ಯಲಹಂಕ: ಸಾರ್ವತ್ರಿಕ ಚುನಾವಣೆಗಳ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ಕೇವಲ ಶೇ.50ರಷ್ಟು ಮತದಾನವಾಗುತ್ತಿದೆ. ಈ ನಿಟ್ಟಿನಲ್ಲಿ ಬೆಂಗಳೂರಿಗರ ಮನಸ್ಥಿತಿ ಬದಲಾಗಬೇಕಿದೆ ಎಂದು ಆರ್‌ಜೆ (ರೇಡಿಯೋ ಜಾಕಿ) ದಿಶಾ ಒಬೆರಾಯ್ ಹೇಳಿದರು.
ರೇವಾ ವಿಶ್ವವಿದ್ಯಾಲಯದಲ್ಲಿ ಆಯೋಜಿಸಿದ್ದ ಮತದಾನ ಕುರಿತು ಅರಿವು ಮೂಡಿಸುವ “ಜಾಗೃತಿ ಹಂತ-2′ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಕೊಲ್ಕತಾದಲ್ಲಿ ಜನ ಮತದಾನವನ್ನು ಹಬ್ಬದ ರೀತಿ ಸಂಭ್ರಮಿಸುತ್ತಾರೆ. ಅಲ್ಲಿ ಪ್ರತಿ ಬಾರಿ ಶೇ.90ರಷ್ಟು ಮತದಾನವಾಗುತ್ತದೆ. ಆದರೆ ಹೆಚ್ಚು ವಿದ್ಯಾವಂತರಿರುವ ಬೆಂಗಳೂರಿನಲ್ಲಿ ಬರೀ ಶೇ.50ರಷ್ಟು ಮತದಾನವಗುತ್ತಿದೆ. ಈ ನಿಟ್ಟಿನಲ್ಲಿ ಇಲ್ಲಿನ ವಿದ್ಯಾವಂತ ಮತದಾರರ ಮನಸ್ಥಿತಿ ಬದಲಾಗಬೇಕು ಎಂದರು.
ದಂಡ ವಿಧಿಸಿ: ಆಸ್ಟ್ರೇಲಿಯಾದಲ್ಲಿ ಮತದಾನ ಮಾಡದ ಪ್ರಜೆಗೆ ಅಲ್ಲಿನ ಸರ್ಕಾರ ದಂಡ ವಿಧಿಸುತ್ತದೆ. ಎರಡೆನೇ ಭಾರಿಯೂ ಮತದಾನ ಮಾಡದಿದ್ದರೆ ದಂಡದ ಮೊತ್ತವನ್ನು ದುಪ್ಪಟ್ಟು ಮಾಡಲಾಗುತ್ತದೆ. ಈ ರೀತಿಯ ಕಟ್ಟುನಿಟ್ಟಿನ ಕಾನೂನು ಜಾರಿಗೆ ತಂದರೆ ಮಾತ್ರ ಮತದಾನ ಪ್ರಮಾಣ ಹೆಚ್ಚಿಸಲು ಸಾಧ್ಯ ಎಂದು ಆರ್‌ಜೆ ದಿಶಾ ಅಭಿಪ್ರಾಯಪಟ್ಟರು.
ರೇವಾ ವಿವಿ ಕುಲಪತಿ ಡಾ.ಶ್ಯಾಮರಾಜು ಮಾತನಾಡಿ, ಕಳೆದ ವರ್ಷ ವಿಧಾನಸಭಾ ಚುನಾವಣೆ ವೇಳೆ ಬ್ಯಾಟರಾಯನಪುರ ಕ್ಷೇತ್ರದಲ್ಲಿ ಒಂದೂವರೆ ಲಕ್ಷ ಮನೆಗಳಿಗೆ ಭೇಟಿ ನೀಡಿ, 4 ಲಕ್ಷ ಜನರಿಗೆ ಮತದಾನದ ಕುರಿತು ಜಾಗೃತಿ ಮೂಡಿಸಲಾಗಿತ್ತು. ಈ ಬಾರಿ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಜಾಗೃತಿ ಹಂತ-2ರ ಮೂಲಕ ಒಂದು ವಾರಗಳ ಮತದಾರರ ಮೆನೆಗೆಳಿಗೆ ತೆರಳಿ ಜಾಗೃತಿ ಮೂಡಿಸಲಾಗುವುದು ಎಂದರು.
ಮತದಾನ ಮಾಡಿದರಷ್ಟೇ ವೇತನ: ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಮತದಾನ ಮಾಡದೇ ಇರುವ ನಮ್ಮ ಸಂಸ್ಥೆಯ ಸಿಬ್ಬಂದಿಗೆ ವೇತನ ನೀಡದೇ ಇರಲು ನಿರ್ಧರಿಸಲಾಗಿದೆ. ಈ ಸಂಬಂಧ ನಮ್ಮ ಮಾನವ ಸಂಪನ್ಮೂಲ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದ್ದು, ಮತದಾನದ ಮಾಡಿದ ಪುರಾವೆ ನೀಡಿದ ಸಿಬ್ಬಂದಿಗೆ ವೇತನ ನೀಡುವಂತೆ ತಿಳಿಸಲಾಗಿದೆ ಎಂದರು.