Advertisement

ಮತದಾನ ನಮ್ಮ ಹಕ್ಕು: ಮತ ಹಾಕಿ, ಆದರೆ ಮಾರಿಕೊಳ್ಳಬೇಡಿ..

08:10 AM Apr 20, 2018 | Team Udayavani |

ಕುಂದಾಪುರ: ಚುನಾವಣೆಗೆ ಬಿರುಸಿನ ಸಿದ್ಧತೆಗಳು ನಡೆಸಿರುವಂತೆಯೇ, ಮತ್ತೂಂದೆಡೆ ಮತದಾನ ಪ್ರಮಾಣ ಹೆಚ್ಚಿಸಲು ಜಾಗೃತಿ ಕಾರ್ಯಕ್ರಮಗಳು ನಡೆಯುತ್ತಿವೆ. ಇದಕ್ಕೆ ಪೂರಕವಾಗಿ ಪುಟಾಣಿಗಳೂ ಜಾಗೃತಿಗೆ ಇಳಿದಿದ್ದು, ಅಚ್ಚರಿ ಮೂಡಿಸಿದ್ದಾರೆ. ನಮಗೆ ಮತದಾನಕ್ಕೆ ಇನ್ನೂ ಅವಕಾಶ ಸಿಕ್ಕಿಲ್ಲದಿದ್ದರೂ ನಿಮಗೆ ಅಮೂಲ್ಯ ಅವಕಾಶ ಸಿಕ್ಕಿದೆ. ಅದನ್ನು ಸರಿಯಾದ ರೀತಿಯಲ್ಲಿ, ಒಳ್ಳೆಯ ವ್ಯಕ್ತಿಗೆ ಮತ ಹಾಕುವ ಮೂಲಕ ಮತದ ಮೌಲ್ಯವನ್ನು ಹೆಚ್ಚಿಸಿ ಎಂದು ಕುಂದಾಪುರ ಭಾಗದ ವಿವಿಧೆಡೆಗಳಲ್ಲಿ  ಮಕ್ಕಳ ಸಂಘದವರು ಮನೆ- ಮನೆಗೆ ಭೇಟಿ ನೀಡಿ ಜಾಗೃತಿ ಮೂಡಿಸಿದ್ದಾರೆ. ಈ ಕಾರ್ಯಕ್ರಮದಲ್ಲಿ 5-6 ವರ್ಷದ ಪುಟಾಣಿಗಳಿಂದ ಹಿಡಿದು, 18 ವರ್ಷದೊಳಗಿನ ಮಕ್ಕಳು ಭಾಗಿಯಾಗಿದ್ದಾರೆ. ಕಾರ್ಯಕ್ರಮಕ್ಕೆ ಜಿಲ್ಲಾ ಸ್ವೀಪ್‌ ಸಮಿತಿ, ಗ್ರಾ.ಪಂ. ಹಕ್ಕೊತ್ತಾಯ ಆಂದೋಲನ ಹಾಗೂ ದಿ ಕನ್ಸರ್ನ್ಡ್ ಡ್‌ ಫಾರ್‌ ವರ್ಕಿಂಗ್‌ ಚಿಲ್ಡ್ರನ್‌ ಸಂಸ್ಥೆಗಳು ಸಲಹೆ, ಸಹಕಾರ ನೀಡುತ್ತಿದ್ದಾರೆ. 

Advertisement

ಎಲ್ಲೆಲ್ಲಿ ಮತಜಾಗೃತಿ
ಚುನಾವಣೆ ಘೋಷಣೆಯಾದಾಗಿನಿಂದ ಈ ಕಾರ್ಯಕ್ರಮ ನಡೆಯುತ್ತಿದೆ. ಪಡುವರಿಯ ಕೋಟೆಬಾಗಿಲು ಭಾಗದಲ್ಲಿ ‘ಸೃಷ್ಟಿ ಮಕ್ಕಳ ಸಂಘ’, ಬೇಳೂರಿನಲ್ಲಿ ‘ಮಹಾತ್ಮ ಗಾಂಧಿ ಮಕ್ಕಳ ಸಂಘ’, ಜಡ್ಕಲ್‌ನಲ್ಲಿ ‘ತೃಪ್ತಿ’, ತಲ್ಲೂರಿನಲ್ಲಿ “ಬೆಳಕು’, ಗೋಳಿಹೊಳೆಯಲ್ಲಿ ‘ಮಕ್ಕಳ ಸೈನ್ಯ’, ಕಂದಾವರದಲ್ಲಿ ‘ನಕ್ಷತ್ರ’, ಹೊಂಬಾಡಿ- ಮಂಡಾಡಿಯಲ್ಲಿ ‘ಶ್ರೀಶಾಂತಿ’, ಇಡೂರು- ಕುಂಜ್ಞಾಡಿಯಲ್ಲಿ ‘ಸೂರ್ಯೋದಯ’, ಹೋಸಾಡಿನಲ್ಲಿ ‘ಪ್ರಗತಿ’, ಮಕ್ಕಳ ಸಂಘಗಳ ಸದಸ್ಯರು ವಿವಿಧ ತಂಡಗಳಾಗಿ ಮತಜಾಗೃತಿ ಸ್ಟಿಕ್ಕರ್‌ ನೀಡುತ್ತಿದ್ದಾರೆ. ಜತೆಗೆ ಕಡ್ಡಾಯವಾಗಿ ಮತದಾನ ಮಾಡುವಂತೆ ಕರೆ ನೀಡುತ್ತಿದ್ದಾರೆ.

285 ಮಂದಿ ಭಾಗಿ, 250 ಸ್ಟಿಕ್ಕರ್‌ ಹಂಚಿಕೆ
ಮಕ್ಕಳ ಮನೆ-ಮನೆಗೆ ಭೇಟಿ ಅಭಿಯಾನ ಕಂದಾವರದಲ್ಲಿ 16 ಮಂದಿ, ಗೋಳಿಹೊಳೆಯಲ್ಲಿ 35, ಪಡುವರಿಯಲ್ಲಿ 72, ಬೇಳೂರಲ್ಲಿ 19, ಇಡೂರು- ಕುಂಜ್ಞಾಡಿಯಲ್ಲಿ 42, ತಲ್ಲೂರಲ್ಲಿ 25, ಹೋಸಾಡಿನಲ್ಲಿ 28, ಜಡ್ಕಲ್‌ನಲ್ಲಿ 20, ಹೊಂಬಾಡಿ- ಮಂಡಾಡಿಯಲ್ಲಿ 28 ಮಂದಿ ಸೇರಿ ಒಟ್ಟು ಈವರೆಗೆ 285 ಮಂದಿ ಮತಜಾಗೃತಿಯ ಕುರಿತು ಅರಿವು ಮೂಡಿಸಿದರೆ, ಮನೆ-ಮನೆಗೆ ತೆರಳಿ 251 ಸ್ಟಿಕ್ಕರ್‌ಗಳನ್ನು ಅಂಟಿಸಿದ್ದಾರೆ. 

ಮತದಾನ ಮಾಡಿ, ಮಾರಿಕೊಳ್ಳಬೇಡಿ..
ಮತದಾನ ನಮ್ಮ ಹಕ್ಕು. ಮತ ಮಾರಿದರೆ ನಮ್ಮನ್ನು ನಾವು ಮಾರಿಕೊಂಡಂತೆ. ನಿಮ್ಮ ಇಷ್ಟದ ಅಭ್ಯರ್ಥಿಗೆ ಸ್ವಾಭಿಮಾನದಿಂದ ಮತ ಚಲಾಯಿಸಿ. ಮತದಾನ ಮಾಡಿದರೆ ಮಾತ್ರ ನಮ್ಮನ್ನು ಆಳುವವರನ್ನು ನಾಳೆ ನಾವು ಪ್ರಶ್ನಿಸಬಹುದು. 
– ವಿಶ್ಮಿತಾ, ರಶ್ಮಿತಾ ಜಡ್ಕಲ್‌ ಹೈಸ್ಕೂಲ್‌ ವಿದ್ಯಾರ್ಥಿಗಳು

80ಕ್ಕೂ ಹೆಚ್ಚು ಮಕ್ಕಳು ಭಾಗಿ
ಅಭಿಯಾನದಲ್ಲಿ 8 ಸಂಘಗಳ 80 ಕ್ಕೂ ಹೆಚ್ಚು ಮಕ್ಕಳು ಪಾಲ್ಗೊಂಡಿದ್ದಾರೆ. ಅವರೇ ಸ್ವತಃ ಹೆಚ್ಚಿನ ಆಸಕ್ತಿಯಿಂದ ಈ ಕಾರ್ಯದಲ್ಲಿ ನಮ್ಮೊಂದಿಗೆ ಭಾಗವಹಿಸುತ್ತಿರುವುದು ನಿಜಕ್ಕೂ ಶ್ಲಾಘನೀಯ.
– ಕೃಪಾ ಎಂ. ಎಂ., ಸಂಯೋಜಕಿ, ದಿ ಕನ್ಸರ್‌°ಡ್‌ ಫಾರ್‌ ವರ್ಕಿಂಗ್‌ ಚಿಲ್ಡ್ರನ್‌ ಸಂಸ್ಥೆ

Advertisement

— ಪ್ರಶಾಂತ್‌ ಪಾದೆ

Advertisement

Udayavani is now on Telegram. Click here to join our channel and stay updated with the latest news.

Next