Advertisement

ಟಿಕೆಟ್‌ ಮೇಲೆ ಮತದಾನ ಜಾಗೃತಿ ಸಂದೇಶ

12:21 PM Apr 22, 2018 | |

ಬೆಂಗಳೂರು: ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಶನಿವಾರ ಪ್ರಯಾಣಿಕರಿಗೆ ಅಚ್ಚರಿ ಕಾದಿತ್ತು. ಬಸ್‌ ಏರಿದ ತಕ್ಷಣ ನಿರ್ವಾಹಕರು ಟಿಕೆಟ್‌ ಕೈಗಿಟ್ಟರು. ಅದರಲ್ಲಿ ಎಲ್ಲಿಂದ ಎಲ್ಲಿಗೆ ಪ್ರಯಾಣ ಮತ್ತು ಪ್ರಯಾಣ ದರ ಎಷ್ಟು ಎಂಬುದರ ಜತೆಗೆ ಮತದಾನದ ಹಕ್ಕು ನೆನಪಿಸುವ ಸಂದೇಶವೂ ಇತ್ತು.

Advertisement

ಹೌದು, ಸಾಮಾಜಿಕ ಜಾಲತಾಣ, ಮೊಬೈಲ್‌ ಸಂದೇಶ, ಜಾಹಿರಾತುಗಳ ನಡುವೆ ಕೆಎಸ್‌ಆರ್‌ಟಿಸಿ ಕೂಡ ಸದ್ದಿಲ್ಲದೆ ಮತದಾನ ಜಾಗೃತಿ ಅಭಿಯಾನ ಆರಂಭಿಸಿದೆ. ಶನಿವಾರದಿಂದ ಬಸ್‌ನಲ್ಲಿ ಪ್ರಯಾಣಿಸುವ ಪ್ರತಿ ಪ್ರಯಾಣಿಕರ ಟಿಕೆಟ್‌ನ ಕೆಳಭಾಗದಲ್ಲಿ “ಮೇ 12ರಂದು ಮತದಾನ ಮಾಡುವ ಮೂಲಕ ನಿಮ್ಮ ಹಕ್ಕನ್ನು ಚಲಾಯಿಸಿ’ ಎಂದು ಸೂಚಿಸಲಾಗಿದೆ.

ನಿತ್ಯ ಕೆಎಸ್‌ಆರ್‌ಟಿಸಿ 8,800 ಬಸ್‌ಗಳು ಕಾರ್ಯಾಚರಣೆ ಮಾಡುತ್ತಿದ್ದು, ಅದರಲ್ಲಿ 28 ಲಕ್ಷ ಜನ ಪ್ರಯಾಣಿಸುತ್ತಾರೆ. ಈ ಪೈಕಿ ಶೇ. 20ರಷ್ಟು ಇ-ಬುಕಿಂಗ್‌ ಮೂಲಕ ಟಿಕೆಟ್‌ ಕಾಯ್ದಿರಿಸಲಾಗುತ್ತದೆ. ಉಳಿದ 22 ಲಕ್ಷ ಪ್ರಯಾಣಿಕರು ನೇರವಾಗಿ ನಿರ್ವಾಹಕರಿಂದ ಟಿಕೆಟ್‌ ಪಡೆದು ಪ್ರಯಾಣಿಸುತ್ತಾರೆ. ಅವರೆಲ್ಲರಿಗೂ ಈ ಜಾಗೃತಿ ಸಂದೇಶ ಮುದ್ರಿತ ರೂಪದಲ್ಲಿ ತಲುಪಲಿದೆ ಎಂದು ಕೆಎಸ್‌ಆರ್‌ಟಿಸಿ ಅಧಿಕಾರಿಗಳು ತಿಳಿಸಿದ್ದಾರೆ. 

ಬಿಎಂಟಿಸಿ ಬಸ್‌ಗಳಲ್ಲೂ ಅಭಿಯಾನ?: ಕೆಎಸ್‌ಆರ್‌ಟಿಸಿ ಜಾಗೃತಿ ಅಭಿಯಾನದ ಬೆನ್ನಲ್ಲೇ ಬಿಎಂಟಿಸಿ ಕೂಡ ಈ ನಿಟ್ಟಿನಲ್ಲಿ ಚಿಂತನೆ ನಡೆಸಿದ್ದು, ಬಸ್‌ಗಳಲ್ಲಿ ಮತದಾನದ ಅರಿವು ಮೂಡಿಸುವ ಸಂದೇಶಗಳನ್ನು ಬಿತ್ತರಿಸಲು ಉದ್ದೇಶಿಸಿದೆ. ಬಹುತೇಕ ಬಸ್‌ಗಳ ಒಳಭಾಗದಲ್ಲಿ ಎಲೆಕ್ಟ್ರಾನಿಕ್‌ ಫ‌ಲಕಗಳು ಇವೆ.

ಅವುಗಳಲ್ಲಿ ಪ್ರಯಾಣಿಕರಿಗೆ ಮತದಾನದ ಮಹತ್ವ, ಚುನಾವಣೆ ದಿನ ಮತಗಟ್ಟೆಗೆ ತೆರಳಿ ಹಕ್ಕು ಚಲಾಯಿಸುವಂತೆ ಮನವಿ ಮಾಡುವ ಸಂದೇಶಗಳನ್ನು ನಿರಂತರವಾಗಿ ಬಿತ್ತರಿಸಲು ಉದ್ದೇಶಿಸಿದೆ. ಬಿಎಂಟಿಸಿ ವ್ಯಾಪ್ತಿಯಲ್ಲಿ ಸುಮಾರು 6 ಸಾವಿರ ಬಸ್‌ಗಳಿದ್ದು, ಆ ಪೈಕಿ ಗುತ್ತಿಗೆ ನೀಡಿರುವುದನ್ನು ಹೊರತುಪಡಿಸಿ ಉಳಿದ ಬಸ್‌ಗಳಲ್ಲಿ ಅಳವಡಿಕೆಗೆ ಚಿಂತನೆ ನಡೆದಿದೆ.

Advertisement

ನಗರದ ಬಸ್‌ಗಳಲ್ಲಿ ಪ್ರಯಾಣಿಕರು ತುಂಬಾ ಸಮಯ ಕಳೆಯುವುದರಿಂದ ಇದು ಪರಿಣಾಮಕಾರಿಯೂ ಆಗಲಿದೆ ಎಂದು ನಿಗಮದ ವ್ಯವಸ್ಥಾಪಕ ನಿರ್ದೇಶಕ ವಿ. ಪೊನ್ನುರಾಜ್‌ ಮಾಹಿತಿ ನೀಡಿದರು. ಟಿಕೆಟ್‌ಗಳಲ್ಲಿ ಈ ರೀತಿ ಮುದ್ರಿಸುವುದು ಕಷ್ಟ. ಯಾಕೆಂದರೆ, ಬಿಎಂಟಿಸಿ ಟಿಕೆಟ್‌ ವಿತರಣಾ ಯಂತ್ರ ಮತ್ತು ಸ್ಮಾರ್ಟ್‌ಕಾರ್ಡ್‌ ಹಾಗೂ ಪೂರ್ವಮುದ್ರಿತ ದಿನದ ಪಾಸುಗಳು ಸೇರಿದಂತೆ ಎಲ್ಲ ಕಡೆಗೂ ಬದಲಾವಣೆ ಮಾಡಬೇಕಾಗುತ್ತದೆ. ಇದಕ್ಕೆ ಸಾಕಷ್ಟು ಸಮಯ ಹಿಡಿಯುತ್ತದೆ. ಆದ್ದರಿಂದ ಈ ಆಲೋಚನೆ ಕೈಬಿಡಲಾಗಿದೆ ಎಂದೂ ಅವರು ಸ್ಪಷ್ಟಪಡಿಸಿದರು. 

ಸೂಚನೆ ಬಂದರೆ ಪರಿಶೀಲನೆ: ನಗರದಲ್ಲಿ ಸಂಚರಿಸುವ ಉಪನಗರ ರೈಲುಗಳಲ್ಲಿ ಸದ್ಯಕ್ಕೆ ಮತದಾನ ಜಾಗೃತಿ ಮೂಡಿಸುವ ಅಭಿಯಾನದ ಬಗ್ಗೆ ಯಾವುದೇ ಆಲೋಚನೆಗಳಿಲ್ಲ. ಆದರೆ ಚುನಾವಣಾ ಆಯೋಗದಿಂದ ಸೂಚನೆ ಬಂದರೆ, ಈ ನಿಟ್ಟಿನಲ್ಲಿ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ನೈರುತ್ಯ ರೈಲ್ವೆ ಹಿರಿಯ ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕ ಎನ್‌.ಎಸ್‌. ಶ್ರೀಧರಮೂರ್ತಿ ತಿಳಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next