Advertisement

ಮತಯಂತ್ರಗಳ ಅನುರೂಪೀಕರಣ ಕಮ್ಮಟ

03:19 PM May 02, 2018 | |

ನಗರ: ವಿಧಾನಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಮಿನಿ ವಿಧಾನ ಸೌಧದ ಸಭಾಂಗಣದಲ್ಲಿ ಮಂಗಳವಾರ ಸಂಜೆ ಮತಯಂತ್ರಗಳ ಅನುರೂಪೀಕರಣ ಕಮ್ಮಟ ನಡೆಯಿತು.

Advertisement

ಚುನಾವಣಾ ವೀಕ್ಷಕ ಜಗದೀಶ್‌ ಪ್ರಸಾದ್‌ ಹಾಗೂ ಸಹಾಯಕ ಕಮಿಷನರ್‌ ಮತ್ತು ಚುನಾವಣಾಧಿಕಾರಿ ಎಚ್‌.ಕೆ. ಕೃಷ್ಣಮೂರ್ತಿ ನೇತೃತ್ವದಲ್ಲಿ ಪ್ರಕ್ರಿಯೆ ನಡೆಯಿತು.ಯಾವ ಮತಗಟ್ಟೆಗಳಿಗೆ ಯಾವ ಮತಯಂತ್ರ, ಯಾವ ನಿಯಂತ್ರಣ ಘಟಕ ಮತ್ತು ಯಾವ ವಿವಿ ಪ್ಯಾಟ್‌ ಹೋಗಬೇಕು ಎಂಬುದನ್ನು ಕಂಪ್ಯೂಟರ್‌ ಮೂಲಕವೇ ಅನುರೂಪೀಕರಣ ಮಾಡಲಾಯಿತು.

ಹಿಂದಿನ ಚುನಾವಣೆಗಳಲ್ಲಿ ಮತ ಯಂತ್ರಗಳ ಅನುರೂಪೀಕರಣ ಕ್ರಿಯೆ ಯನ್ನು ಮ್ಯಾನ್ಯುವಲ್‌ ವಿಧಾನದಲ್ಲಿ ಮಾಡಲಾಗುತ್ತಿತ್ತು. ಪ್ರಸ್ತುತ ಕಂಪ್ಯೂಟರ್‌ ಮೂಲಕ ಮಾಡಲಾಗುತ್ತಿದೆ. ಆ ಪ್ರಕಾರ ಪುತ್ತೂರು ಕ್ಷೇತ್ರದ 223 ಬೂತ್‌ಗಳಿಗೆ ಯಾವ ಮತ ಯಂತ್ರಗಳು ಹೋಗಬೇಕೆಂಬು ದನ್ನು ಆಯ್ಕೆ ಮಾಡಲಾಯಿತು. ಮತದಾನ ಯಂತ್ರ, ನಿಯಂತ್ರಣ ಘಟಕ ಮತ್ತು ವಿವಿ ಪ್ಯಾಟ್‌ಗಳಿಗೆ ಅನು ಕ್ರಮಣಿಕೆ ಸಂಖ್ಯೆ ನೀಡಲಾಗಿದ್ದು, ಅದನ್ನು ಗಣಕೀಕರಣ ಮಾಡಲಾಗಿದೆ.

ಯಾವ ನಂಬರಿನ ಮತಯಂತ್ರಕ್ಕೆ ಯಾವ ನಂಬರಿನ ಸಿ.ಯು. ಮತ್ತು ವಿವಿ ಪ್ಯಾಟ್‌ ಅಳವಡಿಸಬೇಕು ಎಂಬುದನ್ನು ಅಭ್ಯರ್ಥಿಗಳಲ್ಲೇ ಕೇಳಲಾಯಿತು. ಅವರು ಹೇಳಿದ ಪ್ರಕಾರ ಆಯಾ ನಂಬರ್‌ಗಳನ್ನು ಪರಸ್ಪರ ಆರಿಸಲಾಯಿತು. ಮೂರು ನಂಬರ್‌ಗಳನ್ನು ಜೋಡಿಸಿದ ತತ್‌ಕ್ಷಣ ಅವು ಹೊಂದಿಕೊಳ್ಳುವುದರ ಜತೆಗೆ ಉಳಿದ 222 ಮತಗಟ್ಟೆಗಳ ಘಟಕಗಳು ಕೂಡ ಮರು ಅನುರೂಪೀಕರಣಗೊಳ್ಳತ್ತದೆ. ಈ ವಿಧಾನವನ್ನು ಎರಡು ಮತಗಟ್ಟೆಗಳಿಗೆ ಮಾಡಲಾಯಿತು. ಆಗ ಎಲ್ಲ 223 ಮತಗಟ್ಟೆಗಳ ಘಟಕಗಳು ಕೂಡ ಎರಡು ಬಾರಿ ಮಿಶ್ರಣಗೊಂಡಿತು.

ಮತಪತ್ರ ಅಳವಡಿಕೆ
ತೆಂಕಿಲ ವಿವೇಕಾನಂದ ಶಿಕ್ಷಣ ಸಂಸ್ಥೆಯಲ್ಲಿ ಈಗಾಗಲೇ ಮತಯಂತ್ರಗಳನ್ನು ಭದ್ರತಾ ತಪಾಸಣೆಯಲ್ಲಿ ಇರಿಸಲಾಗಿದೆ. 223 ಮತಗಟ್ಟೆಗಳಿಗೆ ಬೇಕಾದ ಯಂತ್ರಗಳು ಬಂದಿವೆ. ಸೇ. 10ರಷ್ಟು ಹೆಚ್ಚುವರಿ ಯಂತ್ರಗಳನ್ನು ಕಳುಹಿಸಬೇಕೆಂಬ ನಿಯಮವಿದ್ದು, ಪುತ್ತೂರಿಗೆ ಅದಕ್ಕಿಂತಲೂ ಹೆಚ್ಚು ಬಂದಿವೆ. ಮೇ 3 ಮತ್ತು 4ರಂದು ಅಲ್ಲಿ ಮತಪತ್ರಗಳನ್ನು ಅಳವಡಿಸಿ ಅಭ್ಯರ್ಥಿಗಳು ಅಥವಾ ಅವರ ಪ್ರತಿನಿಧಿಗಳಿಂದ ಎಲ್ಲ ಯಂತ್ರಗಳಿಗೂ ಮತ ಹಾಕಿಸಿ ಅವರ ಕೈಯಲ್ಲಿ ತಪಾಸಣೆ ನಡೆಸಲಾಗುವುದು ಎಂದು ಜಗದೀಶ್‌ ಪ್ರಸಾದ್‌ ಹೇಳಿದರು.

Advertisement

ಮೇ 3, 4ರಂದು ಮತಯಂತ್ರಗಳಿಗೆ ಮತಪತ್ರಗಳನ್ನು ಅಳವಡಿಸಿದ ಅನಂತರ ಪ್ರತಿ ಯಂತ್ರಗಳಿಗೂ ಎಲ್ಲ ಅಭ್ಯರ್ಥಿ
ಗಳು ಅಥವಾ ಪ್ರತಿನಿಧಿಗಳಿಂದ ಮತದಾನ ಮಾಡಿಸಲಾಗುತ್ತದೆ. ಇದಾದ ಬಳಿಕ ಒಂದು ಸಾವಿರ ಇತರರಿಂದಲೂ ಓಟು ಹಾಕಿಸಿ ಪರಿಶೀಲಿಸಲಾಗುತ್ತದೆ. ಎಲ್ಲವೂ ಖಚಿತಗೊಂಡ ಮೇಲೆ ಲಾಕ್‌ ಮಾಡಲಾಗುತ್ತದೆ. ಇದಕ್ಕೂ ಮೊದಲು ಮತಯಂತ್ರಗಳಿಗೆ ಸ್ಟಿಕ್ಕರ್‌ ಅಂಟಿಸುವ ಕೆಲಸವೂ ನಡೆಯುತ್ತದೆ ಎಂದು ವಿವರಿಸಿದರು.

ವಿವಿ ಪ್ಯಾಟ್‌ ಕೈಕೊಟ್ಟರೆ ಬದಲು
ಮತದಾನ ಸಂದರ್ಭ ವಿವಿ ಪ್ಯಾಟ್‌ ಯಂತ್ರ ಕೈಕೊಟ್ಟರೆ ಅದನ್ನು ಮಾತ್ರ ಬದಲಾಯಿಸಲಾಗುತ್ತದೆ. ಒಂದು ವೇಳೆ
ನಿಯಂತ್ರಣ ಘಟಕ (ಸಿ.ಯು.) ಅಥವಾ ಮತದಾನ ಯಂತ್ರ (ಬಿ.ಯು.) ಕೈಕೊಟ್ಟರೆ 3 ಯಂತ್ರಗಳನ್ನು ಕೂಡ ಬದಲಾಯಿಸಲಾಗುತ್ತದೆ. ವಿವಿ ಪ್ಯಾಟ್‌ನ ಮೂಲಕ ಮತದಾರ ತಾನು ಹಾಕಿದ ಮತ ಅದೇ ಅಭ್ಯರ್ಥಿಗೆ ಚಲಾವಣೆ ಆಗಿದೆಯೇ ಎಂಬುದನ್ನು ಪರಿಶೀಲಿಸಬಹುದು. ಈ ಯಂತ್ರದಲ್ಲಿ ಎಲ್ಲ ಅಭ್ಯರ್ಥಿಗಳ ಹೆಸರು ಮತ್ತು ಫೋಟೋ ಅಳವಡಿಸಲಾಗಿರುತ್ತದೆ. ಇದರಲ್ಲಿ ಬಳಸುವ ಕಾಗದ ಉತ್ಕೃಷ್ಟ ಗುಣ ಮಟ್ಟದ್ದು. 5 ವರ್ಷ ಕಾಲ ಇದರ ಮಾಹಿತಿ ಅಳಿಸಿ ಹೋಗುವುದಿಲ್ಲ. ಹಾಳಾಗುವುದಿಲ್ಲ ಎಂದು ಕೃಷ್ಣಮೂರ್ತಿ ಹೇಳಿದರು. 

ಉಪ ಚುನಾವಣಾಧಿಕಾರಿ ಅನಂತ ಶಂಕರ್‌, ಉಪ ತಹಸೀಲ್ದಾರ್‌ ಶ್ರೀಧರ್‌, ಚುನಾವಣಾ ಆಯೋಗದ ಕರ್ತವ್ಯ
ದಲ್ಲಿರುವ ಅಧಿಕಾರಿಗಳು, ಕಾಂಗ್ರೆಸ್‌, ಬಿಜೆಪಿ ಪಕ್ಷದ ಅಭ್ಯರ್ಥಿ ಪರ ಪ್ರತಿನಿಧಿಗಳು, ಜೆಡಿಎಸ್‌ ಅಭ್ಯರ್ಥಿ ಐ.ಸಿ. ಕೈಲಾಸ್‌ ಮತ್ತು ಪಕ್ಷೇತರ ಅಭ್ಯರ್ಥಿಗಳು ಉಪಸ್ಥಿತರಿದ್ದರು.

ಪ್ರತಿ ಹಂತದಲ್ಲೂ ಚಿತ್ರೀಕರಣ
ಚುನಾವಣಾ ಅಧಿಕಾರಿ ಎಚ್‌. ಕೆ. ಕೃಷ್ಣಮೂರ್ತಿ ಮಾತನಾಡಿ, ಕ್ಷೇತ್ರಕ್ಕೆ 325 ಮತದಾನ ಘಟಕ (ಬ್ಯಾಲೆಟ್‌ ಯುನಿಟ್‌), 272 ನಿಯಂತ್ರಣ ಘಟಕ (ಕಂಟ್ರೋಲ್‌ ಯುನಿಟ್‌) ಮತ್ತು 325 ವಿವಿ ಪ್ಯಾಟ್‌ ಗಳು ನಿಗದಿಯಾಗಿವೆ
ಎಂದರು. ಮತಯಂತ್ರಗಳ ಕುರಿತು ಯಾರಿಗೂ ಗೊಂದಲ ಇರಬಾರದು ಎಂಬ ಕಾರಣಕ್ಕೆ ಎಲ್ಲ ಘಟಕಗಳನ್ನು ಅನುರೂಪಗೊಳಿಸುವ ಮತ್ತು ಮತಪತ್ರ ಅಳವಡಿಸುವ ಹಾಗೂ ಅವು ಕಾರ್ಯ ನಿರ್ವಹಿಸುವ ವಿಧಾನವನ್ನು ಪಾರದರ್ಶಕವಾಗಿಯೇ ಮಾಡಲಾಗುತ್ತದೆ. ಪ್ರತೀ ಹಂತಕ್ಕೂ ಅಭ್ಯರ್ಥಿಗಳು ಅಥವಾ ಪ್ರತಿನಿಧಿಗಳನ್ನು
ಆಮಂತ್ರಿಸಲಾಗುತ್ತದೆ. ಪ್ರತಿ ಚಟುವಟಿಕೆಯ ವಿಡಿಯೋ ಚಿತ್ರೀಕರಣ ನಡೆಸಲಾಗುವುದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next