Advertisement

ಯಾರ ಕಡೆ ಜನಾದೇಶ?

12:27 PM May 26, 2019 | Team Udayavani |

ಹೊಸದಿಲ್ಲಿ: ಕಳೆದ ಎರಡು ತಿಂಗಳಿಂದ ಲೋಕ”ಸಮರ’ದ ಜಟಾಪಟಿಯಲ್ಲಿ ಮುಳುಗಿದ್ದ ಜಗತ್ತಿನ ಅತೀ ದೊಡ್ಡ ಪ್ರಜಾಪ್ರಭುತ್ವ ದೇಶದ “ಕದನ’ ಕುತೂಹಲಕ್ಕೆ ಗುರುವಾರ ತೆರೆಬೀಳಲಿದೆ. 542 ಲೋಕಸಭಾ ಕ್ಷೇತ್ರಗಳಿಗೆ ನಡೆದ ಚುನಾವಣೆಯ ಮತ ಎಣಿಕೆ ಸಂಜೆ ವೇಳೆಗೆ ಬಹುತೇಕ ಪೂರ್ಣವಾಗಲಿದ್ದು, ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ, ಮಾಜಿ ಪ್ರಧಾನಿ ದೇವೇಗೌಡ ಸಹಿತ ರಾಜಕೀಯ ಘಟಾನುಘಟಿಗಳ ಭವಿಷ್ಯಕ್ಕೆ ಸಂಬಂಧಿಸಿದ ಜನಾದೇಶವು ಬಹಿರಂಗವಾಗಲಿದೆ.

Advertisement

ದೇಶಾದ್ಯಂತ ಬೆಳಗ್ಗೆ 8 ಗಂಟೆಗೆ ಮತ ಎಣಿಕೆ ಪ್ರಕ್ರಿಯೆ ಆರಂಭವಾಗಲಿದ್ದು, ಸಂಜೆ ವೇಳೆಗೆ ಒಂದು ಹಂತಕ್ಕೆ ರಾಜಕೀಯ ಭವಿಷ್ಯದ ಅಂದಾಜು ಸಿಗಲಿದೆ. ಈ ಬಾರಿ ಮತ ಎಣಿಕೆಯ ಬಳಿಕ ಇವಿಎಂ ಹಾಗೂ ವಿವಿಪ್ಯಾಟ್‌ಗಳ ಮತಗಳ ಹೋಲಿಕೆಯೂ ನಡೆಯುವ ಕಾರಣ ಫ‌ಲಿತಾಂಶ ಘೋಷಣೆ ವಿಳಂಬ ವಾಗಲಿದೆ ಎಂದು ಚುನಾವಣ ಆಯೋಗವೇ ಹೇಳಿದೆ. ಇದುವರೆಗೆ ಮೊದಲಿಗೆ ಅಂಚೆ ಮತಗಳ ಎಣಿಕೆ ಕಾರ್ಯ ಮುಗಿಸಿ ಅನಂತರ ಇವಿಎಂನಲ್ಲಿನ ಮತಗಳನ್ನು ಎಣಿಕೆ ಆರಂಭಿಸಲಾಗುತ್ತಿತ್ತು. ಆದರೆ ಈ ಬಾರಿ ಅಂಚೆ ಮತಗಳು ಮತ್ತು ಇವಿಎಂ ಮತಗಳ ಎಣಿಕೆ ಕಾರ್ಯ ಏಕಕಾಲಕ್ಕೆ ಆರಂಭವಾಗಲಿದೆ.

ಎ.11ರಿಂದ ಮೇ 19ರ ವರೆಗೆ ಒಟ್ಟು 7 ಹಂತ ಗಳಲ್ಲಿ ಮತದಾನ ನಡೆದಿದೆ. ದೇಶದ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಅತೀ ಹೆಚ್ಚು ಅಂದರೆ ಶೇ.67.11ರಷ್ಟು ಮತದಾನ ದಾಖಲಾಗಿದೆ. ಈ ಲೋಕಸಭೆ ಚುನಾವಣೆ ವೇಳೆ “ಚೌಕಿದಾರ್‌ ಚೋರ್‌ ಹೇ’ಯಿಂದ ಹಿಡಿದು “ಭ್ರಷ್ಟಾಚಾರಿ ನಂ.1′, “ಖಾಕಿ ಅಂಡರ್‌ವೆರ್‌’ವರೆಗೂ ವಿವಾದಾತ್ಮಕ ಹೇಳಿಕೆಗಳೇ ಹೆಚ್ಚು ಪ್ರಚಾರ ಪಡೆದಿದ್ದವು.

4-5 ಗಂಟೆ ತಡ
ಮೊದಲ ಬಾರಿಗೆ ಪ್ರತಿ ವಿಧಾನಸಭೆ ಕ್ಷೇತ್ರದ 5 ಮತಗಟ್ಟೆಗಳ ಒಂದು ಇವಿಎಂ ಮತ್ತು ವಿವಿಪ್ಯಾಟ್‌ಗಳ ಮತಗಳ ಹೋಲಿಕೆ ಪ್ರಕ್ರಿಯೆ ನಡೆಯಲಿದೆ. ಮತ ಎಣಿಕೆ ಮುಗಿದ ಬಳಿಕ ಈ ಪ್ರಕ್ರಿಯೆ ಆರಂಭವಾಗಲಿದೆ. ತದನಂತರವೇ ನಿಖರ ಫ‌ಲಿತಾಂಶ ಹೊರಬೀಳಲಿದೆ. ಹೀಗಾಗಿ ಈ ಬಾರಿ ಫ‌ಲಿತಾಂಶ 4ರಿಂದ 5 ಗಂಟೆ ವಿಳಂಬವಾಗಿ ಪ್ರಕಟವಾಗಬಹುದು ಎಂದು ಆಯೋಗ ತಿಳಿಸಿದೆ. ಒಟ್ಟಾರೆ 10.3 ಲಕ್ಷ ಮತಗಟ್ಟೆಗಳ ಪೈಕಿ 20,600 ಮತಗಟ್ಟೆಗಳಲ್ಲಿ ಈ ಪ್ರಕ್ರಿಯೆ ನಡೆಯಲಿದೆ.

ಹಿಂಸಾಚಾರ ಸಾಧ್ಯತೆ; ಕಟ್ಟೆಚ್ಚರ
ಮತ ಎಣಿಕೆ ಮುನ್ನಾ ದಿನವಾದ ಬುಧವಾರವೇ ಕೇಂದ್ರ ಗೃಹ ಸಚಿವಾಲಯವು ದೇಶಾದ್ಯಂತ ಕಟ್ಟೆಚ್ಚರ ಘೋಷಣೆ ಮಾಡಿದೆ. ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಈ ಸೂಚನೆ ನೀಡಲಾಗಿದ್ದು, ಫ‌ಲಿತಾಂಶದ ದಿನವೇ ಹಿಂಸಾಚಾರ ನಡೆಯುವ ಸಾಧ್ಯತೆ ಇದೆ ಎಂದು ಹೇಳಿದೆ. ದೇಶದ ವಿವಿಧ ಭಾಗಗಳಲ್ಲಿ ವಿಶೇಷವಾಗಿ ಉತ್ತರಪ್ರದೇಶ, ಪಶ್ಚಿಮ ಬಂಗಾಲ, ಬಿಹಾರ ಮತ್ತು ತ್ರಿಪುರಾಗಳಲ್ಲಿ ಕೆಲವು ಸಂಘ ಸಂಸ್ಥೆಗಳು ಹಾಗೂ ವ್ಯಕ್ತಿಗಳು ಹಿಂಸಾಚಾರಕ್ಕೆ ಕರೆ ನೀಡಿದ್ದು, ಫ‌ಲಿತಾಂಶದ ಬೆನ್ನಲ್ಲೇ ಗಲಾಟೆ ಉಂಟಾಗುವ ಸಾಧ್ಯತೆಯಿದೆ. ಹೀಗಾಗಿ ಶಾಂತಿ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳುವಂತೆ ಎಲ್ಲ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳು ಮತ್ತು ಪೊಲೀಸ್‌ ಪ್ರಧಾನ ನಿರ್ದೇಶಕರಿಗೆ ಕೇಂದ್ರ ಗೃಹ ಇಲಾಖೆ ಎಚ್ಚರಿಕೆಯ ಸೂಚನೆ ಕಳುಹಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next