ಉಡುಪಿ: ಚುನಾವಣಾ ವ್ಯವಸ್ಥೆಯನ್ನು ಶುದ್ಧೀಕರಿಸುವುದು ಸುಲಭದ ಮಾತೇನಲ್ಲ. ಒಂದು ವೇಳೆ ಮತದಾರ ಹಣ, ಆಮಿಷಗಳಿಂದ ದೂರ ಇರುವ ನಿರ್ಧಾರ ಮಾಡಿದರೂ ರಾಜಕೀಯ ಮಂದಿ ಮತ್ತೆ ಮತ್ತೆ ಅತ್ತ ಸೆಳೆಯುವ ಸಾಧ್ಯತೆಗಳೇ ಹೆಚ್ಚು. ಇಂತಹ ವ್ಯವಸ್ಥೆಯನ್ನು ಒಂದಿಷ್ಟಾದರೂ ಶುದ್ಧ ಮಾಡಬೇಕು ಎಂದು ಹೊರಟಿರುವ “ನಮ್ಮ ಭೂಮಿ’ ಸೇವಾ ಸಂಸ್ಥೆಯ ಜತೆಗೆ ಉಡುಪಿಯ ವಿದ್ಯಾರ್ಥಿನಿಯರೂ ಕೂಡ ಕೈಜೋಡಿಸಿ ತಮ್ಮ ಅಳಿಲ ಸೇವೆ ಸಲ್ಲಿಸುತ್ತಿದ್ದಾರೆ.”ನಮ್ಮ ಭೂಮಿ’ ಸಂಸ್ಥೆ ದುಡಿಯುವ ಮಕ್ಕಳಿಗಾಗಿ ಕೆಲಸ ಮಾಡುತ್ತಿರುವ ಜತೆ ಜತೆಗೆ ಗ್ರಾ.ಪಂ.ಹಕ್ಕೊತ್ತಾಯ ಆಂದೋಲನದಲ್ಲಿಯೂ ತೊಡಗಿಸಿಕೊಂಡಿದೆ. ಹಲವು ಚುನಾವಣೆಗಳಲ್ಲಿ ಮತದಾರರ ಜಾಗೃತಿ ಕಾರ್ಯಕ್ರಮದಲ್ಲಿಯೂ ನಿರತವಾಗಿದೆ.
ಕಳೆದ ವಿಧಾನಸಭೆ ಚುನಾವಣೆ ಸಂದರ್ಭ ಸಾಂಕೇತಿಕ ಉಪವಾಸ ಮಾಡುವ ಮೂಲಕ ಮತದಾರರನ್ನು ಜಾಗೃತಿಗೊಳಿಸಲು ಪ್ರಯತ್ನಿ ಸಿತ್ತು. ಈ ಬಾರಿ ಸ್ಟಿಕ್ಕರ್, ಬ್ಯಾಜ್, ಧ್ವಜ, ಬ್ಯಾನರ್‌ಗಳೊಂದಿಗೆ ಕ್ಷೇತ್ರಕ್ಕಿಳಿದಿದೆ. ಇದಕ್ಕೆ ಉಡುಪಿಯ ಎರಡು ಕಾಲೇಜುಗಳ ವಿದ್ಯಾರ್ಥಿನಿಯರು ಸಾಥ್ ನೀಡಿದ್ದಾರೆ. ಒಂದು ದಿನ ಉಡುಪಿಯ ಡಾ| ಜಿ. ಶಂಕರ್ ಬಾಲಕಿಯರ ಸರಕಾರಿ ಕಾಲೇಜಿನ ವಿದ್ಯಾರ್ಥಿನಿಯರು ಹಾಗೂ ಮತ್ತೂಂದು ದಿನ ವೈಕುಂಠ ಬಾಳಿಗಾ ಕಾನೂನು ವಿದ್ಯಾಲಯದ ವಿದ್ಯಾರ್ಥಿಗಳು ಪಾಲ್ಗೊಂಡರು.
ಮನೆ ಮನೆ, ಅಂಗಡಿಗಳಿಗೆ ತೆರಳಿ ಸ್ಟಿಕ್ಕರ್ ಅಂಟಿಸಿದ್ದು ಮಾತ್ರವಲ್ಲ, ರಸ್ತೆಯಲ್ಲಿ ಕೈ ಅಡ್ಡ ಹಿಡಿದು ವಾಹನಗಳನ್ನು ನಿಲ್ಲಿಸಿ ಅದರ ಚಾಲಕರಿಗೂ ನೀಡಿದರು. “ನಾವು ಮತ್ತು ನಮ್ಮ ಮತ ಮಾರಾಟಕ್ಕಿಲ್ಲ’ ಎಂಬ ಘೋಷವಾಕ್ಯ ಮತ್ತು ಕಾಟೂìನ್ ಈ ಸ್ಟಿಕ್ಕರ್‌ನಲ್ಲಿದೆ. ಸಾರ್ವಜನಿಕರಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ವಿದ್ಯಾರ್ಥಿಗಳ ಉತ್ಸಾಹ ಕಂಡ ಅನೇಕ ಮಂದಿ ವಾಹನ ಚಾಲಕರು ಬೇಡ ಎನ್ನದೆ ಸ್ಟಿಕ್ಕರ್ ಸ್ವೀಕರಿಸಿದರು. ವಲಸೆ ಕಾರ್ಮಿಕರ ಪ್ರದೇಶದಲ್ಲೂ ಜಾಗೃತಿ ಕಾರ್ಯಕ್ರಮ ನಡೆದಿದೆ.
ಇನ್ನೊಂದು ವಿಚಾರವೆಂದರೆ, ಸಾಮಾನ್ಯ ವಾಗಿ ರಾಜಕೀಯ ಪಕ್ಷಗಳು ಬೈಕ್ ರ್ಯಾಲಿ ನಡೆಸುತ್ತವೆ. ಆದರೆ “ನಮ್ಮ ಭೂಮಿ’ ಸಂಸ್ಥೆ ಮತದಾರರ ಜಾಗೃತಿಗಾಗಿಯೇ ಬೈಕ್ ರ್ಯಾಲಿ ಕೂಡ ನಡೆಸುವ ಯೋಜನೆ ಹಮ್ಮಿಕೊಂಡಿದೆ ಎನ್ನುತ್ತಾರೆ ಸಹಸಂಯೋಜಕ ಚೆನ್ನವೀರಪ್ಪ ಅವರು.ಚುನಾವಣ ಕಣ ರಂಗೇರುತ್ತಿರು ವಂತೆಯೇ ಮತದಾರರ ಜಾಗೃತಿಯೂ ಸಾಗುತ್ತಿದೆ. ಮತದಾರ ಜಾಗೃತನಾಗುವನೆ -ಕಾದುನೋಡಬೇಕಷ್ಟೆ …
– ಸಂತೋಷ್ ಬೊಳ್ಳೆಟ್ಟು