ಬೆಂಗಳೂರು: “ನೀವು ನಿಮ್ಮ ಹೆಸರನ್ನು ಮತದಾರರ ಪಟ್ಟಿಯಲ್ಲಿ ಪರಿಶೀಲಿಸಿದ್ದೀರಾ’ ಹೌದು, ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮತದಾರರಲ್ಲಿ ಜಾಗೃತಿ ಮೂಡಿಸಲು ಕೆಎಸ್‌ಆರ್‌ಟಿಸಿ ಹಮ್ಮಿಕೊಂಡ ವಿನೂತನ ವಿಧಾನ ಇದು. ಪ್ರಯಾಣಿಕರು ಬಸ್ ಏರಿದ ತಕ್ಷಣ ಸಾಮಾನ್ಯವಾಗಿ ಟಿಕೆಟ್ ಪಡೆಯುತ್ತಾರೆ.
ಆ ಟಿಕೆಟ್‌ನ ಕೆಳಗೆ ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯೇ ಎಂಬುದನ್ನು ಪರಿಶೀಲಿಸುವಂತೆ ಸೂಚಿಸುವ ಸಂದೇಶವನ್ನು ಮುದ್ರಿಸಲಾಗಿದೆ. ಇದರಿಂದ ಮತದಾರರ ಪಟ್ಟಿಗೆ ಹೆಸರು ನೋಂದಣಿ ಹಾಗೂ ಹೆಸರುಗಳಲ್ಲಿ ತಪ್ಪುಗಳಿದ್ದರೆ ಸರಿಪಡಿಸಿಕೊಳ್ಳಲು ಅನುಕೂಲ ಆಗಲಿದೆ.
ಮತದಾರರ ಗುರುತಿನ ಚೀಟಿ ಇದ್ದರೂ ಕೆಲವೊಮ್ಮೆ ಮತದಾರರ ಪಟ್ಟಿಯಲ್ಲಿ ಹೆಸರು ಇರುವುದಿಲ್ಲ. ಆಗ, ಮತದಾನಕ್ಕೆ ಅವಕಾಶ ಇರುವುದಿಲ್ಲ. ಹೀಗಾಗಿ ಮತದಾರರ ಪಟ್ಟಿಯಲ್ಲಿ ಹೆಸರು ಇರುವುದನ್ನು ಖಾತ್ರಿಪಡಿಸಿಕೊಳ್ಳುವುದು ಸೂಕ್ತ. ಈ ನಿಟ್ಟಿನಲ್ಲಿ ನಿಗಮ ಕೈಗೆತ್ತಿಕೊಂಡ ಜಾಗೃತಿ ಅಭಿಯಾನ ಹೆಚ್ಚು ಮಹತ್ವದ್ದಾಗಿದೆ. ಅತ್ಯಂತ ಕಡಿಮೆ ಅವಧಿಯಲ್ಲಿ ಅತಿ ಹೆಚ್ಚು ಜನರನ್ನು ಈ ಮೂಲಕ ತಲುಪಬಹುದು.
ಕೆಎಸ್‌ಆರ್‌ಟಿಸಿ ವ್ಯಾಪ್ತಿಯಲ್ಲಿ 17 ವಿಭಾಗಗಳಿದ್ದು, 83 ಘಟಕಗಳಿವೆ. ಅದರಲ್ಲಿ ನಿತ್ಯ 29 ಲಕ್ಷ ಪ್ರಯಾಣಿಕರು ಸಂಚರಿಸುತ್ತಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮತದಾನದ ಜಾಗೃತಿ ಅಭಿಯಾನವನ್ನೂ ಕೆಎಸ್‌ಆರ್‌ಟಿಸಿ ಮಾಡಿತ್ತು.
ಟಿಕೆಟ್‌ನಲ್ಲಿ ತಪ್ಪದೆ ಮತ ಚಲಾಯಿಸುವಂತೆ ಮನವಿ ಮಾಡಿತ್ತು. ಚುನಾವಣೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಚುನಾವಣಾ ಆಯೋಗ ಹತ್ತು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಅದಕ್ಕೆ ಪೂರಕವಾಗಿ ಕೆಎಸ್‌ಆರ್‌ಟಿಸಿ ಕೈಜೋಡಿಸಿದೆ.