ಮದ್ದೂರು: ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಮುಕ್ತ ಮತ್ತು ನ್ಯಾಯ ಸಮ್ಮತ ಚುನಾವಣೆ ನಡೆಸುವ ಉದ್ದೇಶದಿಂದ ಕೇಂದ್ರ ಮೀಸಲು ಪಡೆ ಮತ್ತು ಸ್ಥಳೀಯ ಪೊಲೀಸರು ಮದ್ದೂರು ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಭಾನುವಾರ ಪಥಸಂಚಲನ ನಡೆಸಿದರು.
ಜಿಲ್ಲಾ ಪೊಲೀಸ್ ಅಧೀಕ್ಷಕ ಡಿ. ಶಿವಪ್ರಕಾಶ್ ನೇತೃತ್ವದಲ್ಲಿ ಬೆಂಗಳೂರು-ಮೈಸೂರು ಹೆದ್ದಾರಿಯ ಕೊಲ್ಲಿ ಸರ್ಕಲ್‌ನಿಂದ ಹಳೇ ಎಂ.ಸಿ. ರಸ್ತೆ, ಪೇಟೆ ಬೀದಿ ಮೂಲಕ ಪ್ರವಾಸಿ ಮಂದಿರದವರೆಗೆ ಸಿಆರ್‌ಪಿಎಫ್ ಪೊಲೀಸರು ಪಥ ಸಂಚಲನ ನಡೆಸುವುದರೊಂದಿಗೆ ನಿಮ್ಮ ಜೊತೆ ನಾವಿದ್ದೇವೆ.
ನಿಟ್ನೇತಿಯಿಂದ ಮತದಾನ ಮಾಡಿ ಎಂದು ಜನರಲ್ಲಿ ಧೈರ್ಯ ತುಂಬಿದರು. ನಂತರ ಸೂಕ್ಷ್ಮ ಮತಗಟ್ಟೆಗಳೆಂದು ಗುರುತಿಸಲ್ಪಟ್ಟಿರುವ ತಾಲೂಕಿನ ಗೆಜ್ಜಲಗೆರೆ ಹಾಗೂ ಕುದರಗುಂಡಿ ಗ್ರಾಮಗಳಲ್ಲಿ ಕೇಂದ್ರ ಮೀಸಲು ಪಡೆ ಪೊಲೀಸರು ಪಥ ಸಂಚಲನ ನಡೆಸಿದರು.
ಬಳಿಕ ಸುದ್ಧಿಗಾರರೊಂದಿಗೆ ಎಸ್‌ಪಿ ಶಿವಪ್ರಕಾಶ್ ಮಾತನಾಡಿ, ಚುನಾವಣೆಯಲ್ಲಿ ಜನರು ಯಾವುದೇ ಭಯ ಭೀತಿಯಿಂದ ಇರಬಾರದು ಎಂಬ ಉದ್ದೇಶದಿಂದ ಸೂಕ್ಷ್ಮ ಪ್ರದೇಶಗಳಲ್ಲಿ ಸಿಆರ್‌ಪಿಎಫ್ ಯೋಧರು ಸ್ಥಳೀಯ ಪೊಲೀಸರ ಸಹಕಾರದೊಂದಿಗೆ ಪಥ ಸಂಚಲನ ನಡೆಸುತ್ತಿದ್ದಾರೆ ಎಂದರು.
ಚುನಾವಣೆ ವೇಳೆ ಗಲಭೆ ಹತ್ತಿಕ್ಕಲು ಮತ್ತು ಮತಗಟ್ಟೆಗಳಲ್ಲಿ ಶಾಂತಿಯುತ ಮತದಾನ ನಡೆಸಲು ಕೇಂದ್ರ ಮೀಸಲು ಪಡೆಯ ಪೊಲೀಸರನ್ನು ಕರ್ತವ್ಯಕ್ಕೆ ನಿಯೋಜಿಸಲಾಗುವುದು ಎಂದರು.
ಪಥ ಸಂಚಲನದಲ್ಲಿ ಡಿವೈಎಸ್ಪಿ ಶೈಲೇಂದ್ರ, ಸಿಪಿಐ ಎನ್.ವಿ.ಮಹೇಶ್, ಮದ್ದೂರು ಠಾಣೆ ಪಿಎಸ್‌ಐ ಮಂಜೇಗೌಡ, ಕೆಸ್ತೂರು ಠಾಣೆ ಪಿಎಸ್‌ಐ ಸಂತೋಷ್, ಸಂಚಾರಿ ಠಾಣೆ ಪಿಎಸ್‌ಐ ಮೋಹನ್ ಪಟೇಲ್ ಭಾಗವಹಿಸಿದ್ದರು.