ಬೆಂಗಳೂರು: ಮತದಾರರ ಮಾಹಿತಿ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಮೂವರು ಕಂದಾಯಾಧಿಕಾರಿ ಮತ್ತು ಒಬ್ಬರು ಸಹಾಯಕ ಕಂದಾಯಾಧಿಕಾರಿ ಬಂಧಿಸಲಾಗಿದೆ. ಇದರಿಂದಾಗಿ ಭೀತರಾಗಿರುವ ಬಿಬಿಎಂಪಿ ಆರ್‌ಒ, ಎಆರ್‌ಒಗಳು ನಿರೀಕ್ಷಣಾ ಜಾಮೀನು ಪಡೆಯಲು ಮುಂದಾಗಿದ್ದಾರೆ.
ಮತದಾರರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ಕೆ ನೇಮಕವಾಗಿದ್ದ ಚಿಲುಮೆ ಸಂಸ್ಥೆ ಸಿಬ್ಬಂದಿಗೆ ಗುರುತಿನ ಚೀಟಿ ನೀಡಿರುವುದು ಸೇರಿ ಇನ್ನಿತರ ಕಾರಣಕ್ಕಾಗಿ ಬಿಬಿಎಂಪಿಯ ಮೂವರು ಆರ್‌ಒ ಹಾಗೂ ಒಬ್ಬರು ಎಆರ್‌ಒ ಬಂಧಿಸಲಾಗಿದೆ. ಅದರ ಜತೆಗೆ ಇನ್ನೂ 20ಕ್ಕೂ ಹೆಚ್ಚಿನ ಆರ್‌ಒ ಮತ್ತು ಎಆರ್ ಒಗಳನ್ನು ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ನೋಟಿಸ್ ನೀಡಿದ್ದಾರೆ.
ಹಾಗೆಯೇ ಚುನಾವಣಾ ಆಯೋಗದಿಂದ ಆರ್‌ಒ, ಎಆರ್‌ಒಗಳನ್ನು ವಿಚಾರಣೆ ನಡೆಸಲಾಗುತ್ತಿದೆ. ಈ ಎಲ್ಲದರಿಂದ ಆರ್‌ಒ, ಎಆರ್‌ಒಗಳಿಗೆ ಬಂಧನದ ಭೀತಿ ಎದುರಾಗಿದ್ದು, 180ಕ್ಕೂ ಹೆಚ್ಚಿನ ಆರ್‌ಒ, ಎಆರ್‌ಒಗಳು ನ್ಯಾಯಾಲಯದಲ್ಲಿ ನಿರೀ ಕ್ಷಣಾ ಜಾಮೀನು ಪಡೆ ಯಲು ಮುಂದಾಗಿದ್ದಾರೆ. ಈ ಕುರಿತು ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘದಿಂದ ಸೋಮವಾರ ಸಭೆ ನಡೆಸಲಾ ಗಿದ್ದು, ಅರ್‌ಒ, ಎಆರ್‌ಒಗಳ ಬಂಧನ ತಡೆಯಲು ನ್ಯಾಯಾಲಯದ ಮೊರೆ ಹೋಗಲು ನಿರ್ಧರಿಸಲಾಗಿದೆ.
ಒಂದೇ ಸಂಸ್ಥೆಗೆ ತನಿಖೆಗೆ ನೀಡಿ: ಮತದಾರರ ಮಾಹಿತಿ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರ್‌ಒ, ಎಆರ್‌ಒಗಳು ತನಿಖೆಗೆ ಸಹಕರಿಸುತ್ತೇವೆ. ಆದರೆ, ಹಲವು ತನಿಖಾ ಸಂಸ್ಥೆಗಳು ನೋಟಿಸ್ ನೀಡಿ ವಿಚಾರಣೆ ನಡೆಸುವುದು ಸರಿಯಲ್ಲ. ಅದರ ಬದಲು ಒಂದೇ ಸಂಸ್ಥೆ ತನಿಖೆ ನಡೆಸಿ ನಮ್ಮ ಹೇಳಿಕೆ ಪಡೆದರೆ, ಎಲ್ಲವನ್ನೂ ವಿವರಿಸುತ್ತೇವೆ. ಕೆಲವರು ಹಲವು ಕಾಯಿಲೆಯಿಂದ ಬಳಲುತ್ತಿದ್ದಾರೆ. ಆದರೆ, ವಿಚಾರಣೆ ನೆಪದಲ್ಲಿ ಅವರನ್ನು ಪೊಲೀಸ್ ಠಾಣೆಯಲ್ಲಿ ಕೂರಿಸಿಕೊಳ್ಳಲಾಗು ತ್ತಿದೆ. ಇದರಿಂದಾಗಿ ಅವರ ಆರೋಗ್ಯದಲ್ಲಿ ವ್ಯತ್ಯಾಸವಾಗುತ್ತಿದೆ. ಹೀಗಾಗಿ ತನಿಖೆಯನ್ನು ಒಂದೇ ಸಂಸ್ಥೆಗೆ ನೀಡಿ ತಮ್ಮ ವಿಚಾರಣೆಯನ್ನು ಮಾಡಬೇಕು ಎಂದು ಆರ್‌ಒ, ಎಆರ್ ಒಗಳು ಸಭೆಯಲ್ಲಿ ಆಗ್ರಹಿಸಿದರು.
ಮುಖ್ಯಮಂತ್ರಿಗಳಿಗೆ ಪತ್ರ ಬರೆದ ಸಂಘ: ಸಭೆ ನಂತರ ತೆಗೆದುಕೊಳ್ಳಲಾದ ನಿರ್ಧಾರ ಹಾಗೂ ಬಿಬಿಎಂಪಿ ಕಂದಾಯ ವಿಭಾಗದ ಸಿಬ್ಬಂದಿ, ಅಧಿಕಾರಿಗಳ ಪರಿಸ್ಥಿತಿಯನ್ನು ವಿವರಿಸಿ ನೌಕರರ ಸಂಘ ಮುಖ್ಯಮಂತ್ರಿಗಳಿಗೆ ಸೋಮವಾರ ಪತ್ರ ಬರೆಯಲಾಗಿದೆ. ಪತ್ರದಲ್ಲಿ ವಿವಿಧ ತನಿಖಾ ಸಂಸ್ಥೆಗಳಿಂದ ಬಂದ ನೋಟಿಸ್ ವಿವರ, ಸಿಬ್ಬಂದಿಗಳ ಮಾನಸಿಕ ಮತ್ತು ಆರೋಗ್ಯ ಪರಿಸ್ಥಿತಿಯನ್ನು ವಿವರಿಸಲಾಗಿದೆ. ಜತೆಗೆ ಪ್ರಕರಣವನ್ನು ಒಂದೇ ಸಂಸ್ಥೆ ಮೂಲಕ ತನಿಖೆ ನಡೆಸಬೇಕು ಎಂದು ಕೋರಲಾಗಿದೆ.
“ಹಿರಿಯ ಅಧಿಕಾರಿಗಳ ಸೂಚನೆ ಮೇರೆಗೆ ಕೆಲಸ ಮಾಡಿದ್ದೇವೆ’: ನೌಕರರ ಸಂಘದ ಸಭೆಯಲ್ಲಿ ಆರ್‌ಒ, ಎಆರ್‌ಒಗಳು ತಮ್ಮ ಅಳಲು ತೋಡಿಕೊಂಡಿದ್ದು, ಹಿರಿಯ ಅಧಿಕಾರಿಗಳ ಸೂಚನೆ ಮೇರೆಗೆ ಕೆಲಸ ಮಾಡಿದ್ದೇವೆ. ಕೆಲವರು ಗುರುತಿನ ಚೀಟಿ ನೀಡಿರುವುದು ಹಾಗೂ ಚಿಲುಮೆ ಸಂಸ್ಥೆ ನಿಯಮದಂತೆ ನೆರವು ನೀಡಿದ್ದಾರೆ. ಆದರೆ, ಈಗ ಹಿರಿಯ ಅಧಿಕಾರಿಗಳು ನಮ್ಮನ್ನು ಪ್ರಕರಣದಲ್ಲಿ ಸಿಲುಕಿಸುವ ಕೆಲಸ ಮಾಡುತ್ತಿದ್ದಾರೆ. ಪೊಲೀಸ್ ಇಲಾಖೆ, ಚುನಾವಣಾ ಆಯೋಗ, ಪ್ರಾದೇಶಿಕ ಆಯುಕ್ತರಿಂದ ತನಿಖೆ ನಡೆಯುತ್ತಿದೆ. ಹೀಗೆ ಪದೇ ಪದೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗುತ್ತಿದೆ. ಇದರಿಂದಾಗಿ ಮಾನಸಿಕ ಹಿಂಸೆಯಾಗುತ್ತಿದೆ. ಇದನ್ನು ನಿವಾರಿಸಬೇಕಾದ ಹಿರಿಯ ಅಧಿಕಾರಿಗಳು ನೆರವಿಗೆ ಬರುತ್ತಿಲ್ಲ ಎಂದು ಹೇಳಿದ್ದಾರೆ.
ಮತದಾರರ ಮಾಹಿತಿ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ 180ಕ್ಕೂ ಹೆಚ್ಚಿನ ಆರ್‌ಒ, ಎಆರ್‌ಒಗಳು ನಿರೀಕ್ಷಣಾ ಜಾಮೀನು ಪಡೆಯಲು ಮುಂದಾಗಿದ್ದಾರೆ. ತಪ್ಪಿದ್ದರೆ ಸಿಬ್ಬಂದಿ, ಅಧಿಕಾರಿಯನ್ನು ಬಂಧಿಸಲು ಅಭ್ಯಂತರವಿಲ್ಲ. ಆದರೆ, ತನಿಖೆ ಹೆಸರಲ್ಲಿ ಕಿರುಕುಳ ನೀಡಲಾಗುತ್ತಿದೆ. ಈ ಬಗ್ಗೆ ಮುಖ್ಯಮಂತ್ರಿಗಳಿಗೆ ಪತ್ರ ಬರೆಯಲಾಗಿದೆ. –
ಎ. ಅಮೃತ್‌ರಾಜ್, ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ