ಬೆಂಗಳೂರು: ರಾಜಕೀಯ ವ್ಯವಸ್ಥೆ ಇತ್ತಿಚಿನ ದಿನಗಳಲ್ಲಿ ಕಲುಷಿತಗೊಂಡಿದ್ದು ಇದಕ್ಕೆ ಮತದಾರರೇ ಕಾರಣ ಎಂದು ನಿವೃತ್ತ ನ್ಯಾಯಮೂರ್ತಿ ಎ.ಜೆ.ಸದಾಶಿವ ಹೇಳಿದರು. ನಗರದ ಹನುಮಂತನಗರದ ಸಂಸ್ಕೃತಿ ವೇದಿಕೆ 20 ವರ್ಷದ ಅಂಗವಾಗಿ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಮತದಾರ ಯಲ್ಲಿಯವರೆಗೆ ತನ್ನನ್ನು ತಾನು ಮಾರಿಕೊಳ್ಳುತ್ತಾನೋ ಅಲ್ಲಿಯವರೆಗೂ ಆರೋಗ್ಯ ಪೂರ್ಣ ವ್ಯವಸ್ಥೆ ಅಸಾಧ್ಯ ಎಂದು ತಿಳಿಸಿದರು. ಈ ಹಿಂದೆ ಉತ್ತಮರು ಆಯ್ಕೆ ಆಗುತ್ತಿದ್ದರು. ಜನರು ಯೋಗ್ಯರನ್ನು ಗುರುತಿಸುತ್ತಿದ್ದರು. ಆದರೆ ಈಗ ಹಣಕ್ಕೆ ತಮ್ಮ ಮತ ಮಾರಾಟ ಮಾಡಿಕೊಳ್ಳುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಮಾಜಿ ಶಾಸಕ ವೈ.ಎಸ್.ವಿ. ದತ್ತ ಮಾತನಾಡಿ ರಾಜಕೀಯ ವ್ಯವಸ್ಥೆ ಹೇಸಿಗೆಯನ್ನುಂಟು ಮಾಡಿದೆ.ಇತ್ತೀಚಿನ ರಾಜಕೀಯ ಬೆಳವಣಿಗೆಗಳು ಜನರಿಗೂ ಅಸಹನೆ ತಂದಿದೆ. ರಾಜಕೀಯ ಕ್ಷೇತ್ರ ಸೇರಿದಂತೆ ಎಲ್ಲ ಕ್ಷೇತ್ರದಲ್ಲಿ ಮಾಲಿನ್ಯ ಉಂಟಾಗಿದ್ದು ಈ ಮಾಲಿನ್ಯವನ್ನು ತೊಡೆದು ಹಾಕಬೇಕಾಗಿದೆ ಎಂದರು.
ನಿವೃತ್ತ ನ್ಯಾ.ಎನ್ ಕುಮಾರ್ ಮಾತನಾಡಿ, ಸಮಾಜದಲ್ಲಿ ಹಲವು ಮಂದಿ ಇನ್ನೂ ಎಲೆ ಮರೆ ಕಾಯಿಯಂತೆ ದುಡಿಯುತ್ತಿದ್ದು ಅವರನ್ನು ಗುರುತಿಸಿ ಗೌರವಿಸುವ ಅಗತ್ಯವಿದೆ. ಇತ್ತೀಚಿನ ದಿನಗಳಲ್ಲಿ ಸಂಸ್ಕೃತಿ, ಧರ್ಮವನ್ನು ನಿಂದನೆ ಮಾಡುವ ಪ್ರವೃತ್ತಿ ಹೆಚ್ಚಾಗಿದ್ದು, ಇದು ಆರೋಗ್ಯಕರವಾದ ಬೆಳವಣಿಗೆಯಲ್ಲ.
ಬುದ್ಧಿಜೀವಿಗಳು ಏನೇ ಹೇಳಿದರು ಧರ್ಮ,ದೇವರು ಸಂಸ್ಕೃತಿ ಒಂದು ಬಿಟ್ಟು ಮತ್ತೂಂದು ಇರಲು ಸಾಧ್ಯವಿಲ್ಲ ಎಂದರು. ಸಾಹಿತಿ ಬೈರಮಂಗಲ ರಾಮೇಗೌಡ, ನಿವೃತ್ತ ಅಧಿಕಾರಿ ಮಹೇಶ್‌ಜೋಶಿ ಮತ್ತಿತರರು ಉಪಸ್ಥಿತರಿದ್ದರು.