ಬೆಂಗಳೂರು: ಚುನಾವಣಾ ಆಯೋಗವು 2020ರ ವಿಶೇಷ ಮತದಾನ ನೋಂದಣಿ ಸೆ.1ರಿಂದ ಆರಂಭವಾಗಲಿದೆ ಎಂದು ಮುಖ್ಯ ಚುನಾವಣಾ ಆಯುಕ್ತ ಸಂಜೀವ್ ಕುಮಾರ್ ತಿಳಿಸಿದರು.
ಬೆಂಗಳೂರಿನ ಶೇಷಾದ್ರಿ ರಸ್ತೆಯ ಚುನಾವಣಾ ಆಯೋಗದ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ ಪ್ರತಿವರ್ಷ ಮಾಡುತ್ತೇವೆ. 2020 ಜನವರಿ 1 ಕ್ಕೆ 18 ವರ್ಷ ತುಂಬುವವರು ಅರ್ಜಿ ಸಲ್ಲಿಸಬಹುದು. ಇದರ ಜತೆ ಮತದಾರರ ಪಟ್ಟಿಯಲ್ಲಿ ಹೆಸರು ಬಿಟ್ಟು ಹೋದವರು, ವಿಳಾಸ ಬದಲಾದವರು ಸರಿಪಡಿಸಿಕೊಳ್ಳಬಹುದಾಗಿದೆ. ಸೆ.1 ರಿಂದ 2020 ರ ಜನವರಿ 8 ರ ವರೆಗೆ ಅವಕಾಶ ಇರಲಿದೆ ಎಂದರು.
ನಮ್ಮ ಸಿಬ್ಬಂದಿ ಮನೆ ಮನೆಗೆ ಭೇಟಿಮಾಡಿ ಮಾಹಿತಿ ಪಡೆದು ಪಟ್ಟಿ ಸಿದ್ಧಪಡಿಸುತ್ತಾರೆ. ಲೋಕಸಭಾ ಚುನಾವಣೆ ವೇಳೆ ಹೆಸರು ಬಿಟ್ಟು ಹೋಗಿದೆ ಎಂದು ಹಲವರು ಆರೋಪಿಸಿದ್ದರು. ಇದರಿಂದ ನಾಗರಿಕರು ಈಗ ಗಮನ ಹರಿಸಿ ಹಿಂದೆ ಬಿಟ್ಟುಹೋದ ಹೆಸರನ್ನು ದಾಖಲೆ ಸಲ್ಲಿಸಿ ಸರಿಪಡಿಸಿ ಕೊಳ್ಳಬಹುದಾಗಿದೆ. ರಾಜಕೀಯ ಪಕ್ಷಗಳ ಪಾತ್ರ ಈಗ ಪ್ರಮುಖ. ಈಗಲೇ ತಪ್ಪಿದ್ದಲ್ಲಿ ಸರಿಪಡಿಸಲು ಇದು ಸಕಾಲ. ನಮ್ಮವರ ಜತೆ ರಾಜಕೀಯ ಪಕ್ಷದವರು ತಮ್ಮ ಭೂತ್ ಏಜೆಂಟ್ ಗಳನ್ನು ನೇಮಿಸಿದರೆ ಉತ್ತಮ. ಈ ಮೂಲಕ ನಮ್ಮ ಸಹಕಾರಕ್ಕೆ ಸಿಗಬೇಕು. ಆಗ ನಕಲು ಇತರೆ ಸಮಸ್ಯೆ ನಿವಾರಣೆ ಆಗಲಿದೆ ಎಂದರು.
ಈ ಸಾರಿ ವಿವಿಧ ವೇಳಾಪಟ್ಟಿ ಸಿದ್ಧಪಡಿಸಿದ್ದೇವೆ. ಇವಿಪಿ ಕಾರ್ಯಕ್ರಮ ಮಾಡುತ್ತಿದ್ದೇವೆ. ಅಲ್ಲಿ ಮತದಾರರು ಆನ್ಲೈನ್ ಇಲ್ಲವೇ ನಮ್ಮ ಸಿ ಎಸ್ ಸಿ ಕೇಂದ್ರದ ಮೂಲಕ ಅರ್ಜಿ ಭರಿಸಬಹುದು 1950 ಕಾಲ್ ಸೆಂಟರ್ ಗಳಿಗೂ ಕರೆ ಮಾಡಬಹುದು. ನಮ್ಮ ವೆಬ್ಸೈಟ್ ಗಳಲ್ಲಿ ಕೂಡ ಎಲ್ಲಾ ಮಾಹಿತಿ ಇದೆ. ಸಮರ್ಪಕ ಹಾಗೂ ಪಾರದರ್ಶಕ ಚುನಾವಣೆ ಆಗಲಿ ಎಂಬ ಉದ್ದೇಶದಿಂದ ಈ ಕ್ರಮಕ್ಕೆ ಮುಂದಾಗಿದ್ದು, ಜನ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಸದ್ಯ ರಾಜ್ಯದಲ್ಲಿ 51060498 ಮಂದಿ ಮತದಾರರಿದ್ದು ಇದರಲ್ಲಿ 25801694 ಪುರುಷರು, 25254153 ಮಹಿಳೆಯರು, 465 ಇತರೆ ಮತದಾರರಿದ್ದಾರೆ.