Advertisement

ಸುಳ್ಳು ಆಪಾದನೆ ಶಿಕ್ಷಾರ್ಹ ಅಪರಾಧ: ಉಡುಪಿ ಡಿಸಿ 

08:40 AM Apr 12, 2018 | Karthik A |

ಉಡುಪಿ: ಈ ಬಾರಿಯ ಚುನಾವಣೆಯಲ್ಲಿ ಮತಯಂತ್ರದ ಜತೆಯಲ್ಲಿ ಬಳಸಲಾಗುವ ವಿವಿ ಪ್ಯಾಟ್‌ ಯಂತ್ರವು ನಮ್ಮ ಮತದಾನದ ಹಕ್ಕಿನ ಖಾತರಿಗೆ ಪೂರಕವಾಗಿದ್ದು, ವಿಶ್ವಾಸಾರ್ಹ ಮತದಾನ ಸಾಧ್ಯವಿದೆ. ವಿವಿ ಪ್ಯಾಟ್‌ ವಿರುದ್ಧ ಸುಳ್ಳು ಆಪಾದನೆ ಶಿಕ್ಷಾರ್ಹ ಅಪರಾಧ ಎಂದು ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್‌ ಅವರು ಹೇಳಿದರು. ಸೋಮವಾರ ಉಡುಪಿ ವಕೀಲರ ಸಂಘದಲ್ಲಿ ಏರ್ಪಡಿಸಿದ್ದ ವಿವಿ ಪ್ಯಾಟ್‌ ಕುರಿತ ಪ್ರಾತ್ಯಕ್ಷಿಕೆಯಲ್ಲಿ ಅವರು ಮಾತನಾಡಿದರು.

Advertisement

ಜಿಲ್ಲೆಗೆ ಬಂದಿರುವ 1,400 ಇವಿಎಂಗಳನ್ನು ಎಲ್ಲ ಪಕ್ಷಗಳ ಪ್ರತಿನಿಧಿಗಳ ಸಮ್ಮುಖ ಪರಿಶೀಲಿಸಲಾಗಿದೆ. ಇವಿಎಂಗಳು ದೋಷರಹಿತ. ಚುನಾವಣೆ ದಿನ ಮತದಾನ ಆರಂಭಕ್ಕೆ ಮುನ್ನ ಮತಗಟ್ಟೆಯಲ್ಲಿರುವ ರಾಜಕೀಯ ಪಕ್ಷಗಳ ಏಜೆಂಟರ ಸಮ್ಮುಖದಲ್ಲಿ ಅಣುಕು ಮತದಾನ ಮಾಡಿ ಮತ್ತೆ ಪರಿಶೀಲನೆ ಮಾಡಲಾಗುವುದು. ಯಾವುದೇ ಮತಗಟ್ಟೆಯ ಮತಯಂತ್ರದಲ್ಲಿ ದೋಷ ಕಂಡುಬಂದರೆ ಕೂಡಲೇ ಬದಲಿ ಮತಯಂತ್ರ ವ್ಯವಸ್ಥೆ ಮಾಡಲಾಗುತ್ತದೆ. ಮತಯಂತ್ರವನ್ನು ಯಾವುದೇ ವಿಧದಲ್ಲಿ ಹ್ಯಾಕ್‌ ಮಾಡಲು ಸಾಧ್ಯವಿಲ್ಲ. ಇವು ಸಂಪೂರ್ಣ ಸುರಕ್ಷಿತ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಸುಳ್ಳು ಹೇಳಿದರೆ ಕಾನೂನು ಕ್ರಮ
ಮತಯಂತ್ರಗಳು ಶೇ. 100 ಸರಿ ಇದೆ ಎಂದು ಖಾತರಿಯಾದ ಅನಂತರವೇ ಅಳವಡಿಸ ಲಾಗುತ್ತದೆ. ಮತದಾನದ ಅನಂತರ ವಿವಿ ಪ್ಯಾಟ್‌ ಯಂತ್ರದಲ್ಲಿ ತನ್ನ ಮತ ತಪ್ಪಾಗಿ ಚಲಾವಣೆಯಾಗಿದೆ ಎಂದು ಯಾರಾದರೂ ಆಕ್ಷೇಪಿಸಿದರೆ ಅಂತಹ ವ್ಯಕ್ತಿಯಿಂದ ಡಿಕ್ಲರೇಷನ್‌ ಪಡೆದು ಮತ್ತೂಮ್ಮೆ ಮತದಾನ (ಟೆಸ್ಟ್‌ ವೋಟ್‌) ಮಾಡಿಸಲಾಗುವುದು. ಆರೋಪ ಸುಳ್ಳಾಗಿದ್ದಲ್ಲಿ ದೂರುದಾರರನ್ನು ಡಿಕ್ಲರೇಷನ್‌ ಪ್ರಕಾರ ಕಾನೂನು ಕ್ರಮಕ್ಕೆ ಒಳಪಡಿಸಲಾಗುವುದು ಎಂದು ಡಿಸಿ ಹೇಳಿದರು.

ಪ್ರಥಮ ಸ್ಥಾನ: ನ್ಯಾಯಾಧೀಶರ ಭರವಸೆ
ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಟಿ. ವೆಂಕಟೇಶ್‌ ನಾಯ್ಕ ಮಾತನಾಡಿ, ಉಡುಪಿ ಜಿಲ್ಲೆ ಎಲ್ಲ ಕ್ಷೇತ್ರಗಳಲ್ಲಿ ರಾಜ್ಯದಲ್ಲಿಯೇ ಮುಂಚೂಣಿಯಲ್ಲಿದೆ. ಈ ಬಾರಿ ಮತದಾನ ಪ್ರಮಾಣದಲ್ಲೂ ಉಡುಪಿ ಜಿಲ್ಲೆ ಪ್ರಥಮ ಸ್ಥಾನ ಪಡೆಯಬೇಕು. ಈ ನಿಟ್ಟಿನಲ್ಲಿ ಮೇ 12ರಂದು ನಡೆಯುವ ಚುನಾವಣೆಯಲ್ಲಿ ಪ್ರತಿಯೊಬ್ಬರೂ ತಪ್ಪದೆ ಮತದಾನ ಮಾಡಬೇಕು ಹಾಗೂ ಇತರರನ್ನು ಮತದಾನ ಮಾಡುವಂತೆ ಪ್ರೇರೇಪಿಸಬೇಕು ಎಂದು ಹೇಳಿದರು.

ಹಿರಿಯ ಸಿವಿಲ್‌ ನ್ಯಾಯಾಧೀಶೆ ಲತಾ, ಅಪರ ಜಿಲ್ಲಾಧಿಕಾರಿ ಅನುರಾಧಾ ಜಿ., ವಕೀಲರ ಸಂಘದ ಅಧ್ಯಕ್ಷ ರತ್ನಾಕರ ಶೆಟ್ಟಿ ಉಪಸ್ಥಿತರಿದ್ದರು. ಜಿಲ್ಲಾ ಮಾಸ್ಟರ್‌ ಟ್ರೈನರ್‌ ಪ್ರಕಾಶ್‌ ಅವರು ಯಂತ್ರಗಳ ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು.

Advertisement
Advertisement

Udayavani is now on Telegram. Click here to join our channel and stay updated with the latest news.

Next