ದೇವದುರ್ಗ: ಸೆ.1ರಿಂದ 31ರವರೆಗೆ ಹೊಸ ಮತದಾರರ ಸೇರ್ಪಡೆ, ಹೆಸರು ತಿದ್ದುಪಡಿ, ವರ್ಗಾವಣೆ ಕಾರ್ಯ ನಡೆಯಲಿದೆ. ಬಿಎಲ್ಒಗಳು ಯಾವುದೇ ಲೋಪ ಆಗದಂತೆ ಮತ್ತು ಪಾರದರ್ಶಕವಾಗಿ ಕರ್ತವ್ಯ ನಿರ್ವಹಿಸಬೇಕು ಎಂದು ತಹಶೀಲ್ದಾರ್ ಮಂಜುನಾಥ ಸೂಚನೆ ನೀಡಿದರು.
ಪಟ್ಟಣದ ಮಿನಿ ವಿಧಾನಸೌಧ ಸಭಾಂಗಣದಲ್ಲಿ ರವಿವಾರ ನಡೆದ ಬಿಎಲ್ಒಗಳ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಮತದಾರರ ಪಟ್ಟಿಯಲ್ಲಿ ಗೊಂದಲ ಉಂಟಾಗದಂತೆ ಕ್ರಮಬದ್ಧವಾಗಿ ಕರ್ತವ್ಯ ನಿರ್ವಹಿಸ ಬೇಕು. ಸಾರ್ವಜನಿಕರಿಂದ ಯಾವುದೇ ದೂರುಗಳು ಬರದಂತೆ ನೋಡಿಕೊಳ್ಳ ಬೇಕು. ಮೃತಪಟ್ಟ ಮತದಾರರು ಹೆಸರು ತೆಗೆದು ಹಾಕಬೇಕು ಎಂದರು.
ಪಟ್ಟಣ ಸೇರಿ ತಾಲೂಕಿನಾದ್ಯಂತ 265 ಬಿಎಲ್ಓಗಳಿದ್ದಾರೆ. ಬೂತ್‌ಮಟ್ಟದ ಅಧಿಕಾರಿಗಳು ಮನೆ ಮನೆಗಳಿಗೆ ಭೇಟಿ ನೀಡಿ ಹೆಸರು ಸೇರ್ಪಡೆ, ತಿದ್ದುಪಡಿ, ವರ್ಗಾವಣೆ ಸೇರಿ ಇತರೆ ಸಮಸ್ಯಗಳಿಗೆ ಸ್ಪಂದಿಸುವಂತೆ ಕೆಲಸ ಮಾಡಬೇಕು ಎಂದು ಹೇಳಿದರು. ಫಾರ್ಮ್ ನಂ. 6ಮತ್ತು 7ಸೇರಿ ಇತರೆ ಫಾರಂಗಳಲ್ಲಿ ಒಂದೊಂದು ಹಂತದ ಮಾಹಿತಿ ಲಭ್ಯವಿದೆ. ಹೀಗಾಗಿ ಯಾವುದೇ ಗೊಂದಲವಿಲ್ಲದಂತೆ ಹೆಸರು, ವಿಳಾಸ ತಪ್ಪಾಗದಂತೆ ನೋಡಿಕೊಂಡು ಕೆಲಸ ಮಾಡಬೇಕು ಎಂದು ಸೂಚಿಸಿದರು.
ಪುರಸಭೆ ಮಾಜಿ ಸದಸ್ಯ ಚಂದ್ರಶೇಖರ ಚಲುವಾದಿ ಮಾತನಾಡಿ, ಕಳೆದ ಹತ್ತು ವರ್ಷಗಳಿಂದ ಮೃತಪಟ್ಟ ಮತದಾರರ ಹೆಸರು ಮತಪಟ್ಟಿಯಲ್ಲಿವೆ. ತೆಗೆದು ಹಾಕುವಂತೆ ಬಿಎಲ್ಒಗಳ ಗಮನಕ್ಕೆ ತಂದರೂ ತೆಗೆದು ಹಾಕಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕಸಾಪ ತಾಲೂಕು ಅಧ್ಯಕ್ಷ ಎಚ್. ಶಿವರಾಜ ಮಾತನಾಡಿ, ಗಣಕಯಂತ್ರ ಸಿಬ್ಬಂದಿಗಳ ಎಡವಟ್ಟಿನಿಂದ ಮತದಾರರ ಪಟ್ಟಿಯಲ್ಲಿ ಹೆಸರುಗಳು ತಪ್ಪಾಗಿ ಮುದ್ರಿತವಾಗುತ್ತಿವೆ ಸಭೆ ಗಮನಕ್ಕೆ ತಂದರು. ಬಿಎಲ್ಒಗಳು ಮತದಾರ ಪಟ್ಟಿಯಲ್ಲಿ ತಪ್ಪಾಗದಂತೆ ನಿಗಾವಹಿಸಿ ಕೆಲಸ ಮಾಡಬೇಕು ಎಂದು ತಹಶೀಲ್ದಾರ್ ಸೂಚಿಸಿದರು.
ವಿವಿಧ ಸಂಘಟನೆ ಪದಾಧಿಕಾರಿಗಳು ಮತದಾರ ಪಟ್ಟಿಯಲ್ಲಿರುವ ಗೊಂದಲದ ಬಗ್ಗೆ ಸಭೆ ಗಮನಕ್ಕೆ ತಂದರು. ಸೆ.3ರಂದು ಹೋಬಳಿವಾರು ಬಿಎಲ್ಓಗಳ ಸಭೆ ಕರೆದು ಯಾವುದೇ ಗೊಂದಲಗಳು ಉಂಟಾದಂತೆ ನಿಗಾವಹಿಸಿ ಕೆಲಸ ಮಾಡಬೇಕು ಎಂದು ಎಚ್ಚರಿಕೆ ನೀಡಲಾಗುತ್ತದೆ ಎಂದು ತಹಶೀಲ್ದಾರ್ ತಿಳಿಸಿದರು.