Advertisement

ವಿವಿ ತ್ರಿಭಜನೆ ಈ ವರ್ಷವೂ ಅನುಮಾನ

12:23 PM May 06, 2017 | Team Udayavani |

ಬೆಂಗಳೂರು: ಅನುದಾನದ ಕೊರತೆ ಹಾಗೂ ರಾಜ್ಯಸರ್ಕಾರದ ವಿಳಂಬ ಧೋರಣೆಯಿಂದಾಗಿ ಈ ವರ್ಷವೂ ಬೆಂಗಳೂರು ವಿಶ್ವವಿದ್ಯಾಲಯದ ತ್ರಿಭಜನೆ ಫ‌ುಲ್‌ ಡೌಟ್‌. ವಿದ್ಯಾರ್ಥಿಗಳಿಗೆ ಉತ್ಕೃಷ್ಟ ಗುಣಮಟ್ಟದ ಶಿಕ್ಷಣ ನೀಡುವ ಉದ್ದೇಶದಿಂದ ಬೆಂಗಳೂರು ವಿಶ್ವವಿದ್ಯಾಲಯವನ್ನು ವಿಭಾಗಿಸುವ ಯೋಜನೆ ಸುಮಾರು ವರ್ಷದ ಹಿಂದೆಯೇ ಸಿದ್ಧಗೊಂಡಿತ್ತು.

Advertisement

ಈ ಸಂಬಂಧ ಶಿಕ್ಷಣ ತಜ್ಞರ ಸಮಿತಿಯ ವರದಿಯನ್ನು ಪಡೆಯಲಾಗಿತ್ತು. ಕೆಲವರು ಎರಡು ವಿಭಾಗ ಮಾಡುವ ವರದಿ ನೀಡಿದರೆ, ಮತ್ತೆ ಕೆಲವರು ಮೂರು ವಿಭಾಗ ಮಾಡುವ ವರದಿ ಸರ್ಕಾರಕ್ಕೆ ಸಲ್ಲಿಸಿದ್ದರು. ಸಿ.ಟಿ.ರವಿಯವರು ಉನ್ನತ ಶಿಕ್ಷಣ ಸಚಿವರಾಗಿದ್ದಾಗ ಬೆಂವಿವಿ ವಿಭಜನೆಗೆ ವೇಗ ಸಿಕ್ಕಿತ್ತಾದರೂ, ಅಂದಿನ ರಾಜ್ಯಪಾಲರು ಅಂತಿಮ ಅಂಕಿತ ಹಾಕಿರಲಿಲ್ಲ.

ಬೆಂವಿವಿ ತ್ರಿಭಜನೆಗೆ ಸಚಿವ ಸಂಪುಟದ ಒಪ್ಪಿಗೆ ಪಡೆದ ನಂತರ ಈಗಿರುವ ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತೀ ಆವರಣವನ್ನು ಬೆಂಗಳೂರು ವಿವಿಯಾಗಿ ಉಳಿಸಿಕೊಂಡು, ಸೆಂಟ್ರಲ್‌ ಕಾಲೇಜು ಆವರಣವನ್ನು ಕೇಂದ್ರ ವಿವಿ ಹಾಗೂ ಕೋಲಾರ, ಚಿಕ್ಕಬಳ್ಳಾಪುರ ಮೊದಲಾದ ಭಾಗದ ಕಾಲೇಜು ಸೇರಿಕೊಂಡು ಬೆಂಗಳೂರು ಉತ್ತರ ವಿವಿಯಾಗಿ ಮಾಡುವ ಯೋಜನೆ ತಯಾರಾಗಿದೆ.

ಆದರೆ, ರಾಜ್ಯ ಸರ್ಕಾರ ಇದಕ್ಕೆ ಬೇಕಾದ ಅನುದಾನ ಬಿಡುಗಡೆ ಮಾಡಿಲ್ಲ. ಸೂಕ್ತ ಸೌಲಭ್ಯವಿಲ್ಲದೇ ಶೈಕ್ಷಣಿಕ ವರ್ಷದ ತರಗತಿ ನಡೆಸಲು ಅರ್ಜಿ ಆಹ್ವಾನಿಸಲಾಗುತ್ತಿಲ್ಲ. ತ್ರಿಭಜನೆ ಸಂಬಂಧ ರಾಜ್ಯಪತ್ರದಲ್ಲಿ ಪ್ರಕಟಣೆ ಹೊರಡಿಸಬೇಕು. ಇದಕ್ಕೆ ಸಂಬಂಧಿಸಿದ ಸ್ಪಷ್ಟ ಸೂಚನೆ ಮೂರು ವಿವಿಗೂ ನೀಡಬೇಕು. ಸಿಬ್ಬಂದಿ, ಪ್ರಾಧ್ಯಾಪಕರ ನಿಯೋಜನೆಯಾಗಬೇಕು. ಅನುದಾನ ನೀಡದೇ ಇರುವುದರಿಂದ ಎಲ್ಲವೂ ವಿಳಂಬವಾಗುತ್ತಿದೆ.

ಕ್ರಿಯಾ ಯೋಜನೆ ಸಲ್ಲಿಕೆ: ಬೆಂಗಳೂರು ಕೇಂದ್ರ ವಿವಿಯ ಆಡಳಿತ ವ್ಯವಹಾರಕ್ಕಾಗಿ ನೇಮಿಸಿದ್ದ ವಿಶೇಷಾಧಿಕಾರಿ ಡಾ. ಜಾಫೆಟ್‌ ಹಾಗೂ ಬೆಂಗಳೂರು ಉತ್ತರ ವಿವಿಯ ವಿಶೇಷಾಧಿಕಾರಿ ಡಾ.ಟಿ.ಡಿ.ಕೆಂಪರಾಜು ಅವರ ತಂಡವು, ಪ್ರತ್ಯೇಕವಾಗಿ ಎರಡು ವಿವಿಯ ಆರಂಭಕ್ಕೆ ಬೇಕಾದ ಸೌಲಭ್ಯ, ಸಿಬ್ಬಂದಿ ಹಾಗೂ ಇತ್ಯಾದಿ ಪೂರೈಕೆಗಾಗಿ 2016ರ ಡಿಸೆಂಬರ್‌ಲ್ಲಿ ಕ್ರಿಯಾಯೋಜನೆಯನ್ನು ಸರ್ಕಾರಕ್ಕೆ ಸಲ್ಲಿಸಿದ್ದರು. ಆದರೆ, ಸರ್ಕಾರದಿಂದ ಈವರಗೂ ಕ್ರಿಯಾಯೋಜನೆ ಸಂಬಂಧ ಸ್ಪಷ್ಟ ಉತ್ತರ ಬಂದಿಲ್ಲ.

Advertisement

250 ಕೋಟಿಯ ಪ್ರಸ್ತಾವನೆ: ಬೆಂಗಳೂರು ಉತ್ತರ ವಿವಿ ಸ್ಥಾಪನೆಗೆ ಪ್ರತ್ಯೇಕ ಕಟ್ಟಡ, ಸಿಬ್ಬಂದಿ, ಇತರೆ ಸಾಮಗ್ರಿ ಸೇರಿದಂತೆ 250 ಕೋಟಿಯ ಪ್ರಸ್ತಾವನೆಯನ್ನು ವಿಶೇಷಾಧಿಕಾರಿ‌ಗಳು ಸರ್ಕಾರಕ್ಕೆ ಸಲ್ಲಿಸಿದ್ದಾರೆ. ಹಾಗೆಯೇ ಕೇಂದ್ರ ವಿವಿಯ ಸ್ಥಾಪನೆಗೂ ಬೇಕಾದ ಅನುದಾನದ ಪ್ರಸ್ತಾವನೆ ಸಲ್ಲಿಸಲಾಗಿದೆ. ಸರ್ಕಾರದಿಂದ ಈವರೆಗೂ ನಯಾಪೈಸೆ ಅನುದಾನ ಬಿಡುಗಡೆಯಾಗಿಲ್ಲ. ಬೆಂಗಳೂರು ವಿವಿಯಿಂದ ತಲಾ 1 ಕೋಟಿ ಬಿಡುಗಡೆಯಾಗಿದ್ದು. ಇನ್ನೆರೆಡು ಕೋಟಿಯನ್ನು ಶೀಘ್ರವೇ ಬಿಡುಗಡೆ ಮಾಡುವ ಭರವಸೆ ವಿವಿ ಆಡಳಿತ ಮಂಡಳಿ ನೀಡಿದೆಯಾದರೂ, ಹಣ ಬಿಡುಗಡೆ ಮಾಡಿಲ್ಲ.

ಬೆಂವಿವಿಯಿಂದಲೇ ಸಂಯೋಜನೆ: 2017-18ನೇ ಸಾಲಿಗೆ ಕಾಲೇಜುಗಳ ಸಂಯೋಜನೆ ನವೀಕರಣವನ್ನು ಬೆಂವಿವಿಯಿಂದಲೇ ಮಾಡಲಾಗುತ್ತಿದೆ. ಇದರಿಂದ ಬರುವ ಸಂಪೂರ್ಣ ಆದಾಯ ಬೆಂವಿವಿ ಖಾತೆಗೆ ಸೇರುತ್ತದೆ. ಸದ್ಯ ಬೆಂವಿವಿ ವ್ಯಾಪ್ತಿಯಲ್ಲಿ 684 ಕಾಲೇಜುಗಳಿದ್ದು, ಸುಮಾರು 50 ಹೊಸ ಕಾಲೇಜು ಈ ವರ್ಷದಿಂದ ಸೇರಿಕೊಳ್ಳಲಿದೆ. 684 ಕಾಲೇಜುಗಳ ಪೈಕಿ ಬೆಂಗಳೂರು ಕೇಂದ್ರವಿವಿಗೆ 232 ಹಾಗೂ ಬೆಂಗಳೂರು ಉತ್ತರ ವಿವಿಗೆ 204 ಮತ್ತು 248 ಬೆಂಗಳೂರು ವಿವಿ ವ್ಯಾಪ್ತಿಗೆ ಸೇರುತ್ತದೆ. ಬೆಂವಿವಿಯಿಂದ ಈ ವರ್ಷದ ಸಂಯೋಜನೆ ನೀಡುವುದರಿಂದ ಶೈಕ್ಷಣಿಕ ವರ್ಷದ ಮಧ್ಯದಲ್ಲಿ ವಿವಿಯ ಹೆಸರು ಬದಲಾವಣೆ ಮಾಡುವುದು ಕಷ್ಟಸಾಧ್ಯ.

ವಿಶೇಷಾಧಿಕಾರಿಗಳ ಸಭೆ: ಬೆಂಗಳೂರು ವಿವಿಯ ವಿಭಜನೆಗೆ ಸಂಬಂಧಿಸಿದಂತೆ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿಯವರು ಗುರುವಾರ ಎರಡು ಹೊಸ ವಿವಿಯ ವಿಶೇಷಾಧಿಕಾರಿಗಳ ಸಭೆ ಕರೆದಿದ್ದಾರೆ. ತ್ರಿಭಜನೆಗೆ ಸಂಬಂಧಿಸಿದಂತೆ ಸರ್ಕಾರದ ಸೂತ್ತೋಲೆ ಶೀಘ್ರವೇ ಪ್ರಟಕವಾಗಲಿದೆ ಎಂಬ ಭರವಸೆಯನ್ನು ನೀಡಿದ್ದಾರೆ ಎಂಬುದನ್ನು ಉನ್ನತಶಿಕ್ಷಣ  ಇಲಾಖೆ ಮೂಲಗಳು “ಉದಯವಾಣಿ’ಗೆ ಮಾಹಿತಿ ನೀಡಿದೆ.

ಬೆಂಗಳೂರು ಉತ್ತರ ವಿವಿಯ ರಚನೆಗೆ ಬೇಕಾಗುವ ಕ್ರಿಯಾಯೋಜನೆ ಈಗಾಗಲೇ ಸರ್ಕಾರಕ್ಕೆ ಸಲ್ಲಿಸಿದ್ದೇವೆ. ಆದರೆ, ಸರ್ಕಾರದಿಂದ ಯವುದೇ ಉತ್ತರ ಬಂದಿಲ್ಲ. ಆಡಳಿತಾತ್ಮಕವಾಗಿ ಕೆಲವೊಂದು ಚಟುವಟಿಕೆ ನಡೆಯುತ್ತಿದೆ. ವಿದ್ಯಾರ್ಥಿಗಳ ಪ್ರವೇಶಕ್ಕೆ ಸರ್ಕಾರದ ಅಧಿಕೃತ ಆದೇಶ ಬರಬೇಕು.
-ಡಾ.ಟಿ.ಡಿ.ಕೆಂಪರಾಜು, ವಿಶೇಷಾಧಿಕಾರಿ,ಬೆಂಗಳೂರು ಉತ್ತರ ವಿಶ್ವವಿದ್ಯಾಲಯ

ಸರ್ಕಾರದ ಸೂಚನೆಯಂತೆ ಕಾರ್ಯ ನಿರ್ವಹಿಸುತ್ತಿದ್ದೇವೆ. ಈ ಶೈಕ್ಷಣಿಕ ವರ್ಷದಿಂದ ವಿದ್ಯಾರ್ಥಿಗಳ ಪ್ರವೇಶಕ್ಕೆ ಸರ್ಕಾರ ನಿರ್ದೇಶನ ಮಾಡಿದರೆ, ಪ್ರವೇಶ ನೀಡುತ್ತೇವೆ, ಆದರೆ, ಸಿಬ್ಬಂದಿ ಹಾಗೂ ಪ್ರಾಧ್ಯಾಪಕರ ನಿಯೋಜನೆ ಇನ್ನೂ ಆಗಿಲ್ಲ.
-ಪ್ರೊ. ಜಾಫೆಟ್‌, ವಿಶೇಷಾಧಿಕಾರಿ, ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯ

* ರಾಜು ಖಾರ್ವಿ ಕೊಡೇರಿ

Advertisement

Udayavani is now on Telegram. Click here to join our channel and stay updated with the latest news.

Next