ಚಿಕ್ಕಬಳ್ಳಾಪುರ: ಯಾವುದೇ ನೆಟ್‌ವರ್ಕ್ ಬಳಸಿ ವಿವಿಪ್ಯಾಟ್ ಸಾಧನ ನಿರ್ವಹಣೆ ಸಾಧ್ಯವಾಗುವುದಿಲ್ಲ. ಇದು ಸ್ವತಂತ್ರವಾಗಿ ಕೆಲಸ ನಿರ್ವಹಿಸಲಿದೆ. ಮತದಾರರು, ತಮ್ಮ ಆಯ್ಕೆಯ ಅಭ್ಯರ್ಥಿಗೆ ಮತದಾನ ಮಾಡಿ ಅದನ್ನು ಖಚಿತಪಡಿಸಿಕೊಳ್ಳಬಹುದಾಗಿದ್ದು, ಇವಿಎಂ ಹಾಗೂ ವಿವಿಪ್ಯಾಟ್ ಯಂತ್ರಗಳ ಬಗ್ಗೆ ಸಾರ್ವಜನಿಕರು ಆತಂಕ ಅಥವಾ ಅನುಮಾನಪಡಬೇಕಾಗಿಲ್ಲ ಎಂದು ಚಿಕ್ಕಬಳ್ಳಾಪುರ ಉಪ ವಿಭಾಗಾಧಿಕಾರಿ ಬಿ.ಶಿವಸ್ವಾಮಿ ತಿಳಿಸಿದರು.
ನಗರದ ಜಿಲ್ಲಾಡಳಿತ ಭವನದಲ್ಲಿ ಗುರುವಾರ ಲೋಕಸಭಾ ಚುನಾವಣೆ ಘೋಷಣೆಯಾದ ಹಿನ್ನೆಲೆಯಲ್ಲಿ ಜಿಲ್ಲೆಯ ದೃಶ್ಯ ಹಾಗೂ ಮುದ್ರಣ ಮಾಧ್ಯಮದ ಪತ್ರಕರ್ತರೊಂದಿಗೆ ಹಮ್ಮಿಕೊಂಡಿದ್ದ ಇವಿಎಂ ಹಾಗೂ ವಿವಿಪ್ಯಾಟ್ ಕುರಿತಾದ ಸಂವಾದ ಹಾಗೂ ಪ್ರಾತ್ಯಕ್ಷಿತೆ ಉದ್ದೇಶಿಸಿ ಮಾತನಾಡಿದ ಅವರು, ಕಳೆದ ವಿಧಾನಸಭಾ ಚುನಾವಣೆಯಿಂದ ಈಚೆಗೆ ರಾಜ್ಯದಲ್ಲಿ ವಿವಿಪ್ಯಾಟ್ ಬಳಸಲಾಗುತ್ತಿದ್ದು, ಮತದಾರರು ತಾವು ಚಲಾಯಿಸಿದ ಅಭ್ಯರ್ಥಿಗೆ ಮತ ಬಿದ್ದಿರುವುದನ್ನು ವಿವಿಪ್ಯಾಟ್ ಖಚಿತಪಡಿಸಲಿದೆ ಎಂದರು.
ದೇಶದ್ಯಾಂತ ವಿವಿಪ್ಯಾಟ್ ಬಳಕೆಗೆ ಉತ್ತಮ ಪ್ರತಿಕ್ರಿಯೆ ಇದ್ದು ಮತದಾರರು, ರಾಜಕೀಯ ಪಕ್ಷಗಳು ಮುಖಂಡರು ಸೇರಿದಂತೆ ಅನುಮಾನ ಪಡುವ ಅಗತ್ಯವಿಲ್ಲ. ಚುನಾವಣೆಯನ್ನು ಜಿಲ್ಲಾಡಳಿತ ಮುಕ್ತ ಹಾಗೂ ನ್ಯಾಯ ಸಮ್ಮತವಾಗಿ ನಡೆಸಲಿದೆ. ಜಿಲ್ಲಾದ್ಯಂತ ಇವಿಎಂ ಹಾಗೂ ವಿವಿಪ್ಯಾಟ್ ಬಳಕೆ ಕುರಿತು ಅರಿವು ಮೂಡಿಸಲಾಗುತ್ತಿದೆ ಎಂದರು.
ಮೂರು ವಿದ್ಯುನ್ಮಾನ ಯಂತ್ರ: ಪ್ರತಿ ಮತಗಟ್ಟೆಯಲ್ಲಿ ಮತದಾನಕ್ಕಾಗಿ ಮೂರು ವಿದ್ಯುನ್ಮಾನ ಯಂತ್ರಗಳನ್ನು ಬಳಸಲಾಗುತ್ತದೆ. ಕಂಟ್ರೋಲ್ ಯುನಿಟ್, ಬ್ಯಾಲೆಟ್ ಯುನಿಟ್ ಮತ್ತು ವಿವಿಪ್ಯಾಟ್ ಬಳಸಲಾಗುತ್ತದೆ. ಕಂಟ್ರೋಲ್ ಯುನಿಟ್‌ನಲ್ಲಿ ನಾಲ್ಕು ಭಾಗಗಳಿದ್ದು, ಡಿಸ್‌ಪ್ಲೇ ಸೆಕ್ಷನ್, ಬ್ಯಾಟರಿ ಸೆಕ್ಷನ್, ರಿಸಲ್ಟ್ ಸೆಕ್ಷನ್ ಮತ್ತು ಬ್ಯಾಲೆಟ್ ಸೆಕ್ಷನ್ ಎಂದು ಇರುತ್ತದೆ. ಕಂಟ್ರೋಲ್ ಯುನಿಟ್‌ಗೆ ಬ್ಯಾಲೆಟ್ ಯುನಿಟ್ ಮತ್ತು ವಿವಿಪ್ಯಾಟ್‌ನ್ನು ಅಳವಡಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.
7 ಸೆಕೆಂಡ್ ಪ್ರದರ್ಶನ: ವಿವಿಪ್ಯಾಟ್ ವಿದ್ಯುನ್ಮಾನ ಮತಯಂತ್ರಕ್ಕೆ ಜೋಡಿಸಿರುವ ಪ್ರಿಂಟರ್‌ನಂತೆ ಕಾರ್ಯ ನಿರ್ವಹಿಸುವ ಯಂತ್ರವಾಗಿದೆ. ಮತದಾರರು ಮತದಾನದ ವೇಳೆ ತಾವು ಯಾವ ಅಭ್ಯರ್ಥಿಗೆ ಅಥವಾ ಚಿಹ್ನೆಯ ಪರವಾಗಿ ಮತ ಚಲಾಯಿಸಿದ್ದಾರೆ ಎಂಬುದನ್ನು ಈ ಸಾಧನ ಮೂಲಕ ಖಚಿತಪಡಿಸಿಕೊಳ್ಳಬಹುದಾಗಿದೆ.
ಮತದಾರರು ಇವಿಎಂನಲ್ಲಿರುವ ಮತದಾನದ ಬಟನ್ ಒತ್ತಿದ ತಕ್ಷಣ ವಿವಿಪ್ಯಾಟ್‌ಗೆ ಇದರ ಸಂದೇಶ ರವಾನೆಯಾಗಿ ಸ್ವಯಂ ಚಾಲಿತವಾಗಿ ಮತದಾನ ಮಾಡಿದ ಚಿಹ್ನೆಯ ಮತ್ತಿತರೆ ವಿವರವುಳ್ಳ ಪೇಪರ್ ಚೀಟಿಯೊಂದು ಮುದ್ರಿತವಾಗಿ ಪ್ರದರ್ಶನಗೊಳ್ಳುತ್ತದೆ. ಈ ಚೀಟಿ 7 ಸೆಕೆಂಡ್‌ಗಳ ಕಾಲ ಮತದಾರರಿಗೆ ಕಾಣಿಸಿಕೊಂಡ ಬಳಿಕ ತುಂಡಾಗಿ ವಿವಿಪ್ಯಾಟ್‌ನಲ್ಲಿ ಸೀಲ್ ಮಾಡಿರುವ ಬಾಕ್ಸ್‌ನಲ್ಲಿ ಬೀಳುತ್ತದೆ ಎಂದರು.
ತರಬೇತಿ ಕಾರ್ಯಕ್ರಮದಲ್ಲಿ ಜಿಲ್ಲಾ ಉದ್ಯೋಗಾಧಿಕಾರಿ ಪ್ರಸಾದ್, ಜಿಲ್ಲಾ ಜವಳಿ ಮತ್ತು ಕೈ ಮಗ್ಗ ಇಲಾಖೆ ಉಪ ನಿರ್ದೇಶಕರಾದ ಶಿವಕುಮಾರ್ ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು, ಜಿಲ್ಲಾ ಚುನಾವಣಾ ಶಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.