ರಾಯಚೂರು: ‘ಗಂಗಾವತಿ ಸಮೀಪದ ನವವೃಂದಾವನ ಗಡ್ಡೆಯಲ್ಲಿನ ಶ್ರೀ ವ್ಯಾಸರಾಜ ತೀರ್ಥರ ವೃಂದಾವನವನ್ನು ದುಷ್ಕರ್ಮಿಗಳು ಧ್ವಂಸಗೊಳಿಸಿದ ಘಟನೆಯನ್ನು ಹಿಂದು, ಮಾಧ್ವ ಸಮಾಜಕ್ಕೆ ಕರಾಳ ದಿನ ಎಂದೇ ಭಾವಿಸುತ್ತೇವೆ’ ಎಂದು ಮಂತ್ರಾಲಯದ ರಾಘವೇಂದ್ರ ಸ್ವಾಮಿ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ವಿಷಾದಿಸಿದರು.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಘಟನೆಯಿಂದ ಮನಸ್ಸಿಗೆ ತುಂಬಾ ನೋವಾಗಿದೆ. ಆಹಾರ ಕೂಡ ಸ್ವೀಕರಿಸದೆ ನವವೃಂದಾವನಕ್ಕೆ ಹೊರಟಿದ್ದೇವೆ. ನಮಗೆಲ್ಲ ರಕ್ತ ಕುದಿಯುತ್ತಿದೆ. ಪವಿತ್ರ ಸ್ಥಳಗಳನ್ನು ಅಪವಿತ್ರಗೊಳಿಸಿರುವುದು ಖಂಡನೀಯ. ಹಿಂದು ಸಂಸ್ಕೃತಿಗೆ ನಡೆದ ಅಪಚಾರ ಸಹಿಸಲಸಾಧ್ಯ’ ಎಂದರು.
ಮಧ್ವರ ಶಿಷ್ಯರಾದ ವ್ಯಾಸರಾಜರನ್ನು ಅಸಂಖ್ಯ ಭಕ್ತರು ಆರಾಧಿಸುತ್ತಾರೆ. ರಾಘವೇಂದ್ರ ಸ್ವಾಮಿಗಳಿಗಿಂತ ಪೂರ್ವಜರು ವ್ಯಾಸರಾಜ ಯತಿಗಳು. ವಿಜಯನಗರದ ಕೃಷ್ಣದೇವರಾಯ ರಂಥ ಅನೇಕ ಮಹಾನ್ ರಾಜರಿಗೆ ಅವರು ಗುರುಗಳಾಗಿದ್ದರು. ಅಂಥ ಯತಿಗಳ ವೃಂದಾ ವನಕ್ಕೆ ಧಕ್ಕೆ ಮಾಡಿರುವುದು ಖಂಡನೀಯ. ಈ ಕೃತ್ಯ ಅಕ್ಷಮ್ಯ ಅಪರಾಧವಾಗಿದ್ದು, ಈ ವಿಚಾರದಲ್ಲಿ ಮಠಭೇದ ಎಣಿಸದೆ ರಾಯರ ಮಠ, ಉತ್ತರಾಧಿ ಮಠ, ವ್ಯಾಸರಾಜರ ಮಠಗಳು ಒಂದಾಗಿ ಖಂಡಿಸುತ್ತವೆ ಎಂದರು.
ರಾಜ್ಯ ಸರ್ಕಾರ ಹಾಗೂ ಕೊಪ್ಪಳ ಜಿಲ್ಲಾಡಳಿತ ಈ ಬಗ್ಗೆ ಸೂಕ್ತ ತನಿಖೆ ಕೈಗೊಳ್ಳಬೇಕು. ಕೂಡಲೇ ದುಷ್ಕರ್ಮಿಗಳನ್ನು ಬಂಧಿಸಿ ಶಿಕ್ಷೆಗೆ ಗುರಿಪಡಿಸಬೇಕು. ಸಂಪ್ರದಾಯಬದ್ಧವಾಗಿ ವೃಂದಾವನವನ್ನು ಮರು ನಿರ್ಮಿಸಬೇಕು. ನವವೃಂದಾವನ ಗಡ್ಡೆಗೆ ಸೂಕ್ತ ಭದ್ರತೆ ಕಲ್ಪಿಸಬೇಕು. ಯಾವುದೇ ಧರ್ಮದ ಪವಿತ್ರ ಸ್ಥಳಗಳಲ್ಲಿ ಈ ರೀತಿಯ ಕೃತ್ಯ ನಡೆಯಬಾರದು. ಐತಿಹಾಸಿಕ ಸ್ಥಳಗಳಿಗೆ ರಕ್ಷಣೆ ಕೊಡುವ ಕೆಲಸ ಮಾಡಬೇಕು. ವಿವಿಧ ಧರ್ಮಗಳ ಶ್ರದ್ಧಾ ಕೇಂದ್ರಗಳಿಗೆ ರಕ್ಷಣೆ ಒದಗಿಸಬೇಕು. ಇಂತಹ ದುಷ್ಕೃತ್ಯ ಇದೇ ಕೊನೆ ಆಗಬೇಕು. ಕೃತ್ಯದ ಬಗ್ಗೆ ಸಮಗ್ರ ತನಿಖೆ ಆಗಬೇಕು ಎಂದರು.
ಶ್ರೀಗಳಿಂದ ಪರಿಶೀಲನೆ: ವ್ಯಾಸರಾಜರ ವೃಂದಾವನ ಧ್ವಂಸ ಹಿನ್ನೆಲೆಯಲ್ಲಿ ಮಂತ್ರಾಲ ಯದ ಸುಭುದೇಂದ್ರತೀರ್ಥ ಶ್ರೀಗಳು ಹಾಗೂ ವ್ಯಾಸರಾಜಮಠದ ವಿದ್ಯಾಶ್ರೀಶ ತೀರ್ಥರು, ವಿದ್ಯಾಮನೋಹರ ತೀರ್ಥರು, ವಿದ್ಯಾವಿಜಯ ತೀರ್ಥರು ಗುರುವಾರ ನವವೃಂದಾವನ ಗಡ್ಡಿಗೆ ಭೇಟಿ ನೀಡಿ ಪರಿಶೀಲಿಸಿದರು.