್ಜಲ ವೃದ್ಧಿಗಾಗಿ 14 ಚೆಕ್‌ ಡ್ಯಾಂಗಳನ್ನು ನಿರ್ಮಿಸಿದ ದಾಸನದೊಡ್ಡಿ ಗ್ರಾಮದ ಕಲ್ಮೆನೆ ಕಾಮೇಗೌಡರ ಸಾಧನೆ ದೇಶಕ್ಕೆ ಮಾದರಿಯಾಗಿದೆ.

ತಾಲೂಕಿನ ದಾಸನದೊಡ್ಡಿ ಕಾಮೇಗೌಡರು ತಮ್ಮ 80ರ ಇಳಿ ವಯಸ್ಸಿನಲ್ಲೂ ಸಹ ಕಳೆದ 50 ವರ್ಷಗಳಿಂದ
ಪಾಲಿಸಿಕೊಂಡ ಬಂದ ಪರಿಸರ ಸಂರಕ್ಷಣೆ ಹಾಗೂ ಅಂತರ್ಜಲ ವೃದ್ಧಿಯ ಕಾರ್ಯಕ್ರಮಗಳನ್ನು ಯಾರ ಸಹಾಯ ಮತ್ತು ನೆರವಿಲ್ಲದೇ ಏಕಾಂಗಿಯಾಗಿಯೇ ಮುಂದುವರಿಸಿಕೊಂಡು ಬಂದು ಪರಿಸರ ಬೆಳವಣಿಗೆಗೆ ಹೊಸ ಅಧ್ಯಾಯವನ್ನೇ ಸೃಷ್ಟಿ ಮಾಡಿದ್ದಾರೆ.

Advertisement

ಕಾಮೇಗೌಡರು ಮಾಡುವ ಸಾಮಾಜಿಕ ಸೇವೆಗೆ ವೃದ್ಧಾಪ್ಯ ಅಡ್ಡಿಯಾಗಿಲ್ಲ. ಸಮಾಜ ಸೇವೆಯೇ ದೇಶ ಸೇವೆ ಎಂದು ಭಾವಿಸಿ ಕಾಯಕ ಮಾಡುವ ಇವರು,ದಾಸನದೊಡ್ಡಿ ನೀಲಿವೆಂಕಟೆಗೌಡರ 10 ಮಕ್ಕಳಲ್ಲಿ ಕೊನೆಯ ಮಗ. ಪತ್ನಿ ಕೆಂಪಮ್ಮ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಇಬ್ಬರು ಮಕ್ಕಳಿಗೆ ಪಿತ್ರಾರ್ಜಿತವಾಗಿ ಬಂದ ಎರಡು ಎಕರೆ ಜಮೀನನ್ನು ಹಂಚಿ ತಾವು ನಿರಾಧಾರಿಗಳಾಗಿ ಮಕ್ಕಳ ಮನೆಯಲ್ಲೇ ಆಶ್ರಯ ಪಡೆದಿದ್ದಾರೆ. ಸರ್ಕಾರದಿಂದ ಮಾಸಿಕ ಪಿಂಚಣಿ ಬರುತ್ತದೆ. ಈ ಹಣದಿಂದಲೇ ಸಸಿಗಳ ಖರೀದಿಸಿ ನೆಡುವುದು, ಪೋಷಣೆ ಮಾಡುವುದೇ ಇವರ ಕಾಯಕವಾಗಿದೆ.

ಲಕ್ಷ್ಮಣ್‌ ಟ್ವೀಟ್‌ನಲ್ಲೇನಿದೆ?
ಕರ್ನಾಟಕದ ಮಂಡ್ಯ ಜಿಲ್ಲೆಯ 82 ವರ್ಷದ ಕಾಮೇಗೌಡರು ಬೇಸಿಗೆಯಲ್ಲೂ ತುಂಬಿರುವಂತಹ 14 ನೀರು ಹೊಂಡ
ಗಳನ್ನು ನಿರ್ಮಿಸಿದ್ದಾರೆ. ಸ್ವತಃ ತಾವೇ ಇದರ ನಿರ್ವಹಣೆಯನ್ನೂ ಮಾಡುತ್ತಿದ್ದು, ಇದಕ್ಕಾಗಿ ತಾವು ಗಳಿಸಿದ 15 ಲಕ್ಷ ರೂ. ವ್ಯಯಿಸಿದ್ದಾರೆ. ಇವರಿಗೆ ಪ್ರಣಾಮಗಳು

ಉಡುಪಿ ಶಿಕ್ಷಕರನ್ನೂ ಶ್ಲಾಘಿಸಿದ್ದ ಕ್ರಿಕೆಟಿಗ
ಸಾಮಾಜಿಕ ಜಾಲತಾಣ ಟ್ವೀಟರ್‌ ಅನ್ನು ಕ್ರಿಕೆಟಿಗ ವಿವಿಎಸ್‌ ಲಕ್ಷ್ಮಣ್‌ ಉತ್ತಮ ಕಾರ್ಯಕ್ಕಾಗಿ ಬಳಸುತ್ತಿದ್ದಾರೆ. ದೇಶದ ವಿವಿಧ ಮೂಲೆಗಳ ತೆರೆಮರೆಯ ಸಾಧಕರ ಕಾರ್ಯಗಳನ್ನು ಗುರುತಿಸಿ, ಅವರಿಗೆ ಅಭಿನಂದನೆ ಸಲ್ಲಿಸಿ ಲಕ್ಷ್ಮಣ್‌
ಆಗಾಗ್ಗೆ ಟ್ವೀಟ್‌ ಮಾಡುತ್ತಿರುತ್ತಾರೆ. ದಿನಗಳ ಹಿಂದಷ್ಟೇ, ಇನ್ನೊಬ್ಬ ಕನ್ನಡಿಗರನ್ನು ಗುರುತಿಸಿದ್ದರು ಲಕ್ಷ್ಮಣ್‌. ಮಕ್ಕಳು ಶಾಲೆ ತೊರೆಯುವುದನ್ನು ತಪ್ಪಿಸಲು, ಸ್ವತಃ ನಿತ್ಯ ಬಸ್‌ ಚಲಾಯಿಸಿಕೊಂಡು ಮಕ್ಕಳನ್ನು ಶಾಲೆಗೆ ಕರೆತರುವ ಉಡುಪಿ
ಜಿಲ್ಲೆಯ ಬ್ರಹ್ಮಾವರದ ಬರಾಲಿ ಗ್ರಾಮದ ಶಿಕ್ಷಕ ರಾಜಾರಾಮ್‌ ಅವರನ್ನು ತಮ್ಮ ಟ್ವೀಟ್‌ ಮೂಲಕ ಲಕ್ಷ್ಮಣ್‌ ಅಭಿನಂದಿಸಿದ್ದರು.

– ಮಂಡ್ಯ ಮಂಜುನಾಥ್‌

Advertisement

Udayavani is now on Telegram. Click here to join our channel and stay updated with the latest news.

Next