ಹುಣಸೂರು: ತಾಲೂಕಿನ ಅರಸು ಕಲ್ಲಹಳ್ಳಿಯ ಗ್ರಾಮ ಪಂಚಾಯ್ತಿ ಕಟ್ಟಡವನ್ನು ಹುಣಸೂರು-ವಿರಾಜಪೇಟೆ ಹೆದ್ದಾರಿಯ ಬಳಿಯ ಸರ್ಕಾರಿ ಭೂಮಿಯಲ್ಲಿ ನಿರ್ಮಿಸಲು ಹಲವಾರು ಬಾರಿ ಒತ್ತಾಯಿಸಿದ್ದರೂ ಸ್ಪಂದಿಸದಿರುವ ತಾಲೂಕು ಆಡಳಿತದ ಧೋರಣೆಯನ್ನು ಖಂಡಿಸಿ ಕಲ್ಲಹಳ್ಳಿ ಗ್ರಾಪಂ ವ್ಯಾಪ್ತಿಯ ಹಳ್ಳಿಗರು ಈ ಬಾರಿಯ ಚುನಾವಣೆಯನ್ನು ಬಹಿಷ್ಕರಿಸಲು ನಿರ್ಧರಿಸಿದ್ದಾರೆ.
ಈ ಸಂಬಂದ ಕಲ್ಲಹಳ್ಳಿ ಗ್ರಾಪಂ ಗೇಟ್ ಬಳಿ ಹುಣಸೇಗಾಲ, ಮಂಗಳೂರುಮಾಳ, ಮುತ್ತುರಾಯನಹೊಸಹಳ್ಳಿ, ಆಡಿಗನಹಳ್ಳಿಯ ಗ್ರಾಮಸ್ಥರು ಕಲ್ಲಹಳ್ಳಿ ಗ್ರಾಪಂ ಅಧ್ಯಕ್ಷ ತಮ್ಮೇಗೌಡರ ಸಮ್ಮುಖದಲ್ಲಿ ಸೋಮವಾರ ಸಭೆ ನಡೆಸಿದರು.
ಸಭೆಯಲ್ಲಿ ಮಾತನಾಡಿದ ಅಧ್ಯಕ್ಷ ತಮ್ಮೇಗೌಡ, ಮುಖಂಡರಾದ ವೆಂಕಟೇಶ್, ಬೈರು, ಅಪ್ಪಣ್ಣ, ಶಿವರಾಮು, ಜಗದೀಶ್, ಗ್ರಾಪಂ ಕೇಂದ್ರವು ಊರಿನ ಒಳಗಿದ್ದು, ಹೋಗಿ ಬರಲು ತೊಂದರೆಯಾಗುತ್ತಿದೆ. ಇದರಿಂದ ಕೆಲಸ ಕಾರ್ಯಕ್ಕೂ ತೊಡಕಾಗುತ್ತಿದೆ. ಗ್ರಾಪಂ ಕಟ್ಟಡ ದೇವರಾಜು ಅರಸರ ಪುತ್ರಿ ಭಾರತಿ ಅರಸ್‌ಗೆ ಸೇರಿದ್ದು, ಕಟ್ಟಡ ತೆರವಿಗೆ ನೋಟಿಸ್ ನೀಡಿದ್ದಾರೆ.
2017ರಿಂದ ಈವರೆಗೆ ಹಲವಾರು ಬಾರಿ ಗೇಟ್ ಬಳಿ ಇರುವ ಸರ್ವೆ ನಂ.67ರಲ್ಲಿ 5 ಗುಂಟೆ ಜಮೀನಿದ್ದು, ಇಲ್ಲಿ ಗ್ರಾಪಂ ಕೇಂದ್ರ ನಿರ್ಮಿಸಲು ನಿರ್ಣಯ ಕೈಗೊಂಡು ಹತ್ತಾರು ಬಾರಿ ಕಂದಾಯ ಇಲಾಖೆಗೆ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಲಿಲ್ಲ.
ಇದರಿಂದ ಬೇಸತ್ತು ಈ ಬಾರಿಯ ಚುನಾವಣೆ ಬಹಿಷ್ಕರಿಸುತ್ತೇವೆ. ಜೊತೆಗೆ ಚುನಾವಣೆಗೂ ಮುನ್ನ ಅಧಿಕೃತ ಘೋಷಣೆಯಾಗದಿದ್ದಲ್ಲಿ ಗ್ರಾಪಂ ಸದಸ್ಯರು ಸಾಮೂಹಿಕ ರಾಜೀನಾಮೆ ನೀಡಲು ನಿರ್ಧರಿಸಿದ್ದೇವೆಂದು ಘೋಷಿಸಿದರು.
ಮಂಗಳೂರು ಮಾಳದಲ್ಲೂ ಬಹಿಷ್ಕಾರ: ಇದೇ ವೇಳೆ ಮಂಗಳೂರು ಮಾಳ ಗ್ರಾಮದ ಯಜಮಾನ ಬೈರು ಮಾತನಾಡಿ, ತಮ್ಮ ಗ್ರಾಮಕ್ಕೆ ಸಂಪರ್ಕ ರಸ್ತೆ ಕಲ್ಪಿಸಲು ಮನವಿ ಮಾಡಿದ್ದೆವು. ಟೆಂಡರ್ ಆಗಿದೆ ಎಂದು ಎರಡು ವರ್ಷದಿಂದ ಸಬೂಬು ಹೇಳುತ್ತಿದ್ದಾರೆ.
ನಮ್ಮೂರಿಗೆ ರಸ್ತೆ ನಿರ್ಮಿಸಿಕೊಡಬೇಕು ಹಾಗೂ ಗ್ರಾಪಂ ಕೇಂದ್ರವನ್ನು ಗೇಟ್ ಬಳಿಗೆ ಸ್ಥಳಾಂತರಿಸುವವರೆಗೆ ಮಂಗಳೂರು ಮಾಳ ಗ್ರಾಮಸ್ಥರು ಮತದಾನದಲ್ಲಿ ಭಾಗವಹಿಸದಿರುವ ನಿರ್ಣಯ ಕೈಗೊಂಡಿದ್ದೇವೆಂದು ಪ್ರಕಟಿಸಿದರು.
ಈ ವೇಳೆ ಗ್ರಾಪಂ ಮಾಜಿ ಅಧ್ಯಕ್ಷ ಜಗದೀಶ, ಮುಖಂಡರಾದ ಶ್ರೀನಿವಾಸ, ದಿನೇಶ ಸೇರಿದಂತೆ 200ಕ್ಕೂ ಹೆಚ್ಚು ಗ್ರಾಮಸ್ಥರು ಉಪಸ್ಥಿತರಿದ್ದರು.