Advertisement

ಪಕ್ಷಕ್ಕಿಂತ ವ್ಯಕ್ತಿ ನಿಷ್ಠೆ ತೋರುವ ಮತದಾರ

10:12 AM Apr 02, 2018 | |

ಕಲಬುರಗಿ: ರಾಜ್ಯದಲ್ಲೀಗ ಜಿಲ್ಲೆಯ ಅಫಜಲಪುರ ವಿಧಾನಸಭಾ ಕ್ಷೇತ್ರ ತೀವ್ರ ಗಮನ ಸೆಳೆಯುತ್ತಿದೆ. ಕ್ಷೇತ್ರದಿಂದ ಆರು ಸಲ ಗೆದ್ದಿರುವ ಹಾಲಿ ಶಾಸಕ ಮಾಲೀಕಯ್ಯ ವಿ. ಗುತ್ತೇದಾರ ಕಾಂಗ್ರೆಸ್‌ ಪಕ್ಷದಿಂದ ಭಾರತೀಯ ಜನತಾ ಪಕ್ಷಕ್ಕೆ ಜಿಗಿದಿರುವುದರಿಂದ ಪ್ರತಿಷ್ಠಿತ ಹಾಗೂ ಕುತೂಹಲದ ಕ್ಷೇತ್ರವಾಗಿ ಹೊರ ಹೊಮ್ಮಿದೆ. ಕ್ಷೇತ್ರದ ಮತದಾರರು ಪಕ್ಷಗಳಿಗೆ ಮಹತ್ವ ನೀಡದೇ ವ್ಯಕ್ತಿಗಳಿಗೆ ಮಾತ್ರ ಮಹತ್ವ ನೀಡಿದ್ದನ್ನು ಹಿಂದಿನ ವಿಧಾನಸಭೆ ಚುನಾವಣೆ ಫಲಿತಾಂಶ ಅವಲೋಕಿಸಿದಾಗ ಸ್ಪಷ್ಟವಾಗಿ ಕಂಡು ಬರುತ್ತದೆ.

Advertisement

ಭೀಮಾ ನದಿಯುದ್ದಕ್ಕೂ ಹರಡಿರುವ ಕ್ಷೇತ್ರವು ವಿಶಾಲವಾಗಿದ್ದು, ವಿಶಿಷ್ಠತೆ ಹೊಂದಿದೆ. ಕ್ಷೇತ್ರ ವಿಂಗಡಣೆಯಿಂದ ಕಲಬುರ್ಗಿ ತಾಲೂಕಿನ ಫರತಾಬಾದ ವಲಯವೂ ಅಫಜಲಪುರ ವಿಧಾನಸಭೆ ಕ್ಷೇತ್ರಕ್ಕೆ ಸೇರಿದೆ. ವಿಧಾನಸಭೆಯಲ್ಲಿ ಪಕ್ಷಕ್ಕಿಂತ ವ್ಯಕ್ತಿಗೆ ಇಲ್ಲಿ ಮಹತ್ವ. ಶಾಸಕ
ಮಾಲೀಕಯ್ಯ ಕಾಂಗ್ರೆಸ್‌ದಿಂದ ನಾಲ್ಕು ಸಲ, ಕೆಸಿಪಿ, ಜನತಾ ದಳದಿಂದ ತಲಾ ಒಂದು ಸಲ ಗೆದ್ದಿದ್ದಾರೆ. ಇನ್ನೊಂದೆಡೆ ಮಾಜಿ ಶಾಸಕ ಎಂ.ವೈ. ಪಾಟೀಲ ಎರಡು ಸಲ ಶಾಸಕರಾಗಿದ್ದಾರೆ. ಪಕ್ಷ ಯಾವುದಿದ್ದರೂ, ಏನಿದ್ದರೂ ಇವರಿಬ್ಬರೇ ಎದುರಾಳಿಗಳು ಎನ್ನುವಂತಾಗಿದೆ.
ಬಿಜೆಪಿ ಮಾತ್ರ ಒಮ್ಮೆಯೂ ಗೆದ್ದಿಲ್ಲ. ಪ್ರಮುಖವಾಗಿ ಲೋಕಸಭೆ ಚುನಾವಣೆಯಲ್ಲಿ ಮಾತ್ರ ಅಫಜಲಪುರ ವಿಧಾನಸಭೆ ಕ್ಷೇತ್ರದಲ್ಲಿ ಬಿಜೆಪಿಗೆ ಮಾತ್ರ ಹೆಚ್ಚಿನ ಬೆಂಬಲ ನೀಡಿದ್ದನ್ನು ಗಮನಿಸುವಂತಹ ಅಂಶವಾಗಿದೆ.

ಅಫಜಲಪುರ ವಿಧಾನಸಭೆ ಕ್ಷೇತ್ರದಲ್ಲಿ 218719 ಮತದಾರರಿದ್ದು, ಇದರಲ್ಲಿ 112215 ಪುರುಷರು, 106504 ಮಹಿಳಾ ಮತದಾರರು ಸೇರಿದ್ದಾರೆ. ಮಣ್ಣೂರು, ಕರ್ಜಗಿ, ಮಾಶ್ಯಾಳ, ದೇವಲಗಾಣಗಾಪುರ, ಗೊಬ್ಬೂರು, ಭೈರಾಮಡಗಿ, ಅತನೂರ ದೊಡ್ಡ ಗ್ರಾಮಗಳಾಗಿದ್ದು, ಫಲಿತಾಂಶ ನಿರ್ಧರಿಸುವ ಗ್ರಾಮಗಳಾಗಿವೆ. ಅಫಜಲಪುರ ಕ್ಷೇತ್ರದಲ್ಲಿ ಲಿಂಗಾಯಿತರೇ ಹೆಚ್ಚಿನ ಸಂಖ್ಯೆಯಲ್ಲಿದ್ದು, ಸುಮಾರು 80 ಸಾವಿರ ಮತದಾರರಿದ್ದಾರೆ. ಕೋಲಿ ಸಮಾಜದ ಮತದಾರರ ನಿರ್ಣಯವನ್ನು ಸಹ ಅಲ್ಲಗಳೆಯಲ್ಕಿಕಾಗದು.

ಅಫಜಲಪುರದಲ್ಲಿ ಶಾಸಕ ಮಾಲೀಕಯ್ನಾ ವಿ. ಗುತ್ತೇದಾರ ಒಟ್ಟು ಆರು ಸಲ ಶಾಸಕರಾಗಿದ್ದಾರೆ. ಸತತ ನಾಲ್ಕು ಸಲ ಗೆದ್ದರೆ ಒಂದು ಸಲ ಸೋಲು ಅನುಭವಿಸಿದ್ದಾರೆ. ಎಂ.ವೈ. ಪಾಟೀಲ ಎರಡು ಸಲ ಶಾಸಕರಾಗಿದ್ದಾರೆ. ಕಳೆದ 20 ವರ್ಷಗಳಿಂದ ಇವರಿಬ್ಬರೇ ಎದುರಾಳಿಯಾಗಿದ್ದಾರೆ. ಇವರಿಬ್ಬರೂ ಪಕ್ಷ ಬದಲಾಯಿಸಿದ್ದರೂ ಮತದಾರರು ಮಾತ್ರ ಇವರಿಬ್ಬರನ್ನೇ ನೆಚ್ಚಿಕೊಂಡಿದ್ದಾರೆ. ಶಾಸಕ ಮಾಲೀಕಯ್ಯ ಕಾಂಗ್ರೆಸ್‌, ಕೆಸಿಪಿ ಹಾಗೂ ಜೆಡಿಎಸ್‌ ಪಕ್ಷದಿಂದ ಶಾಸಕರಾಗಿದ್ದಾರೆ. ಎಂ.ವೈ. ಪಾಟೀಲ ಒಮ್ಮೆ ಜೆಡಿಎಸ್‌ ಹಾಗೂ ಜೆಎನ್‌ಪಿಯಿಂದ ಆಯ್ಕೆಯಾಗಿದ್ದಾರೆ. ಕಾಂಗ್ರೆಸ್‌ ದಿಂದ ಮೂರು ಸಲ ಹಾಗೂ ಬಿಜೆಪಿ, ಕೆಜೆಪಿಯಿಂದ ತಲಾ ಒಂದು ಸಲ ಸೋತಿದ್ದಾರೆ. 1957 ಹಾಗೂ 1962ರಲ್ಲಿ ಅಣ್ಣಾರಾವ್‌ ಬಸಪ್ಪ ಕ್ಷೇತ್ರದಿಂದ ಎರಡು ಸಲ ಆಯ್ಕೆಯಾದ ಮತ್ತೂಬ್ಬರು. 1967ರಲ್ಲಿ ಎನ್‌.ಎಸ್‌. ಪಾಟೀಲ, 1972ರಲ್ಲಿ ದಿಗಂಬರಾವ್‌ ಬಲವಂತರಾವ್‌, 1983ರಲ್ಲಿ ಹಣಮಂತರಾವ ದೇಸಾಯಿ ಅಫಜಲಪುರ ಕ್ಷೇತ್ರದ ಶಾಸಕರಾಗಿದ್ದಾರೆ

ಕ್ಷೇತ್ರದ ಬೆಸ್ಟ್‌ ಏನು?
ಭೀಮಾ ನದಿಗೆ ಸೊನ್ನ ಬಳಿ ಭೀಮಾ ಏತ ನೀರಾವರಿ ಯೋಜನೆ ಸಾಕಾರಗೊಳಿಸಿದ್ದಲ್ಲದೇ ಇನ್ನೆರಡು ಏತ ನೀರಾವರಿ ಯೋಜನೆಗಳನ್ನು ರೂಪಿಸಿರುವುದು ವರದಾನವಾಗಿದೆ. ಈಗ ಇತ್ತೀಚೆಗೆ ಭೀಮಾ ನದಿಯಿಂದ ಅಫಜಲಪುರ ತಾಲೂಕಿನ ಕೆರೆಗಳಿಗೆ ನೀರು ತುಂಬಿಸುವ ಕೆಲಸಕ್ಕೆ ಅನುಮೋದನೆ ದೊರೆತಿರುವುದು ಮಗದೊಂದು ಉತ್ತಮ ಕೆಲಸ.

Advertisement

ಕ್ಷೇತ್ರದ ದೊಡ್ಡ  ಸಮಸ್ಯೆ?
ಕ್ಷೇತ್ರದಾದ್ಯಂತ ಉತ್ತಮ ರಸ್ತೆಗಳಿಲ್ಲದಿರುವುದು ದೊಡ್ಡ ಸಮಸ್ಯೆಯಾಗಿದೆ. ಜಿಲ್ಲಾ ಕೇಂದ್ರದಿಂದ ತಾಲೂಕು ಕೇಂದ್ರಕ್ಕೂ ಇಷ್ಟು ದಿನ ಉತ್ತಮ ರಸ್ತೆ ಇರಲಿಲ್ಲ. ಈಗ ಆಗಿದೆ. ಆದರೆ ಹಳ್ಳಿಗಳಿಗೆ ಉತ್ತಮ ರಸ್ತೆಗಳ ಭಾಗ್ಯ ಇಲ್ಲ. ಅದೇ ರೀತಿ ಉದ್ಯೋಗವಕಾಶ ಕಲ್ಪಿಸುವ ಯಾವುದೇ ಕಾರ್ಖಾನೆ ಇಲ್ಲ. ಪ್ರಮುಖವಾಗಿ ಅಕ್ರಮ ಮರಳು ದಂಧೆಯೂ ದೊಡ್ಡ ಸಮಸ್ಯೆಯಾಗಿದೆ.
 
ಶಾಸಕರು ಏನಂತಾರೆ?
ಅಫಜಲಪುರ ವಿಧಾನಸಭೆ ಕ್ಷೇತ್ರದಲ್ಲಿ ಜನತೆ ಪಕ್ಷಗಳಿಗಿಂತ ವ್ಯಕ್ತಿಗಳಿಗೆ ಹೆಚ್ಚು ನಿಷ್ಠೆ ತೋರಿರುವುದು ಸ್ಪಷ್ಟವಾಗಿ ಕಂಡು
ಬರುತ್ತದೆ. ಕ್ಷೇತ್ರದ ಜನರು ಪ್ರತಿ ಸಲ ತಮ್ಮನ್ನು ವಿಶ್ವಾಸವಿಟ್ಟು ಗೆಲ್ಲಿಸುತ್ತಾ ಬರುತ್ತಿದ್ದಾರೆ. ಅವರ ನಿರೀಕ್ಷೆಗೆ ತಕ್ಕ ಕೆಲಸ ಮಾಡಿದ ತೃಪ್ತಿ ಹೊಂದಿದ್ದೇನೆ. ಕ್ಷೇತ್ರದ ಜನರು ಗುತ್ತೇದಾರ ಕುಟುಂಬದ ಮೇಲೆ ಹೆಚ್ಚು ನಂಬಿಕೆ ಹಾಗೂ ಪ್ರೀತಿ ಹೊಂದಿದ್ದಾರೆ. 
ಮಾಲೀಕಯ್ಯ ಗುತ್ತೇದಾರ

ಕ್ಷೇತ್ರ ಮಹಿಮೆ 
ವಿಶ್ವವಿಖ್ಯಾತವಾದ ದೇವಲಗಾಣಗಾಪುರದ ದತ್ತ ಮಂದಿರಕ್ಕೆ ದೇಶ, ವಿದೇಶದಿಂದ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ದತ್ತನ ದರ್ಶನ ಪಡೆಯುತ್ತಾರೆ. ಚಿಣಮಳ್ಳಿ ಮಲ್ಲಿಕಾರ್ಜುನ ದೇವಸ್ಥಾನ, ದತ್ತರಗಿ ಭಾಗ್ಯವಂತಿ, ಮಣ್ಣೂರ ಚನ್ನಕೇಶವ ಹಾಗೂ ಮಲ್ಲಮ್ಮದೇವಿ, ಮಾಶಾಳ ಚೌಡೇಶ್ವರಿದೇವಿ ದೇವಸ್ಥಾನಗಳು ಸೇರಿದಂತೆ ಇನ್ನಿತರ ದೇಗುಲಗಳು ಈ ಭಾಗದಲ್ಲಿ ಹೆಸರುವಾಸಿಯಾಗಿವೆ. 

ಅಫಜಲಪುರ ವಿಧಾನಸಭೆ ಕ್ಷೇತ್ರದಲ್ಲಿ ಕೆಲವು ಅಭಿವೃದ್ಧಿ ಕೆಲಸಗಳು ಆಗಿವೆಯಾದರೂ ನಿರೀಕ್ಷಿಸಿದ ಮಟ್ಟಿಗೆ ಆಗಿಲ್ಲ. ಪ್ರಮುಖವಾಗಿ ಜನರ ಆರ್ಥಿಕ ಮಟ್ಟ ಸುಧಾರಿಸುವ ಕೆಲಸಗಳು ಇನ್ನಷ್ಟು ಆಗಬೇಕಿದೆ.
ಕಲ್ಯಾಣರಾವ್‌ ಲಕ್ಷ್ಮಣ ಗಂಡೋಳಿ , ಚೌಡಾಪುರ 

ಅಫಜಲಪುರ ತಾಲೂಕಿನ ಹರಿಯುವ ಅಮರ್ಜಾ ನದಿಗೂ ಆರು ಬ್ರಿಡ್ಜ್ ಕಂ ಬ್ಯಾರೇಜ್‌ ನಿರ್ಮಿಸಿರುವುದು ಅಂತರ್ಜಲ ಹೆಚ್ಚಳಕ್ಕೆ ಕಾರಣವಾಗಿದೆ. ಕೃಷಿ ಕಾರ್ಯ ಚಟುವಟಿಕೆಗಳಿಗೆ ಹಾಗೂ ಬೇಸಿಗೆಯಲ್ಲಿ ದನಕರುಗಳಿಗೆ ನೀರು ಕುಡಿಯಲು ಹೆಚ್ಚು ಸಹಾಯಕವಾಗಿದೆ. ಮುಂದಿನ ಕಾರ್ಯ ನದಿಗಳಿಗೆ ನೀರು ತುಂಬಿದರೆ ಮತ್ತಷ್ಟು ಅನುಕೂಲವಾಗುವುದು.
ಈರಣ್ಣಗೌಡ ಪಾಟೀಲ, ದಿಕ್ಸಂಗಾ (ಬಿ)

ಕಲಬುರಗಿ ಜಿಲ್ಲೆಯ ಜೀವನಾಡಿಯಾಗಿರುವ ಭೀಮಾ ನದಿಯಲ್ಲಿ ಅಕ್ರಮ ಮರಳುಗಾರಿಕೆ ನಡೆಯುತ್ತಿರುವುದು ಮೊದಲು ನಿಲ್ಲಬೇಕು. ಮರಳು ದಂಧೆಗೆ ನದಿ ದಡದ ಹೊಲಗಳು ಹಾಗೂ ಗ್ರಾಮದ ಜನರು ತೀವ್ರ ಯಾತನೆ ಅನುಭವಿಸುವಂತಾಗಿದೆ. ಈಗಾಗಲೇ ಭೀಮಾ ನದಿ ಉಳಿಸಿ ಎಂದು ಹೋರಾಟ ಮಾಡಲಾಗಿದೆ. ಅದೇ ರೀತಿ ಅಕ್ರಮ ಮದ್ಯ ಮಾರಾಟ ಹಾವಳಿ ಹೆಚ್ಚಾಗಿದೆ. 
ಡಾ| ಮಲ್ಲಿಕಾರ್ಜುನ ಹೂಗಾರ, ನದಿ ಸಿನ್ನೂರ

ಹಣಮಂತರಾವ ಭೈರಾಮಡಗಿ

Advertisement

Udayavani is now on Telegram. Click here to join our channel and stay updated with the latest news.

Next