Advertisement

ಮೂಲ ಸೌಲಭ್ಯವಿಲ್ಲದಕ್ಕೆ ಮತದಾನ ಬಹಿಷ್ಕಾರ

08:51 PM Apr 13, 2019 | Lakshmi GovindaRaju |

ಹುಣಸೂರು: ತಾಲೂಕಿನ ನೇರಳಕುಪ್ಪೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಬಿಲ್ಲೇನಹೊಸಳ್ಳಿ, ಕೆ.ಜಿ.ಹೆಬ್ಬನಕುಪ್ಪೆ ಹಾಗೂ ವಿವಿಧ ಹಾಡಿಗಳಿಗೆ ಮೂಲಭೂತ ಸೌಕರ್ಯ ಕಲ್ಪಿಸಲು ಆಗ್ರಹಿಸಿ ಈ ಬಾರಿ ಲೋಕಸಭಾ ಚುನಾವಣೆಯನ್ನು ಬಹಿಷ್ಕರಿಸಲು ಗ್ರಾಮಸ್ಥರು ತೀರ್ಮಾನ ಕೈಗೊಂಡಿದ್ದಾರೆ.

Advertisement

ಬಿಲ್ಲೇನಹೊಸಹಳ್ಳಿ ಹಾಡಿಯಲ್ಲಿ ಶನಿವಾರ ನಡೆದ ಸಭೆಯಲ್ಲಿ ಗ್ರಾಮದ ಮುಖಂಡ ಎಂ.ಕೆ.ಪೂಣಚ್ಚ ಮತ್ತಿತರರು ಮಾತನಾಡಿ, ನೇರಳಕುಪ್ಪೆ ಜಂಕ್ಷನ್‌ನಿಂದ ಬಿಲ್ಲೇನಹೊಸಹಳ್ಳಿ ಸಂಪರ್ಕ ಕಲ್ಪಿಸುವ 3 ಕಿ.ಮೀ.ವರೆಗಿನ ರಸ್ತೆಯಲ್ಲಿ ಗುಂಡಿ ಬಿದ್ದು 10 ವರ್ಷ ಕಳೆದರೂ ದುರಸ್ತಿಪಡಿಸಿಲ್ಲ. ಈ ರಸ್ತೆ ಸಂಪೂರ್ಣ ಹಾಳಾಗಿದ್ದು, ಯಾವ ವಾಹನಗಳು ಓಡಾಡಲಾಗದ ಸ್ಥಿತಿ ತಲುಪಿದೆ ಎಂದು ಕಿಡಿಕಾರಿದರು.

ಬಿಲ್ಲೇನಹೊಸಹಳ್ಳಿಯ ಹೊಸಕೆರೆ, ತಾವರೆಕೆರೆ, ಅಮಕನಕಟ್ಟೆ ಕೆರೆಗಳಿಗೆ ಪಕ್ಕದಲ್ಲೇ ಇರುವ ಲಕ್ಷ್ಮಣತೀರ್ಥ ನದಿಯಿಂದ ನೀರು ತುಂಬಿಸಬೇಕು. ತೋಟದೊಳಗೆ ಇರುವ ಗ್ರಾಮದ ಮನೆಗಳಿಗೆ ನಿರಂತರ ಜ್ಯೋತಿ ವ್ಯವಸ್ಥೆ ಕಲ್ಪಿಸಬೇಕು ಎಂದು ಆಗ್ರಹಿಸಿದರು.

ಹುಲಿ, ಕಾಡಾನೆ ಹಾವಳಿ: ನಾಗರಹೊಳೆ ಉದ್ಯಾನದಂಚಿನಲ್ಲಿರುವ ಈ ಗ್ರಾಮಗಳ ಸುತ್ತ ರೈಲ್ವೆ ಹಳಿ ಬೇಲಿ ಅಳವಡಿಕೆ ಯೋಜನೆ ಅಧಕ್ಕೆ ಸ್ಥಗಿತಗೊಂಡಿದೆ. ಹಗಲು ವೇಳೆಯೇ ಹುಲಿ, ಚಿರತೆ, ಕಾಡಾನೆಗಳು ಸೇರಿದಂತೆ ವನ್ಯಜೀವಿಗಳು ಗ್ರಾಮದೊಳಗೆ ನಿರಾತಂಕವಾಗಿ ಓಡಾಡುತ್ತವೆ. ಕಳೆದ ಆರು ತಿಂಗಳಿನಿಂದ ಹುಲಿ ಆಗಾಗ್ಗೆ ಕಾಣಿಸಿಕೊಂಡು ಜೀವ ಭಯ ಹುಟ್ಟಿಸಿದ್ದರೂ ಅರಣ್ಯ ಇಲಾಖೆ ನಿರ್ಲಕ್ಷ್ಯವಹಿಸಿದೆ. ಸಾಕಷ್ಟು ಜಾನುವಾರುಗಳನ್ನು ಕೊಂದು ಹಾಕಿದೆ ಎಂದು ಉದಯ್‌, ಅಪ್ಪಣ್ಣ ಅವಲತ್ತುಕೊಂಡರು.

ಸೌಲಭ್ಯವಂಚಿತ ಹಾಡಿಗಳು: ಬಿಲ್ಲೇನಹೊಸಹಳ್ಳಿ ಹಾಗೂ ಚಂದನಗಿರಿ ಗಿರಿಜನ ಹಾಡಿಗೆ ಮೂಲಭೂತ ಸೌಕರ್ಯ ಕಲ್ಪಿಸಿಲ್ಲ. ಗಿರಿಜನರ ಭೂಮಿಗೆ ನೀರಾವರಿ ಸೌಲಭ್ಯ ನೀಡಿಲ್ಲ. ಜಮೀನಿಗೆ ತೆರಳಲು ರಸ್ತೆ ಸಂಪರ್ಕವಿಲ್ಲ, ಹೀಗೆ ಹತ್ತು ಹಲವು ಸಮಸ್ಯೆಗಳಿದ್ದರೂ ಸ್ಪಂದಿಸಬೇಕಾದ ಅರಣ್ಯ ಇಲಾಖೆ ಮತ್ತು ತಾಲೂಕು ಆಡಳಿತ ನಿರ್ಲಕ್ಷ್ಯವಹಿಸಿದೆ. ಈ ಎಲ್ಲಾ ಸಮಸ್ಯೆಗಳ ಬಗ್ಗೆ ಹೇಳಿ-ಕೇಳಿ ಸುಸ್ತಾಗಿದ್ದೇವೆ.

Advertisement

ಜಡ್ಡುಗಟ್ಟಿರುವ ಆಡಳಿತ, ಸ್ಪಂದಿಸದ ಜನಪ್ರತಿನಿಧಿಗಳ ತಾತ್ಸಾರ ಮನೋಭಾವದಿಂದ ಬೇಸತ್ತು ಚುನಾವಣಾ ಬಹಿಷ್ಕಾರಕ್ಕೆ ಮುಂದಾಗಿದ್ದೇವೆಂದು ಗ್ರಾಮಸ್ಥರು ತಿಳಿಸಿದರು. ಸಭೆಯಲ್ಲಿ ಮೂರು ಗ್ರಾಮಗಳ ಮುಖಂಡರಾದ ಉದಯ, ಪಾಲಾಕ್ಷ, ಜಿ.ಡಿ.ಮೋಹನ್‌, ಅಪ್ಪಣ್ಣ, ವಾಸು, ಕೆ.ರಮೇಶ್‌, ಅಣ್ಣಯ್ಯ, ರಮೇಶ ಸೇರಿದಂತೆ ನೂರಕ್ಕೂ ಹೆಚ್ಚು ಮಂದಿ ಉಪಸ್ಥಿತರಿದ್ದರು. ನಂತರ ಹುಣಸೂರು ನಗರಕ್ಕೆ ಆಗಮಿಸಿ, ಮನವಿ ಪತ್ರವನ್ನು ಶಿರಸ್ತೇದಾರ್‌ ಲೋಕೇಶ್‌ ಅವರಿಗೆ ಸಲ್ಲಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next