Advertisement

ಸಾಂಪ್ರದಾಯಿಕ ಉಡುಗೆಯಲ್ಲಿ ಮತದಾನ

01:04 PM May 13, 2018 | |

ಗುಂಡ್ಲುಪೇಟೆ: ತಾಲೂಕಿನ ಮದ್ದೂರು ಕಾಲೋನಿಯ ಗಿರಿಜನ ಆಶ್ರಮ ಶಾಲೆಯಲ್ಲಿ ತಳಿರು ತೋರಣಗಳಿಂದ ಅಲಂಕರಿಸಿದ್ದ ವಿಶೇಷ ಮತಗಟ್ಟೆಯಲ್ಲಿ ಗಿರಿಜನರು ತಮ್ಮ ಸಾಂಪ್ರದಾಯಿಕ ಉಡುಗೆ ತೊಟ್ಟು ಮತದಾನ ಮಾಡಿದರು. ಮತಗಟ್ಟೆ ಮುಂದೆ ಡೊಳ್ಳು ಕುಣಿತ, ಸಾಂಪ್ರಾದಾಯಿಕ ನೃತ್ಯ, ಗಾಯನ ನಡೆಸಿಕೊಟ್ಟ ಗಿರಿಜನರಿಗೆ ಹೂಗುತ್ಛ ನೀಡಿ ಆತ್ಮೀಯವಾಗಿ ಸ್ವಾಗತಿಸಲಾಯಿತು.

Advertisement

ಇದೇವೇಳೆ ಕ್ಷೇತ್ರದ ಮೇಲುಕಾಮನಹಳ್ಳಿ ಗಿರಿಜನ ಕಾಲೋನಿಯ ನಿವಾಸಿಗಳು ಕಾಡಿನಲ್ಲಿ ಬೆಳೆದ ಸೊಪ್ಪು ಹಾಗೂ ವಿವಿಧ ಹೂವುಗಳಿಂದ ಅಲಂಕರಿಸಿಕೊಂಡು ಸಾಂಪ್ರದಾಯಿಕ ಉಡುಗೆ ತೊಟ್ಟು, ನೃತ್ಯ ಮಾಡಿ ಸಂತಸ ಮತ್ತು ಉತ್ಸಾಹದೊಂದಿಗೆ ಮತಗಟ್ಟೆಗೆ ಆಗಮಿಸಿ ಮತದಾನ ಮಾಡಿದರು.

ಗುಲಾಬಿ ವರ್ಣದಿಂದ ಕಂಗೊಳಿಸಿದ ಮತಗಟ್ಟೆ: ಕ್ಷೇತ್ರದಲ್ಲಿನ ಮಹಿಳಾ ಮತದಾರರಿಗೆ ಅನುಕೂಲವಾಗುವಂತೆ ಈ ಬಾರಿ ಪಟ್ಟಣದ ಮದ್ದಾನೇಶ್ವರ ಪ್ರೌಢಶಾಲೆ ಮತ್ತು ಚಿಕ್ಕತುಪ್ಪೂರು ಶಾಲೆಯಲ್ಲಿ ಮಹಿಳಾ ಸ್ನೇಹಿ ಸಖೀ ಹೆಸರಿನ ಪಿಂಕ್‌ ಮತಗಟ್ಟೆಗಳನ್ನು ಸ್ಥಾಪಿಸಲಾಗಿತ್ತು. ಸಂಪೂರ್ಣ ಪಿಂಕ್‌ (ತಿಳಿಗುಲಾಬಿ) ಬಣ್ಣದಿಂದ ಕಂಗೊಳಿಸುತ್ತಿದ್ದ ಈ ಮತಗಟ್ಟೆಯಲ್ಲಿ ಪಿಂಕ್‌ ಟೇಬಲ್‌,

ಬಲೂನ್‌ ಮತ್ತು ಪಿಂಕ್‌ ಬಣ್ಣದ ಸೀರೆ ಧರಿಸಿದ್ದ ಮಹಿಳಾ ಸಿಬ್ಬಂದಿ ಮಹಿಳಾ ಮತದಾರರ ಮೆಚ್ಚುಗೆಗೆ ಪಾತ್ರರಾದರು. ನೂತನವಾಗಿ ಮಹಿಳಾ ಸ್ನೇಹಿಯಾದ ಈ ಮತಗಟ್ಟೆಯಲ್ಲಿ ಬೆಳಗ್ಗೆಯಿಂದಲೇ ಮಹಿಳೆಯರು ಸಾಲುಗಟ್ಟಿ ಮತಚಲಾಯಿಸುತ್ತಿದ್ದರು. ಈ ಬಾರಿ ಚುನಾವಣಾ ಆಯೋಗ ಈ ವ್ಯವಸ್ಥೆಯನ್ನು ಮಾಡಿರುವುದು ಸಂತಸ ತಂದಿದೆ ಎಂದು ಮತದಾರೆ ಎಂ.ಶಾಂತಾ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next