ಚಿತ್ರದುರ್ಗ: ಚುನಾವಣೆಯಲ್ಲಿ ಅಭ್ಯರ್ಥಿಗಳು ಮತದಾರರಿಗೆ ಹಣದ ಕವರ್ ಕೊಟ್ಟು ಮತ ಹಾಕಿಸಿಕೊಳ್ಳುವುದು ಎಲ್ಲರಿಗೂ ಗೊತ್ತಿರುವ ಸತ್ಯ. ಆದರೆ, ಕೆಲವೊಮ್ಮೆ ಅಭ್ಯರ್ಥಿ, ಪಕ್ಷವನ್ನು ನೋಡಿ ಮತದಾರರೇ ನೋಟು-ವೋಟು ಕೊಡುವುದನ್ನು ಕಂಡಿದ್ದೇವೆ.
ಇಂಥದ್ದೇ ಘಟನೆ ವಿಧಾನ ಪರಿಷತ್ ಚಿತ್ರದುರ್ಗ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿರುವ ಕೆ.ಎಸ್.ನವೀನ್ ಅವರಿಗೆ ಮತದಾರರಾಗಿರುವ ಗ್ರಾಮ ಪಂಚಾಯಿತಿ ಸದಸ್ಯರುಗಳು ಚುನಾವಣೆ ವೆಚ್ಚಕ್ಕಾಗಿ ಹಣದ ಕವರ್ ನೀಡಿದ್ದಾರೆ.
ಇದನ್ನೂ ಓದಿ: ಅವಧಿ ಮುಗಿದ್ರೂ ಲಸಿಕೆಗೆ ಬಾರದ 10 ಲಕ್ಷ ಜನ..!
ಚುನಾವಣೆಗೆ ಇನ್ನು ನಾಲ್ಕು ದಿನ ಮಾತ್ರ ಬಾಕಿ ಇರುವಾಗ ಸೋಮವಾರ ಬೆಳಗ್ಗೆ ಚಿತ್ರದುರ್ಗದಲ್ಲಿರುವ ಅಭ್ಯರ್ಥಿ ಕೆ.ಎಸ್.ನವೀನ್ ಅವರ ಮನೆಗೆ ಆಗಮಿಸಿದ ಚಿತ್ರದುರ್ಗ ತಾಲೂಕಿನ ಸೊಂಡೇಕೊಳ ಹಾಗೂ ಹೊಳಲ್ಕೆರೆ ತಾಲೂಕಿನ ಮದ್ದೇರು ಗ್ರಾಮ ಪಂಚಾಯಿತಿ ಸದಸ್ಯರು ಎರಡು ಬಾರಿ ಚುನಾವಣೆಯಲ್ಲಿ ಸೋತಿದ್ದೀರಿ. ನಿಮಗೆ ನೋವಿದೆ. ಇಂತಹ ಸಂದರ್ಭದಲ್ಲಿ ಮಾನವೀಯತೆಯಿಂದ ವರ್ತಿಸಬೇಕಾಗಿರುವುದು ನಮ್ಮ ಜವಾಬ್ದಾರಿಯಾಗಿದೆ. ನಿಮ್ಮ ಬೆಂಬಲಕ್ಕೆ ನಾವಿದ್ದೇವೆ ಎಂದು ಹೇಳಿ ಹಣದ ಕವರ್ ಕೈಗಿಟ್ಟಿದ್ದಾರೆ.
ಇದರಿಂದ ಭಾವುಕರಾದ ಕೆ.ಎಸ್.ನವೀನ್ ಅವರು, ಮತದಾರರಿಗೆ ಕವರ್ ಕೊಡುವುದು ಸಾಮಾನ್ಯ ಆದರೆ, ಅಭ್ಯರ್ಥಿಗೆ ಮತದಾರರು ಕವರ್ ನೀಡಿರುವುದು ಮನಸ್ಸು ತುಂಬಿ ಬಂದಿದೆ. ನಿಮ್ಮೆಲ್ಲರ ಆಶೀರ್ವಾದ ಇದ್ದರೆ ಸಾಕು. ಚುನಾವಣೆಯಲ್ಲಿ ಬೆಂಬಲಿಸಿ ಎಂದು ಕೈ ಮುಗಿದಿದ್ದಾರೆ.
ಈ ವೇಳೆ ಗ್ರಾಮ ಪಂಚಾಯಿತಿ ಸದಸ್ಯರಾದ ಸಂತೋಷ್, ಭಾರತಿ, ವಿಶಾಲಮ್ಮ, ಮಧುಕುಮಾರ್, ಲಕ್ಷ್ಮಮ್ಮ, ಕಲ್ಲಪ್ಪ, ಓಬಮ್ಮ, ಉಮೇಶ, ಜಯಪ್ಪ, ಉಷ, ಶಿವಮ್ಮ, ಮಲ್ಲಮ್ಮ, ಎಂ.ಡಿ.ಜಗದೀಶ್, ಗೋವಿಂದನಾಯ್ಕ, ಮಂಜುನಾಥ, ರಾಜಪ್ಪ, ರಂಗಸ್ವಾಮಿ, ರವಿ ಪಕ್ಷಾತೀತವಾಗಿ ಬೆಂಬಲ ವ್ಯಕ್ತಪಡಿಸಿದ್ದಾರೆ.