ಹೊಸದಿಲ್ಲಿ : 3,600 ಕೋಟಿ ರೂ. ವಿವಿಐಪಿ ಹೆಲಿಕಾಪ್ಟರ್ ಹಗರಣದಲ್ಲಿನ ರಕ್ಷಣಾ ಇಲಾಖೆಯ ಏಜಂಟ್ ಎನ್ನಲಾಗಿರುವ ಸುಶೇನ್ ಮೋಹನ್ ಗುಪ್ತಾ ನನ್ನು ದಿಲ್ಲಿ ನ್ಯಾಯಾಲಯ ಇಂದು ನಾಲ್ಕು ದಿನಗಳ ಅವಧಿಗೆ ಜಾರಿ ನಿರ್ದೇಶನಾಲಯದ (ED) ಕಸ್ಟಡಿಗೆ ಒಪ್ಪಿಸಿತು.
ಜಾರಿ ನಿರ್ದೇಶನಾಲಯ ಇಂದು ಗುಪ್ತಾನನ್ನು ವಿಶೇಷ ನ್ಯಾಯಾಧೀಶ ಅರವಿಂದ ಕುಮಾರ್ ಅವರ ಮುಂದೆ ಹಾಜರುಪಡಿಸಿ ಹದಿನಾಲ್ಕು ದಿನಗಳ ಕಸ್ಟಡಿಯನ್ನು ಕೋರಿತು.
ಗುಪ್ತಾನನ್ನು ಜಾರಿ ನಿರ್ದೇಶನಲಾಯ ಹಣ ಅಕ್ರಮ ತಡೆ ಕಾಯಿದೆಯಡಿ (ಪಿಎಂಎಲ್‌ಎ) ಬಂಧಿಸಿತ್ತು.
ಈಚೆಗೆ ಯುಎಇಯಿಂದ ಗಡೀಪಾರಾಗಿ ಇಡಿ ಅಧಿಕಾರಿಗಳಿಂದ ಬಂಧಿಸಲ್ಪಟ್ಟಿದ್ದ ಮತ್ತು ಈಗ ಮಾಫಿ ಸಾಕ್ಷಿದಾರನಾಗಿ ಪರಿವರ್ತಿನಾಗಿರುವ ರಾಜೀವ್ ಸಕ್ಸೇನಾ ತನಿಖೆ ವೇಳೆ ಬಹಿರಂಗ ಪಡಿಸಿದ ಮಾಹಿತಿಯನ್ನು ಅನುಸರಿಸಿ ಗುಪ್ತಾನನ್ನು ಇಡಿ ಅಧಿಕಾರಿಗಳು ಈಚೆಗೆ ಬಂಧಿಸಿದ್ದರು.
ಆಗಸ್ಟಾ ವೆಸ್ಟ್ ಲ್ಯಾಂಡ್ ವಿವಿಐಪಿ ಹೆಲಿಕಾಪ್ಟರ್ ಹಗರಣಕ್ಕೆ ಸಂಬಂಧಿಸಿದ ಲಂಚ ಪಾವತಿಯ ವಿವರಗಳು ಗುಪ್ತಾ ಬಳಿ ಇದೆ ಎಂದು ತನಿಖಾಧಿಕಾರಿಗಳು ಶಂಕಿಸಿದ್ದು ಅದರ ಎಳೆಯನ್ನು ಈಗಿನ್ನು ಹೊರತರಬೇಕಾಗಿದೆ.