Advertisement
ಹೌದು, ದೇಶದಲ್ಲಿನ ಪ್ರಾಮಾಣಿಕ ತೆರಿಗೆ ಪಾವತಿದಾರರಿಗೆ ಯಾವುದೇ ರೀತಿಯ ತೊಂದರೆ ಉಂಟಾಗಬಾರದು ಎನ್ನುವ ಪ್ರಧಾನಿ ಮೋದಿ ಆಶಯಕ್ಕೆ ಪೂರಕವಾಗಿ ಇಂಥ ಸಲಹೆಗಳನ್ನು ಆರ್ಥಿಕ ಸಮೀಕ್ಷಾ ವರದಿಯಲ್ಲಿ ನೀಡಲಾಗಿದೆ. ಅದರಂತೆ, ದೇಶದ ಪ್ರತಿ ಜಿಲ್ಲೆಯ ಟಾಪ್ 10 ತೆರಿಗೆದಾರರನ್ನು ಆಯ್ಕೆ ಮಾಡಿ, ಅವರಿಗೆ ವಿಶೇಷ ಗೌರವ ಸಲ್ಲಿಸಲು ಸಲಹೆ ನೀಡಲಾಗಿದೆ.
Related Articles
Advertisement
ಹೂಡಿಕೆ ಪ್ರಮಾಣ ಏರಿಕೆ: 2011-12ನೇ ವಿತ್ತೀಯ ವರ್ಷದಿಂದ ಬಂಡವಾಳ ಹೂಡಿಕೆ ಪ್ರಮಾಣ ತಗ್ಗಿರುವಂತೆಯೇ ಗ್ರಾಹಕರಿಂದ ವಿವಿಧ ಅಂಶಗಳಿಗೆ ಸಂಬಂಧಿಸಿದ ಬೇಡಿಕೆ ವೃದ್ಧಿ ಮತ್ತು ಬ್ಯಾಂಕ್‌ಗಳು ಹೆಚ್ಚಿನ ಪ್ರಮಾಣದಲ್ಲಿ ಸಾಲ ನೀಡಿಕೆ ಹೆಚ್ಚಳದಿಂದ ಹೂಡಿಕೆ ಪ್ರಮಾಣ ವೃದ್ಧಿಯಾಗಲಿದೆ ಎಂದು ನಿರೀಕ್ಷಿಸಲಾಗಿದೆ.
ತೆರಿಗೆ ಸಂಗ್ರಹದ ಮೇಲೆ ಪ್ರಭಾವ: ಅರ್ಥ ವ್ಯವಸ್ಥೆಯ ಬೆಳವಣಿಗೆ ನಿಧಾನಗತಿಯಲ್ಲಿರುವುದರಿಂದ ತೆರಿಗೆ ಸಂಗ್ರಹದ ಮೇಲೆ ಪ್ರಭಾವ ಬೀರಿದೆ. ಕೃಷಿ ಕ್ಷೇತ್ರದ ಮೇಲೆ ಸರಕಾರ ಹೆಚ್ಚಿನ ವೆಚ್ಚ ಮಾಡುವುದರಿಂದ ಅರ್ಥ ವ್ಯವಸ್ಥೆಯ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ ಎಂದು ಸಮೀಕ್ಷೆ ಅಭಿಪ್ರಾಯಪಟ್ಟಿದೆ.
2019-20ರ ಆರ್ಥಿಕ ಸಮೀಕ್ಷೆ ಮುಖ್ಯಾಂಶಗಳು
• ಆಮದು ಪ್ರಮಾಣ ಶೇ.15.4ರಷ್ಟು, ರಫ್ತು ಪ್ರಮಾಣ ಶೇ.12.5 ಹೆಚ್ಚಳ ನಿರೀಕ್ಷೆ
• 283.4 ದಶಲಕ್ಷ ಟನ್ ಆಹಾರ ಧಾನ್ಯಗಳ ಉತ್ಪಾದನೆ ನಿರೀಕ್ಷೆ
• 422.2 ಶತಕೋಟಿ ಡಾಲರ್ ವಿದೇಶಿ ವಿನಿಮಯ ಮೀಸಲು ನಿಧಿ
• ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ (ಎಂಎಸ್‌ಎಂಇ) ಉದ್ದಿಮೆಗಳ ಬೆಳವಣಿಗೆ, ಉದ್ಯೋಗ ಸೃಷ್ಟಿ ಮತ್ತು ಗುಣಮಟ್ಟದ ಉತ್ಪಾದನೆಗೆ ಆದ್ಯತೆ.
• ಆರೋಗ್ಯ ಕ್ಷೇತ್ರದಲ್ಲಿ ಹೂಡಿಕೆ, ಇಳಿ ವಯಸ್ಸಿನ ಜನರಿಗಾಗಿ ನೀತಿ, ಹಂತ ಹಂತವಾಗಿ ನಿವೃತ್ತಿ ವಯಸ್ಸು ಏರಿಕೆ.
• ಕೆಳ ಹಂತದ ನ್ಯಾಯಾಲಯಗಳ ಮಟ್ಟದಲ್ಲಿ ವ್ಯಾಪಕ ಸುಧಾರಣೆ, ಸರಿಯಾದ ರೀತಿಯಲ್ಲಿ ಕಾರ್ಮಿಕ ಕ್ಷೇತ್ರದ ಸುಧಾರಣೆ.
• 2019-20ರಲ್ಲಿ ಶೇ.7 ಜಿಡಿಪಿ ದರ ನಿರೀಕ್ಷೆ. ಕಳೆದ ಬಾರಿ ಇದು ಶೇ.6.8 ಇತ್ತು
• ಬಂಡವಾಳ ಹೂಡಿಕೆ ಮತ್ತು ಬೇಡಿಕೆಗೆ ಅನುಗುಣವಾಗಿ ಅರ್ಥ ವ್ಯವಸ್ಥೆ ಬೆಳವಣಿಗೆ
• 2024-25ನೇ ಸಾಲಿನಲ್ಲಿ 5 ಲಕ್ಷಕೋಟಿ ಡಾಲರ್ ಆರ್ಥಿಕತೆಯ ಗುರಿ ಸಾಧಿಸಲು ಶೇ.8 ದರದ ಜಿಡಿಪಿ ಕಾಯ್ದುಕೊಳ್ಳಬೇಕಾದ ಅನಿವಾರ್ಯತೆ
• ಕಚ್ಚಾ ತೈಲದ ಬೆಲೆ ಇಳಿಕೆ ನಿರೀಕ್ಷೆ.
• ವಿತ್ತೀಯ ಕೊರತೆ ಪ್ರಮಾಣ 2018-19ರಲ್ಲಿ ಶೇ.5.8. ಹಿಂದಿನ ವಿತ್ತ ವರ್ಷದಲ್ಲಿ ಶೇ.6.4ರಷ್ಟು ಇತ್ತು.
ಸಬ್ಸಿಡಿ ಪ್ರಮಾಣ ನಿಯಂತ್ರಣ
ದೇಶದಲ್ಲಿ ಹೆಚ್ಚಾಗುತ್ತಿರುವ ಆಹಾರ ಸಬ್ಸಿಡಿ ಪ್ರಮಾಣ ನಿಯಂತ್ರಿಸ ಬೇಕು ಎಂದು ಸಮೀಕ್ಷೆ ಸಲಹೆ ಮಾಡಿದೆ. 2019-20ನೇ ಸಾಲಿನಲ್ಲಿ ಅದರ ಪ್ರಮಾಣ 1,84,220 ಕೋಟಿ ರೂ. ಆಗಿದ್ದರೆ, ಕಳೆದ ವರ್ಷ 1,71,298 ಕೋಟಿ ರೂ. ಆಗಿತ್ತು. ಉನ್ನತ ಮಟ್ಟದ ತಂತ್ರಜ್ಞಾನ ಬಳಕೆ ಮಾಡಿ ಸರಿಯಾದ ರೀತಿಯಲ್ಲಿ ಆಹಾರ ಬಳಕೆ, ಸಬ್ಸಿಡಿ ನೀಡುವಿಕೆ ಬಗ್ಗೆ ಗಮನಹರಿಸಬೇಕಾಗಿದೆ. ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ ಯಡಿ 80 ಕೋಟಿಗೂ ಅಧಿಕ ಮಂದಿಗೆ ಆಹಾರ ಧಾನ್ಯಗಳನ್ನು 1 ರೂ.ಗಳಿಂದ 3 ರೂ.ಗಳ ವರೆಗೆ ನೀಡುತ್ತಿದೆ. ಆದರೆ ಗೋಧಿಯ ಉತ್ಪಾದನಾ ವೆಚ್ಚ 2013-14ನೇ ವರ್ಷದಲ್ಲಿ ಪ್ರತಿ ಕೆಜಿಗೆ 19 ರೂ. ಇದ್ದದ್ದು 2018-19ನೇ ಸಾಲಿನಲ್ಲಿ 24 ರೂ.ಗೆ ಏರಿಕೆಯಾಗಿದೆ. ಅಕ್ಕಿಯ ದರ ಕೂಡ 24 ರೂ.ಗಳಿಂದ 37.72 ರೂ.ಗಳಿಗೆ ಏರಿಕೆಯಾಗಿದೆ.
ಕೃಷಿ ಕ್ಷೇತ್ರದಲ್ಲಿ ನೀರಿನ ಬಳಕೆ ಮಿತವ್ಯಯಿಯಾಗಬೇಕು
ಪ್ರಸಕ್ತ ಸಾಲಿನಲ್ಲಿ ಮುಂಗಾರು ನಿರೀಕ್ಷಿತ ಪ್ರಮಾಣದಲ್ಲಿ ಇರಲಾರದು ಎಂದು ಮುನ್ಸೂಚನೆ ನೀಡಿರುವಂತೆಯೇ ಸಮೀಕ್ಷೆಯಲ್ಲಿ ನೀರಿನ ಮಿತವ್ಯಯದ ಬಗ್ಗೆ ಪ್ರಸ್ತಾಪಿಸಲಾಗಿದೆ. 2050ರ ವೇಳೆಗೆ ವಿಶ್ವದಲ್ಲಿ ನೀರಿನ ಕೊರತೆ ಉಂಟಾಗಲಿದೆ ಎಂಬ ಭೀತಿ ಇದೆ. ಅದರ ಕೇಂದ್ರ ಸ್ಥಾನವೇ ಭಾರತವಾಗಲಿದೆ ಎಂಬ ಅಂಜಿಕೆ ಇದೆ. ಹೀಗಾಗಿ ಭೂಮಿಯಲ್ಲಿ ನೀರನ್ನು ಮಿತ ವ್ಯಯವಾಗಿ ಬಳಕೆ ಮಾಡಬೇಕಾಗಿದೆ. ಹೀಗಾಗಿ ರೈತರು ಕಡಿಮೆ ಪ್ರಮಾಣದಲ್ಲಿ ನೀರನ್ನು ಬಳಕೆ ಮಾಡಿದರೆ ಪ್ರೋತ್ಸಾಹದಾಯಕ ಕ್ರಮಗಳನ್ನು ಜಾರಿ ಮಾಡಬೇಕು. ಮೈಕ್ರೋ ಇರಿಗೇಷನ್ ಅನ್ನು ಅಳವಡಿಸಿಕೊಳ್ಳಬೇಕಾಗಿದೆ. ಜತೆಗೆ ಶೂನ್ಯ ಬಜೆಟ್ ಸಹಜ ಕೃಷಿ (ಝೆಡ್‌ಬಿಎನ್‌ಎಫ್)ಗೆ ಸಮೀಕ್ಷೆಯಲ್ಲಿ ಸಲಹೆ ಮಾಡಿದೆ. ಈ ಮೂಲಕ ಸುಭಾಷ್ ಪಾಳೇಕರ್ ಪ್ರಸ್ತಾಪಿಸಿದ್ದ ಸಹಜ ಕೃಷಿಯನ್ನು ಅಳವಡಿಸಲು ಪರೋಕ್ಷವಾಗಿ ಸಲಹೆ ಮಾಡಲಾಗಿದೆ.
ತೆರಿಗೆ ತಪ್ಪಿಸದಿರಲು ಧರ್ಮ ಸೂತ್ರ
ಸರಕಾರದ ಬೊಕ್ಕಸಕ್ಕೆ ಹೆಚ್ಚಿನ ಆದಾಯ ತಪ್ಪಿಸುವ ತೆರಿಗೆ ವಂಚಕರನ್ನು ತೆರಿಗೆ ಪಾವತಿಸುವಂತೆ ಮಾಡಲು ಹಿಂದೂ, ಕ್ರಿಶ್ಚಿಯನ್, ಮುಸ್ಲಿಂ ಧರ್ಮಗಳ ಸಾರಗಳನ್ನು ಮುಂದಿಡಲು ಸಲಹೆ ಮಾಡಲಾಗಿದೆ. ಹಿಂದೂ ಧರ್ಮದಲ್ಲಿ: ಪಡೆದುಕೊಂಡ ಸಾಲವನ್ನು ತೀರಿಸದೇ ಇರುವುದು ಪಾಪ ಮತ್ತು ಅಪರಾಧ. ಸಾಲ ತೀರಿಸದೇ ವ್ಯಕ್ತಿ ಅಸುನೀಗಿದರೆ, ಆತನ ಆತ್ಮಕ್ಕೆ ಶಾಂತಿ ಸಿಗದೆ ಎಲ್ಲೆಲ್ಲೂ ಅಲೆದಾಡಬೇಕಾಗುತ್ತದೆ. ಆತನ ಪುತ್ರ ಅದನ್ನು ತೀರಿಸುವ ಹೊಣೆ ಹೊಂದಿದ್ದಾನೆ. ಕ್ರಿಶ್ಚಿಯನ್ ಧರ್ಮದಲ್ಲಿ: ಜೀವನದಲ್ಲಿ ಒಬ್ಬರನ್ನೊಬ್ಬರು ಪ್ರೀತಿಸುವ ವಿಚಾರದಲ್ಲಿ ಮಾತ್ರ ಸಾಲಗಾರರಾಗಿದ್ದರೆ ಸಾಕು. ಇದಕ್ಕಿಂತ ಹೆಚ್ಚಾಗಿ ಜೀವನದಲ್ಲಿ ಬೇರೆ ರೀತಿಯ ಸಾಲ ಹೆಚ್ಚಿನ ಪ್ರಮಾಣದಲ್ಲಿ ಉಳಿಯುವಂತೆ ಮಾಡಬೇಡಿ. ಸಾಲ ತೀರಿಸದೇ ಇರುವವರು ದುಷ್ಟರು. ಇಸ್ಲಾಂ ಧರ್ಮದಲ್ಲಿ: ಅಲ್ಲಾಹುವೇ ಸಾಲವೆಂಬ ಮಹಾಪಾತಕದಿಂದ ಹೊರ ಬರಲು ಬಯಸುವೆ. ಸಾಲ ಮರು ಪಾವತಿಸದೆ ಆತನಿಗೆ ಸ್ವರ್ಗ ಪ್ರಾಪ್ತಿಯಾಗದು. ಅದನ್ನು ವಾಪಸ್ ಮಾಡಲು ಆತನ ಸಂಪತ್ತನ್ನು ಎಲ್ಲವನ್ನೂ ಬಳಕೆ ಮಾಡಬೇಕು. ಅದೂ ಸಾಲದಿದ್ದರೆ, ವಾರಸುದಾರರು ಸ್ವ ಇಚ್ಛೆಯಿಂದ ಅದನ್ನು ಮರು ಪಾವತಿ ಮಾಡಬೇಕು.
ಇಂದು ಕೇಂದ್ರ ಬಜೆಟ್ ಮಂಡನೆ
ಹೊಸದಿಲ್ಲಿ: ದೇಶದ ಮೊದಲ ಪೂರ್ಣ ಪ್ರಮಾಣದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ 2ನೇ ಅವಧಿಯ ಸರಕಾರದ ಮೊದಲ ಬಜೆಟ್ ಅನ್ನು ಶುಕ್ರವಾರ ಸಂಸತ್‌ನಲ್ಲಿ ಮಂಡಿಸಲಿದ್ದಾರೆ. ಮೋದಿ ಸರಕಾರದ ಮುಂದಿನ ಐದು ವರ್ಷದ ಅಭಿವೃದ್ಧಿಯ ನೋಟ ಈ ಬಜೆಟ್‌ನಲ್ಲಿ ಇರಲಿದೆ ಎಂಬ ನಿರೀಕ್ಷೆ ಇದೆ. ಮಧ್ಯಮ ವರ್ಗಕ್ಕೆ ನೆರವಾಗುವ ನಿಟ್ಟಿನಲ್ಲಿ ಆದಾಯ ತೆರಿಗೆ ಮಿತಿ ಹೆಚ್ಚಳ, ಕೈಗಾರಿಕೆಗಳಿಗೆ ಪ್ರೋತ್ಸಾಹ, ಉದ್ಯೋಗ ವೃದ್ಧಿಗೆ ಕ್ರಮ ಸಹಿತ ಹಲವಾರು ಹೊಸ ಯೋಜನೆ ಗಳನ್ನು ಘೋಷಿಸಲಾಗುತ್ತದೆ ಎಂಬ ನಿರೀಕ್ಷೆ ಹೊಂದಲಾಗಿದೆ.
ಉದ್ಯೋಗ ಸೃಷ್ಟಿಗೆ ಆದ್ಯತೆ
ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ದಿಮೆ(ಎಂಎಸ್‌ಎಂಇ)ಗಳ ಬೆಳವಣಿಗೆ, ಉದ್ಯೋಗ ಸೃಷ್ಟಿ, ಗುಣಮಟ್ಟದ ಉತ್ಪಾದನೆಯ ಬಗ್ಗೆ ಹೆಚ್ಚಿನ ಗಮನ ನೀಡಬೇಕಾಗಿದೆ. ಎಂಎಸ್‌ಎಂಇಗಳ ಬೆಳವಣಿಗೆ ಹೆಚ್ಚು ಉತ್ತೇಜನ ನೀಡಿ ಅವುಗಳು ಬೃಹತ್ ಉದ್ದಿಮೆಗಳಾಗುವಂತೆ ನೋಡಿಕೊಳ್ಳಬೇಕಾಗಿದೆ.