ಕೆ.ಆರ್.ನಗರ: ಚುನಾವಣೆ ಸಮಯದಲ್ಲಿ ಹಾಜರಾಗಿ ಮತ ಕೇಳಿ ಕಾಣೆಯಾಗುವವರನ್ನು ಬೆಂಬಲಿಸುವ ಬದಲು ಸದಾ ಜನರ ಸಂಕಷ್ಟಕ್ಕೆ ಸ್ಪಂದಿಸುವ ನಮಗೆ ಮತ ನೀಡಿ ಎಂದು ಸಿಎಂ ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ತಾಲೂಕಿನ ಬಸವರಾಜಪುರ ಗ್ರಾಮದಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರದ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಕೂಟದ ಅಭ್ಯರ್ಥಿ ನಿಖಿಲ್ ಪರವಾಗಿ ಮತ ಯಾಚಿಸಿ ಮಾತನಾಡಿದ ಅವರು ಬಜೆಟ್‌ನಲ್ಲಿ ಘೋಷಿಸಿರುವಂತೆ ರೈತರ ಸಂಪೂರ್ಣ ಸಾಲ ಮನ್ನಾ ಮಾಡಲು ಸರ್ಕಾರ ಬದ್ಧ ಎಂದರು.
ಸಚಿವರಿಗೆ ಬೇಸರ: ಕೆ.ಆರ್.ನಗರ ಕ್ಷೇತ್ರದ ಶಾಸಕರಾಗಿ 3 ಬಾರಿ ಆಯ್ಕೆಯಾಗಿ ಈಗ ಸಚಿವರಾಗಿರುವ ಸಾ.ರಾ.ಮಹೇಶ್‌ರಿಗೆ ಕೊಂಚ ಬೇಸರವಿದೆ. ಇದಕ್ಕೆ ಕಾರಣ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸಾವಿರ ಮತಗಳ ಅಂತರದಿಂದ ಜನರು ಅವರನ್ನು ಆಯ್ಕೆ ಮಾಡಿರುವುದು ಎಂದ ಎಚ್.ಡಿ.ಕುಮಾರಸ್ವಾಮಿ, ಏ.18ರಂದು ನಡೆಯುವ ಲೋಕಸಭಾ ಚುನಾವಣೆಯಲ್ಲಿ ನೀವೆಲ್ಲರೂ ನಿಖಿಲ್‌ಕುಮಾರಸ್ವಾಮಿಗೆ ಅತಿ ಹೆಚ್ಚು ಮತ ನೀಡಬೇಕು ಎಂದು ವಿನಂತಿಸಿದರು.
ರೇಷ್ಮೆ ಮತ್ತು ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್, ನವ ನಗರ ಅರ್ಬನ್ ಬ್ಯಾಂಕ್ ಅಧ್ಯಕ್ಷ ಕೆ.ಎನ್.ಬಸಂತ್, ಮೈಮುಲ್ ಮಾಜಿ ಅಧ್ಯಕ್ಷ ಎ.ಟಿ.ಸೋಮಶೇಖರ್, ಎಪಿಎಂಸಿ ಅಧ್ಯಕ್ಷ ಕುಪ್ಪಳ್ಳಿಸೋಮು, ತಾಲೂಕು ಜೆಡಿಎಸ್ ಅಧ್ಯಕ್ಷ ಚಂದ್ರಶೇಖರ್, ವಕ್ತಾರ ಕೆ.ಎಲ್.ರಮೇಶ್, ಜಿಪಂ ಮಾಜಿ ಅಧ್ಯಕ್ಷ ಸಿದ್ದಪ್ಪ ಮತ್ತಿತರರಿದ್ದರು.
ಆನಂತರ ಲಾಳನಹಳ್ಳಿ, ಸಾತಿಗ್ರಾಮ, ನಾರಾಯಣಪುರ, ಕಗ್ಗೆರೆ, ತಿಪ್ಪೂರು, ಹಂಪಾಪುರ, ಮಂಚನಹಳ್ಳಿ, ಬಾಲೂರು, ಗಂಧನಹಳ್ಳಿ, ಮಿರ್ಲೆ, ಚಾಮಲಾಪುರ, ಬೀಚನಹಳ್ಳಿ, ಬೀಚನಹಳ್ಳಿಕೊಪ್ಪಲು, ಶ್ಯಾಬಾಳು, ಅಂಕನಹಳ್ಳಿ, ಸಾಲಿಗ್ರಾಮ, ನಾಟನಹಳ್ಳಿ, ಹರದನಹಳ್ಳಿ, ಭೇರ್ಯ ಮತ್ತು ಮುಂಜನಹಳ್ಳಿ ಸೇರಿ ಇತರೆ ಗ್ರಾಮಗಳಲ್ಲಿ ರೋಡ್‌ಶೋ ನಡೆಸಿ ಮತ ಯಾಚಿಸಿದರು.