Advertisement

2014ಕ್ಕಿಂತ ಮತದಾನ ತುಸು ಹೆಚ್ಚು: ಸಂಜೀವ್‌ಕುಮಾರ್‌

11:36 PM Apr 23, 2019 | Lakshmi GovindaRaju |

ಬೆಂಗಳೂರು: ರಾಜ್ಯದಲ್ಲಿ ಎರಡನೇ ಹಂತದಲ್ಲಿ 14 ಲೋಕಸಭಾ ಕ್ಷೇತ್ರಗಳಲ್ಲಿ ನಡೆದ ಮತದಾನದಲ್ಲೂ ಮತದಾರನಿಂದ ತಕ್ಕ ಮಟ್ಟಿಗೆ ಉತ್ತರ ಸಿಕ್ಕಿಲ್ಲ. 14 ಕ್ಷೇತ್ರದಲ್ಲಿ ಒಟ್ಟಾರೆ ಅಂದಾಜು ಶೇ.67.21ರಷ್ಟು ಮತದಾನವಾಗಿದ್ದು, ಕಳೆದ ಬಾರಿಗಿಂತ ಅಲ್ಪ ಪ್ರಮಾಣದ ಏರಿಕೆ ಕಂಡಿದೆ.

Advertisement

ರಾತ್ರಿ 8 ಗಂಟೆವರೆಗಿನ ಮಾಹಿತಿ ಪ್ರಕಾರ ಒಟ್ಟು 14 ಕ್ಷೇತ್ರಗಳಲ್ಲಿ ಸರಾಸರಿ ಶೇ.67.21ರಷ್ಟು ಮತದಾನ ಆಗಿದೆ. ಜಿಲ್ಲಾ ಚುನಾವಣಾಧಿಕಾರಿಗಳಿಂದ ಮಾಹಿತಿ ಸಂಗ್ರಹಿಸುವ ಪ್ರಕ್ರಿಯೆ ಇನ್ನೂ ಪ್ರಗತಿಯಲ್ಲಿದ್ದು, ಒಟ್ಟಾರೆ ಸರಾಸರಿ ಶೇ.ಪ್ರಮಾಣ ಬುಧವಾರವಷ್ಟೇ ಲಭ್ಯವಾಗಲಿದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್‌ಕುಮಾರ್‌ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

2014ರ ಲೋಕಸಭಾ ಚುನಾವಣೆಯಲ್ಲಿ ಈ 14 ಕ್ಷೇತ್ರಗಳಲ್ಲಿ ಸರಾಸರಿ ಶೇ.66.82ರಷ್ಟು ಮತದಾನ ಆಗಿತ್ತು. ಈ ಬಾರಿ ಈವರೆಗಿನ ಮಾಹಿತಿಯಂತೆ ಶೇ.67.21ರಷ್ಟು ಮತದಾನ ಆಗಿದೆ. ಮೊದಲ ಹಂತದಲ್ಲಿ ಮತದಾನ ನಡೆದ 14 ಕ್ಷೇತ್ರಗಳಲ್ಲಿ ಶೇ.68.81ರಷ್ಟು ಮತದಾನ ನಡೆದಿದೆ.

ಒಟ್ಟಾರೆ ಎರಡೂ ಹಂತಗಳಲ್ಲಿ ಸರಾಸರಿ ಶೇ.68ರಷ್ಟು ಮತದಾನ ನಡೆದಿದ್ದು, 2014ರಲ್ಲಿ 67.20 ರಷ್ಟು ಮತದಾನವಾಗಿತ್ತು. ಎರಡನೇ ಹಂತದಲ್ಲಿ ಇಡೀ ದೇಶದ ಗಮನ ಸೆಳೆದಿದ್ದ ಕಲಬುರಗಿ ಮೀಸಲು ಲೋಕಸಭಾ ಕ್ಷೇತ್ರದಲ್ಲಿ ನೀರಸ ಮತದಾನ ನಡೆದಿದ್ದು, ಅತ್ಯಂತ ಕಡಿಮೆ ಶೇ.57.58ರಷ್ಟು ಮತದಾನ ಆಗಿದೆ.

ಕಳೆದ ಲೋಕಸಭಾ ಚುನಾವಣೆಯಲ್ಲಿ ಈ ಕ್ಷೇತ್ರದಲ್ಲಿ ಶೇ.57.96ರಷ್ಟು ಮತದಾನವಾಗಿತ್ತು. ಜತೆಗೆ, ರಾಯಚೂರು ಲೋಕಸಭಾ ಕ್ಷೇತ್ರದಲ್ಲಿ ಶೇ.57.85ರಷ್ಟು ಕಡಿಮೆ ಮತದಾನ ಆಗಿದೆ. ಕಳೆದ ಬಾರಿ ಇಲ್ಲಿ ಶೆ.58.32ರಷ್ಟು ಮತದಾನ ಆಗಿತ್ತು ಎಂದು ತಿಳಿಸಿದರು.

Advertisement

ಎರಡನೇ ಹಂತದಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ ಅತಿ ಹೆಚ್ಚು ಶೇ.76.28ರಷ್ಟು ಮತದಾನ ಆಗಿದ್ದು, ಕಳೆದ ಚುನಾವಣೆಯಲ್ಲಿ ಇಲ್ಲಿ ಶೇ.72.36ರಷ್ಟು ಮತದಾನ ಆಗಿತ್ತು. ಕಳೆದ ಬಾರಿಗಿಂತಲೂ ಈ ಬಾರಿ ಹೆಚ್ಚು ಮತದಾನ ಅಗಿದೆ.

2014ರ ಲೋಕಸಭಾ ಚುನಾವಣೆಯಲ್ಲಿ ಚಿಕ್ಕೋಡಿಯಲ್ಲಿ ಅತಿ ಹೆಚ್ಚು ಶೇ.74.29ರಷ್ಟು ಮತದಾನ ಆಗಿತ್ತು ಎಂದರು. ಹೆಚ್ಚುವರಿ ಮುಖ್ಯ ಚುನಾವಣಾಧಿಕಾರಿ ಕೆ.ಆರ್‌. ರಮೇಶ್‌ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಹೈ-ಕ ಹಿಂದೆ: ಎರಡನೇ ಹಂತದಲ್ಲಿ ಹೈ-ಕ ಭಾಗದ ಕಲಬುರಗಿ, ಬೀದರ್‌, ರಾಯಚೂರು, ಕೊಪ್ಪಳ ಹಾಗೂ ಬಳ್ಳಾರಿ ಕ್ಷೇತ್ರಗಳಲ್ಲಿ ಕಡಿಮೆ ಮತದಾನ ಅಗಿದೆ. ಕಲಬುರಗಿಯಲ್ಲಿ ಶೇ.57.58, ಬೀದರ್‌ನಲ್ಲಿ ಶೇ.61.40, ರಾಯಚೂರು ಶೇ.57.85, ಕೊಪ್ಪಳ ಶೇ.68.38, ಬಳ್ಳಾರಿಯಲ್ಲಿ ಶೇ.66.06ರಷ್ಟು ಮತದಾನ ಆಗಿದೆ.

ಗಂಟೆವಾರು ಮತ ಪ್ರಮಾಣ
ಬೆಳಿಗ್ಗೆ 9- ಶೇ.7.38
ಬೆಳಿಗ್ಗೆ 11- ಶೇ.20.65
ಮಧ್ಯಾಹ್ನ 1- ಶೇ.36.61
ಮಧ್ಯಾಹ್ನ 3- ಶೇ.49.96
ಸಂಜೆ 5- ಶೇ.60.48
ಸಂಜೆ 6- ಶೇ.67.21

ಹಣ ಜಪ್ತಿ
ಎರಡೂ ಹಂತಗಳಲ್ಲಿ ಜಪ್ತಿ ಮಾಡಿದ್ದು
* 39.4 ಕೋಟಿ ನಗದು.
* 37.8 ಕೋಟಿ ಮೌಲ್ಯದ ಮದ್ಯ (9.6 ಲಕ್ಷ ಲೀ).
* 12.1 ಲಕ್ಷ ಮೌಲ್ಯದ ಮಾದಕ ದ್ರವ್ಯ.
* 9.5 ಕೋಟಿ ರೂ.ಬೆಲೆಬಾಳುವ ಆಭರಣ.
* 1.35 ಕೋಟಿ ರೂ.ಇತರ ರ್ಗೃಹೋಪಯೋಗಿ ವಸ್ತುಗಳು.
ಒಟ್ಟು – 88.26 ಕೋಟಿ ರೂ.

ಎರಡನೇ ಹಂತದ ಚುನಾವಣೆಯಲ್ಲಿ ಮೂಲಸೌಕರ್ಯ ಕೊರತೆ, ಅಕ್ರಮ ಮದ್ಯ ಮಾರಾಟ ಸೇರಿದಂತೆ ಮತ್ತಿತರ ವಿಷಯಗಳಿಗೆ ಬೇಸರಗೊಂಡು 12 ಜಿಲ್ಲೆಗಳ ವಿವಿಧ ಗ್ರಾಮಗಳ ಜನ ಮತದಾನ ಬಹಿಷ್ಕರಿಸಲು ಮುಂದಾಗಿದ್ದರು. ಈ ವೇಳೆ, ಸ್ಥಳೀಯ ಚುನಾವಣಾಧಿಕಾರಿಗಳು ಸ್ಥಳೀಯ ಮುಖಂಡರೊಂದಿಗೆ ಮಾತನಾಡಿ, ಬಹಿಷ್ಕಾರ ಕರೆಯನ್ನು ವಾಪಸ್ಸು ಪಡೆದು ಮತದಾನ ಮಾಡುವಂತೆ ಮನವೊಲಿಸಿ ಮತಗಟ್ಟೆಗೆ ಕರೆ ತಂದರು.
-ಸಂಜೀವ್‌ಕುಮಾರ್‌, ರಾಜ್ಯ ಮುಖ್ಯ ಚುನಾವಣಾಧಿಕಾರಿ.

Advertisement

Udayavani is now on Telegram. Click here to join our channel and stay updated with the latest news.

Next