Advertisement

ಮತದಾರರ ಪಟ್ಟಿ: 34,827 ಹೆಸರು ನಕಲಿ

11:16 AM Aug 02, 2018 | Team Udayavani |

ಕಲಬುರಗಿ: ಜಿಲ್ಲೆಯ ಮತದಾರರ ಪಟ್ಟಿಯಲ್ಲಿ ಸುಮಾರು 34,827 ಜನರ ಹೆಸರು ಹಾಗೂ 6200 ಜನರ ಭಾವಚಿತ್ರಗಳು ನಕಲಿ ಇವೆ ಎಂದು ರಾಜ್ಯದ ಮುಖ್ಯ ಚುನಾವಣಾ ಧಿಕಾರಿಗಳು ತಿಳಿಸಿದ್ದು, ಇದನ್ನು ಸರಿಪಡಿಸಲು ಆಯಾ ತಾಲೂಕಿನ ತಹಶೀಲ್ದಾರರು ಹೆಚ್ಚು ಮುತುವರ್ಜಿ ವಹಿಸಬೇಕೆಂದು ಜಿಲ್ಲಾಧಿಕಾರಿ ಆರ್‌.ವೆಂಕಟೇಶಕುಮಾರ ತಿಳಿಸಿದರು.

Advertisement

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನಕಲಿ ಹೆಸರು ಮತ್ತು ಭಾವಚಿತ್ರ ಇರುವ ಮತದಾರರ ಮನೆಗೆ ಬೂತ್‌ ಮಟ್ಟದ ಅಧಿಕಾರಿಗಳನ್ನು ಕಳುಹಿಸಿ ಸರಿಯಾದ ಮಾಹಿತಿ ಸಂಗ್ರಹಿಸಿ ನಕಲಿ ಹೆಸರುಗಳನ್ನು ತಗೆದು ಹಾಕಬೇಕು. ಅಫಜಲಪುರ, ಚಿತ್ತಾಪುರ, ಆಳಂದ ಹಾಗೂ ಚಿಂಚೋಳಿ ಮತಕ್ಷೇತ್ರಗಳಲ್ಲಿ ಚುನಾವಣಾ ಆಯೋಗ ನಕಲಿ ಎಂದು ಗುರುತಿಸಿ ನೀಡಿರುವ ಪ್ರತಿಯೊಂದು ಹೆಸರಿನ ಮತದಾರರಿಗೆ ಬಿ.ಎಲ್‌.ಒ.ಗಳು ಖುದ್ದಾಗಿ ಭೇಟಿಯಾಗಿ ಮಾಹಿತಿ ಸಂಗ್ರಹಿಸಿ ಮತದಾರರ ಪಟ್ಟಿ ಸರಿಪಡಿಸಬೇಕು
ಎಂದರು.

ಜಿಲ್ಲೆಯಾದ್ಯಂತ ಜು. 16 ರಿಂದ ಆ. 10ರವರೆಗೆ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ನಡೆಯುತ್ತಿದೆ. ಈ ಸಮಯದಲ್ಲಿ ಹೊಸದಾಗಿ ಸೇರ್ಪಡೆಯಾದ, ತೆಗೆದುಹಾಕಿದ ಹಾಗೂ ತಿದ್ದುಪಡಿ ಮಾಡಿದ ಮತದಾರರ ವಿವರವನ್ನು ಪ್ರತಿದಿನ ವೆಬ್‌ಸೈಟ್‌ನಲ್ಲಿ ಅಳವಡಿಸಬೇಕು. ಮತದಾರರ ಪಟ್ಟಿ ಪರಿಷ್ಕರಣೆ ಸಮಯದಲ್ಲಿ ಮತದಾರರಿಂದ ಪಡೆಯಲಾದ ಅರ್ಜಿಗಳನ್ನು ಹಾಗೇ ಇಟ್ಟುಕೊಂಡರೆ ಯಾವುದೇ ಪ್ರಯೋಜನವಾಗುವುದಿಲ್ಲ. ಎಲ್ಲ ತಾಲೂಕಿನ ತಹಶೀಲ್ದಾರರು ಪ್ರತಿದಿನ ಅರ್ಜಿಗಳನ್ನು ವಿಲೇಮಾಡಿ ಕರಡು ಪಟ್ಟಿ ಪ್ರಕಟಗೊಳ್ಳುವ ಮುಂಚೆ ವೆಬ್‌ಸೈಟ್‌ನಲ್ಲಿ ಮಾಹಿತಿ ಅಳವಡಿಸುವಲ್ಲಿ ಹೆಚ್ಚಿನ ಜವಾಬ್ದಾರಿ ವಹಿಸಬೇಕು ಎಂದರು.

ಜಿಲ್ಲೆಯಲ್ಲಿ 2019ರ ಜನವರಿ 1ಕ್ಕೆ 18 ವರ್ಷ ಪೂರ್ಣಗೊಳ್ಳುವ ಯುವಕರ ಹೆಸರುಗಳನ್ನು ಹಾಗೂ ಅಂಗವಿಕಲರ ಹೆಸರುಗಳನ್ನು ಮತದಾರರ ಪಟ್ಟಿಗೆ ಸೇರಿಸಲು ಕ್ರಮ ಕೈಗೊಳ್ಳಬೇಕು. ಜಿಲ್ಲೆಯ ಎಲ್ಲ ಕಾಲೇಜು, ಐ.ಟಿ.ಐ., ಪಾಲಿಟೆಕ್ನಿಕ್‌, ಪದವಿ ಕಾಲೇಜು, ಮೆಡಿಕಲ್‌ ಮತ್ತು ಇಂಜಿನಿಯರಿಂಗ್‌ ಕಾಲೇಜುಗಳಲ್ಲಿಯೂ ಸಹ ಮತದಾರರ ನೋಂದಣಿ ಕಾರ್ಯ ಕೈಗೊಳ್ಳಬೇಕು ಎಂದು ಹೇಳಿದರು.

ಮತದಾರರ ಪಟ್ಟಿ ಪರಿಷ್ಕರಣೆ ಸಮಯದಲ್ಲಿ ಬೂತ್‌ ಮಟ್ಟದ ಅಧಿಕಾರಿಗಳು ಭಾಗವಾರು ಅಂಗವಿಕಲರ ಮಾಹಿತಿ ಸಂಗ್ರಹಿಸಿ ಅವರನ್ನು ಮತದಾರರ ಪಟ್ಟಿಗೆ ಸೇರಿಸಬೇಕು. ಎಲ್ಲ ಮತದಾರರ ಮೊಬೈಲ್‌ ಸಂಖ್ಯೆಯನ್ನು ಸಹ ಸಂಗ್ರಹಿಸಿ
ಅಳವಡಿಸಬೇಕು ಎಂದು ಸೂಚಿಸಿದರು.  ಮಹಾನಗರ ಪಾಲಿಕೆ ಆಯುಕ್ತ ರಘುನಂದನ ಮೂರ್ತಿ, ಸೇಡಂ ಸಹಾಯಕ ಆಯುಕ್ತೆ ಡಾ| ಬಿ. ಸುಶೀಲಾ, ಹೆಚ್ಚುವರಿ ಜಿಲ್ಲಾಧಿಕಾರಿ ಭೀಮಾಶಂಕರ ತೆಗ್ಗೆಳ್ಳಿ, ಶಿಷ್ಠಾಚಾರ ತಹಶೀಲ್ದಾರ ಪ್ರಕಾಶ ಚಿಂಚೋಳಿಕರ, ಜಿಲ್ಲೆಯ ಎಲ್ಲ ತಹಶೀಲ್ದಾರರು, ಪ್ರೊಬೇಷನರಿ ಸಹಾಯಕ ಆಯುಕ್ತರು ಪಾಲ್ಗೊಂಡಿದ್ದರು.

Advertisement

ಕಲಬುರಗಿ ಜಿಲ್ಲೆಯ ಸುಮಾರು 1800 ಬೂತ್‌ ವ್ಯಾಪ್ತಿಯಲ್ಲಿ ಯಾವುದೇ ಮತದಾರರ ಸೇರಿಸುವ ಅಥವಾ ತೆಗೆಯುವ ಪ್ರಕ್ರಿಯೆ ನಡೆದಿಲ್ಲ. ಈ ಬೂತ್‌ಗಳ ವ್ಯಾಪ್ತಿಯಲ್ಲಿ ಸರಿಯಾಗಿ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ಕೈಗೊಳ್ಳಬೇಕು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸುಮಾರು 119 ಸಹಾಯಕ ಬೂತ್‌ಗಳನ್ನು ನಿರ್ಮಿಸಿ ಚುನಾವಣೆ ನಡೆಸಲಾಗಿತ್ತು. ಮುಂದಿನ ಲೋಕಸಭಾ ಚುನಾವಣೆಗೆ ಈ ಬೂತ್‌ಗಳನ್ನು ಮುಖ್ಯ ಬೂತ್‌ಗಳೆಂದು ಪರಿಗಣಿಸುವುದರಿಂದ ಈ ಬೂತ್‌ಗಳಲ್ಲಿ ಕನಿಷ್ಟ ಮೂಲಭೂತ ಸೌಲಭ್ಯದ ಬಗ್ಗೆ ಮಾಹಿತಿ ಸಂಗ್ರಹಿಸಿ ಸಲ್ಲಿಸಬೇಕು. ತಹಶೀಲ್ದಾರರು ಚುನಾವಣೆಗೆ ಸಂಬಂಧಿ ಸಿದ ಸಭೆಗಳನ್ನು ನಡೆಸಿದಾಗ ಅವುಗಳ ನಡುವಳಿಗಳನ್ನು ಹಾಗೂ ಭಾವಚಿತ್ರಗಳನ್ನು ಕಡ್ಡಾಯವಾಗಿ ಕಳುಹಿಸುವ ಪರಿಪಾಠ ಬೆಳೆಸಿಕೊಳ್ಳಬೇಕು.
 ಆರ್‌.ವೆಂಕಟೇಶಕುಮಾರ, ಜಿಲ್ಲಾಧಿಕಾರಿ, ಕಲಬುರಗಿ

Advertisement

Udayavani is now on Telegram. Click here to join our channel and stay updated with the latest news.

Next