Advertisement

ಹೊತೇರಿದಂತೆ ಮತದಾನ ಚುರುಕು

02:34 PM Jun 09, 2018 | Team Udayavani |

ಚಿತ್ರದುರ್ಗ: ವಿಧಾನಪರಿಷತ್‌ ಆಗ್ನೇಯ ಶಿಕ್ಷಕರ ಕ್ಷೇತ್ರಕ್ಕೆ ಶುಕ್ರವಾರ ಶಾಂತಿಯುತವಾಗಿ ಮತದಾನ ನಡೆಯಿತು. ಜಿಲ್ಲೆಯ ಏಳು ಮತಗಟ್ಟೆಗಳಲ್ಲಿ ಬೆಳಿಗ್ಗೆ 7ರಿಂದ 11 ಗಂಟೆ ತನಕ ಮತ ಚಲಾವಣೆ ನೀರಸವಾಗಿತ್ತು. ಆಗ ಕೇವಲ ಶೇ. 19 ರಷ್ಟು ಮಾತ್ರ ಮತದಾನವಾಗಿತ್ತು. ಮಧ್ಯಾಹ್ನ 1 ಗಂಟೆ ಸುಮಾರಿಗೆ ಚೇತರಿಕೆ ಕಂಡು ಶೇ. 50.78ರಷ್ಟು ಮತದಾನ ಆಗಿತ್ತು.

Advertisement

ಮಧ್ಯಾಹ್ನದ ನಂತರ ಮತದಾರರು ಮತಗಟ್ಟೆಯತ್ತ ದೌಡಾಯಿಸಿದ್ದರಿಂದ ಮಧ್ಯಾಹ್ನ 3 ಗಂಟೆ ವೇಳೆಗೆ ಶೇ. 84.75 ರಷ್ಟು ಮತದಾನವಾಗಿ ಏರಿಕೆ ಕಂಡಿತು. ಸಂಜೆ 5 ಗಂಟೆ ವೇಳೆಗೆ ಶೇ. 95.59 ರಷ್ಟು ಮತದಾನ ಆಗುವ ಮೂಲಕ ದಾಖಲೆ ಸೃಷ್ಟಿಯಾಯಿತು.

ಮೊಳಕಾಲ್ಮೂರು ತಾಲೂಕಿನಲ್ಲಿ ಗರಿಷ್ಠ ಶೇ. 96.73 ಮತದಾನವಾಗಿದ್ದರೆ, ಚಿತ್ರದುರ್ಗದಲ್ಲಿ ಶೇ. 96.44 ರಷ್ಟು ಮತದಾನವಾಗಿದೆ. ಚಿತ್ರದುರ್ಗದ ಮತ್ತೂಂದು ಮತಗಟ್ಟೆಯಲ್ಲಿ ಕನಿಷ್ಠ ಶೇ. 93.05 ಮತದಾನವಾಗಿದೆ.
 
ಕ್ಷೇತ್ರದ ಒಟ್ಟು 19,402 ಮತದಾರರಲ್ಲಿ 3830 ಮತದಾರರು ಚಿತ್ರದುರ್ಗ ಜಿಲ್ಲೆಯ ಆರು ತಾಲೂಕುಗಳಲ್ಲಿದ್ದಾರೆ. ಈ ಪೈಕಿ 2944 ಪುರುಷರು ಹಾಗೂ 886 ಮಹಿಳಾ ಮತದಾರರಿದ್ದಾರೆ. ಚಿತ್ರದುರ್ಗ ನಗರದಲ್ಲಿ 1234 ಮತದಾರರು ಇರುವುದರಿಂದ ಪ್ರಮುಖ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು, ಪಕ್ಷೇತರ ಅಭ್ಯರ್ಥಿ ಕೆ.ಜಿ. ತಿಮ್ಮಾರೆಡ್ಡಿಯವರ ಬೆಂಬಲಿಗರು ಮತಗಟ್ಟೆಗಳ ಮುಂದೆ ನಿಂತು ಮತಯಾಚಿಸಿದರು. ಜೆಡಿಎಸ್‌ ಅಭ್ಯರ್ಥಿ ರಮೇಶ್‌ಬಾಬು, ಕಾಂಗ್ರೆಸ್‌ ಅಭ್ಯರ್ಥಿ ಎಂ. ರಾಮಪ್ಪ, ಬಿಜೆಪಿ ಅಭ್ಯರ್ಥಿ ವೈ.ಎ. ನಾರಾಯಣಸ್ವಾಮಿ, ಪಕ್ಷೇತರ ಅಭ್ಯರ್ಥಿ ತಿಮ್ಮಾರೆಡ್ಡಿ ಪರ ಕೆಲಸ ಮಾಡುತ್ತಿದ್ದ ಕಾರ್ಯಕರ್ತರು ಮತದಾನ ಕೇಂದ್ರ ಬಿಟ್ಟು ಕದಲಲಿಲ್ಲ.

ಚಿತ್ರದುರ್ಗ ನಗರದ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿನಲ್ಲಿ ತೆರೆಯಲಾಗಿದ್ದ ಎರಡು ಮತ ಕೇಂದ್ರಗಳಿಗೆ ಶಾಸಕ ಜಿ.ಎಚ್‌. ತಿಪ್ಪಾರೆಡ್ಡಿ ಭೇಟಿ ನೀಡಿ ತಮ್ಮ ಪಕ್ಷದ ಅಭ್ಯರ್ಥಿ ಗೆಲ್ಲಿಸುವಂತೆ ಮತದಾರರಲ್ಲಿ ಮನವಿ ಮಾಡಿದರು. ಅದೇ ರೀತಿ ಜೆಡಿಎಸ್‌, ಕಾಂಗ್ರೆಸ್‌ ಮತ್ತು ಪಕ್ಷೇತರ ಅಭ್ಯರ್ಥಿಗಳ ಪರ ಸಾಕಷ್ಟು ಕಾರ್ಯಕರ್ತರು, ಮುಖಂಡರು
ತಮ್ಮ ತಮ್ಮ ಪಕ್ಷಗಳ ಬೆಂಬಲಿತ ಅಭ್ಯರ್ಥಿಗಳ ಪರ ಮತಯಾಚಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next