ಬೆಂಗಳೂರು: ಅರ್ಹ ವಿದ್ಯಾರ್ಥಿಗಳನ್ನು ಕಾಲೇಜುಗಳ ಮೂಲಕವೇ ಮತದಾರರ ಪಟ್ಟಿಗೆ ಸೇರಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಮುಂಬರುವ ಲೋಕಸಭಾ ಚುನಾವಣೆ ಸಂಬಂಧ ಇದುವರೆಗೂ ಮತದಾರರ ಪಟ್ಟಿಗೆ ಸೇರ್ಪಡೆಯಾಗದ ಅರ್ಹ ಯುವ ವಿದ್ಯಾರ್ಥಿ ಮತದಾರರನ್ನು ಮತದಾರರ ಪಟ್ಟಿಗೆ ಸೇರಿಸಲು ಆಯಾ ಕಾಲೇಜಿನ ಪ್ರಾಂಶುಪಾಲರಿಗೆ ನಿರ್ದೇಶಿಸಲಾಗಿದೆ. ಅರ್ಹ ವಿದ್ಯಾರ್ಥಿಗಳನ್ನು ಮತದಾರರ ಪಟ್ಟಿಗೆ ಸೇರಿಸುವ ಪ್ರಕಿಯೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಇಲಾಖಾ ವ್ಯಾಪ್ತಿಯ ಸರ್ಕಾರಿ, ಅನುದಾನಿತ ಪ್ರಥಮ ದರ್ಜೆ ಕಾಲೇಜುಗಳು ಅರ್ಹ ಯುವ ವಿದ್ಯಾರ್ಥಿಯನ್ನು ಮತದಾರರ ಪಟ್ಟಿಗೆ ಸೇರಿಸುವುದು ಕಡ್ಡಾಯ ಮಾಡಿದೆ. ಈ ಸಂಬಂಧ ಪ್ರಾಂಶುಪಾಲರು ತಮ್ಮ ಕಾಲೇಜು ವ್ಯಾಪ್ತಿಯ ಬೂತ್ ಮಟ್ಟದ ಅಧಿಕಾರಿಗಳೊಂದಿಗೆ ಸಮ ನ್ವಯ ಸಾಧಿಸಿ ಅರ್ಹ ವಿದ್ಯಾರ್ಥಿಗಳಿಂದ ಅರ್ಜಿ ಭರ್ತಿ ಮಾಡಿಸಿ, ಬಿಎಲ್‌ಒಗಳಿಗೆ ಮರು ಒಪ್ಪಿಸಲು ನಿರ್ದೇಶಿಸಲಾಗಿದೆ. ಕಾಲೇಜುಗಳಲ್ಲಿ ಯುವ ವಿದ್ಯಾರ್ಥಿ ಮತದಾರರ ನೋಂದಣಿ ಪ್ರಕ್ರಿಯೆಯ ವರದಿಯನ್ನು ಜಿಲ್ಲಾ ಲೀಡ್ ಕಾಲೇಜು ಪ್ರಾಂಶುಪಾಲರ ಕ್ರೋಢೀಕರಿಸಿ ಪ್ರತಿ ಶುಕ್ರವಾರ 10 ಗಂಟೆಯೊಳಗೆ ತಮ್ಮ ಪ್ರಾದೇಶಿಕ ಜಂಟಿ ನಿರ್ದೇಶಕರಿಗೆ, ಕೇಂದ್ರ ಕಚೇರಿಗೆ ಕಡ್ಡಾ ಯವಾಗಿ ಇ-ಮೇಲ್ ಮಾಡಲು ಸೂಚಿಸಿದೆ.