ಚುನಾವಣ ಆಯೋಗ ಮತ್ತು ಸ್ವೀಪ್ ಸಮಿತಿಯವರು, ಜಿಲ್ಲಾ ಚುನಾವಣಾಧಿಕಾರಿಗಳು ಈ ಸಂಬಂಧ ಹಲವು ಬಾರಿ ಪ್ರಕಟನೆ ನೀಡಿ, ವೋಟರ್ ಸ್ಲಿಪ್ ಜತೆಗೆ ಎಪಿಕ್ ಕಾರ್ಡ್ ಅಥವಾ ಆಯೋಗ ಅನುಮೋದಿಸಿದ ಇತರ 11 ಗುರುತಿನ ಚೀಟಿಗಳಲ್ಲಿ ಯಾವುದಾದರೂ ಒಂದನ್ನು ತರುವುದು ಕಡ್ಡಾಯ ಎಂದು ಸ್ಪಷ್ಟಪಡಿಸಿದ್ದರೂ ಕೆಲವು ಮತದಾರರಲ್ಲಿ ಈ ಗೊಂದಲ ಉಂಟಾಗಿದೆ.
Advertisement
ಈ ಬಾರಿ ಅಧಿಕಾರಿಗಳು ಬಹುತೇಕ ಎಲ್ಲ ಮನೆಗಳಿಗೆ ಭಾವಚಿತ್ರ ಸಹಿತವಾದ, ಮತಗಟ್ಟೆ, ಮತದಾರನ ಪೂರ್ಣ ವಿವರ ಇರುವ ವೋಟರ್ ಸ್ಲಿಪ್ (ಮತ ಚೀಟಿ) ವಿತರಿಸಿದ್ದರು. ರಾಜಕೀಯ ಪಕ್ಷಗಳು ಕೂಡ ಈ ಹಿಂದಿನಂತೆ ಕೆಲವೆಡೆ ವೋಟರ್ ಸ್ಲಿಪ್ ನೀಡಿದ್ದವಾದರೂ ಅದರಲ್ಲಿ ಭಾವಚಿತ್ರ ಇರಲಿಲ್ಲ. ಕೆಲವು ಮತದಾರರು ಅಧಿಕಾರಿಗಳು ನೀಡಿದ ವೋಟರ್ ಸ್ಲಿಪ್ ಒಂದೇ ಸಾಕು ಎಂದು ಅಂದಾಜಿಸಿಕೊಂಡು ಬಂದಿದ್ದರು. ತಮ್ಮೊಂದಿಗೆ ಬೇರೆ ಗುರುತಿನ ಚೀಟಿ ತಂದಿರಲಿಲ್ಲ. ಆದರೆ ಕೇವಲ ವೋಟರ್ ಸ್ಲಿಪ್ ಮಾತ್ರ ಹೊಂದಿದ್ದರೆ ಅಂಥವರಿಗೆ ಮತದಾನಕ್ಕೆ ಅವಕಾಶ ನಿರಾಕರಿಸಲಾಯಿತು.