Advertisement

ಲೋಕಸಭೆಗೇ ಮತ ಚಲಾವಣೆ ಹೆಚ್ಚು

12:05 AM Apr 21, 2019 | Team Udayavani |

ಪುತ್ತೂರು: ಲೋಕಸಭಾ ಚುನಾವಣೆ ಪ್ರಕ್ರಿಯೆ ಮುಗಿಯುತ್ತಿದ್ದಂತೆ ಪರ್ಸಂಟೇಜ್‌ ಲೆಕ್ಕಾಚಾರ ಶುರುವಾಗಿದೆ. ರಾಜಕೀಯ ನಾಯಕರು, ಪಕ್ಷಗಳು ಚಲಾವಣೆಯಾದ ಮತಗಳ ಆಧಾರದಲ್ಲಿ ಸೋಲು -ಗೆಲುವು ಲೆಕ್ಕಾಚಾರ ಹಾಕುವುದರಿಂದ ಇದು ಮಹತ್ವ ಪಡೆದಿದೆ. 2014ರ ಲೋಕಸಭಾ ಚುನಾವಣೆಗೆ ಹೋಲಿಸಿದರೆ 2019ರಲ್ಲಿ ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಶೇ. 0.25ರಷ್ಟು ಮತ ಪ್ರಮಾಣ ಕಡಿಮೆಯಾಗಿದೆ. ಆದರೆ 2018ರಲ್ಲಿ ನಡೆದ ವಿಧಾನಸಭಾ ಚುನಾವಣೆಗಿಂತ ಶೇ. 0.58 ಮತ ಹೆಚ್ಚು ಚಲಾವಣೆಯಾಗಿದೆ.

Advertisement

ದ.ಕ. ಲೋಕಸಭಾ ಕ್ಷೇತ್ರ ವ್ಯಾಪ್ತಿಯ ವಿಧಾನಸಭಾ ಕ್ಷೇತ್ರಗಳಲ್ಲಿ ದಾಖಲಾದ ಶೇಕಡಾವಾರು ಮತ ಪ್ರಮಾಣ ಗಮನಿಸಿದರೆ ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಶೇ. 82.28 ಮತ ಚಲಾವಣೆಯಾಗುವ ಮೂಲಕ ದ್ವಿತೀಯ ಸ್ಥಾನ ಪಡೆದುಕೊಂಡಿದೆ. ಪ್ರಥಮ ಸ್ಥಾನವನ್ನು ಸುಳ್ಯ ವಿಧಾನಸಭಾ ಕ್ಷೇತ್ರ (ಶೇ. 84.21) ಪಡೆದುಕೊಂಡಿದೆ. ಹಲವು ವರ್ಷಗಳಿಂದ ದ್ವಿತೀಯ ಸ್ಥಾನದ ಗೌರವವನ್ನು ಪುತ್ತೂರು ವಿಧಾನಸಭಾ ಕ್ಷೇತ್ರ ಉಳಿಸಿಕೊಂಡಿದೆ. 2014ರ ಲೋಕಸಭಾ ಚುನಾವಣೆ ಯಲ್ಲಿ ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಶೇ. 82.53 ಮತಗಳು ಚಲಾವಣೆಯಾಗಿದ್ದವು.

2019ರಲ್ಲಿ ಶೇ. 82.28 ಮತ ಚಲಾವಣೆಯಾಗಿದೆ. 2018ರ ವಿಧಾನಸಭಾ ಚುನಾವಣೆಯಲ್ಲಿ ಶೇ. 81.70 ಮತ ಚಲಾವಣೆಯಾಗಿತ್ತು. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ 2014ರ ಲೋಕಸಭಾ ಚುನಾವಣೆಗಿಂತ ಶೇಕಡಾವಾರು ಲೆಕ್ಕಾಚಾರದಲ್ಲಿ ಕಡಿಮೆ ಮತ್ತು 2018ರ ವಿಧಾನಸಭಾ ಚುನಾವಣೆಗಿಂತ ಹೆಚ್ಚು ಮತಚಲಾವಣೆಯಾಗಿದೆ.

ಶಾಂತಿಗೋಡು ಗರಿಷ್ಠ, ವಿಟ್ಲ ಕಸಬಾ ಕನಿಷ್ಠ
ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಂತಿಗೋಡು ಗ್ರಾಮದ ವೀರಮಂಗಲ ಹಿ.ಪ್ರಾ. ಶಾಲಾ ಮತಗಟ್ಟೆಯಲ್ಲಿ 93 ಶೇ. ಗರಿಷ್ಠ ಮತದಾನವಾಗಿದೆ. ಶಾಂತಿಗೋಡು ಹಿ.ಪ್ರಾ. ಶಾಲಾ ಮತಗಟ್ಟೆಯಲ್ಲಿ 91.14 ಶೇ., ಸರ್ವೆ ಭಕ್ತಕೋಡಿ ಹಿ.ಪ್ರಾ. ಶಾಲೆ (ಪೂರ್ವಭಾಗ) ಮತಗಟ್ಟೆಯಲ್ಲಿ 90.92 ಶೇ. ಮತದಾನವಾಗಿದೆ. ವಿಟ್ಲ ಕಸಬಾ ಹಿ.ಪ್ರಾ. ಶಾಲೆ (ಪೂರ್ವಭಾಗ) ಮತಗಟ್ಟೆಯಲ್ಲಿ ಕನಿಷ್ಠ 69.35 ಶೇ. ಮತ ಚಲಾವಣೆಯಾಗಿದೆ.

ಮತದಾನದ ಪ್ರಮಾಣ
ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ 220ಗಳಲ್ಲಿ ಪುರುಷರು 1,01,473, ಮಹಿಳೆಯರು 1,02,956 ಸಹಿತ ಒಟ್ಟು 2,04,432 ಮಂದಿ ಮತದಾನದ ಅವಕಾಶ ಹೊಂದಿದ್ದರು. ಇದರಲ್ಲಿ 82,862 ಪುರುಷರು, 85,340 ಮಹಿಳೆಯರು ಸಹಿತ ಒಟ್ಟು 1,68,202 ಮತದಾರರು ಹಕ್ಕು ಚಲಾಯಿಸಿದ್ದಾರೆ. 18,611 ಪುರುಷರು ಹಾಗೂ 17,616 ಮಹಿಳೆಯರು ಮತದಾನದ ಹಕ್ಕು ಚಲಾಯಿಸಿಲ್ಲ.

Advertisement

ಪುತ್ತೂರು: ಲೋಕಸಭಾ ಚುನಾವಣೆಗೆ ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮತದಾನ ಶಾಂತಿಯುತವಾಗಿ ಮತ್ತು ನಡೆಯುವ ಮೂಲಕ ಪುತ್ತೂರಿನ ಉತ್ತಮ ಪರಂಪರೆಯನ್ನು ಮತದಾರರು ಮುಂದುವರಿಸಿದ್ದಾರೆ. ಶೇ. 82.28ರಷ್ಟು ಉತ್ತಮ ಮತದಾನವಾಗಲು ಸಹಕರಿಸಿದ ಎಲ್ಲರಿಗೂ ಅಭಿನಂದನೆ ಸಲ್ಲಿಸುವುದಾಗಿ ಸಹಾಯಕ ಚುನಾವಣಾಧಿಕಾರಿ ಹಾಗೂ ಪುತ್ತೂರು ಸಹಾಯಕ ಕಮಿಷನರ್‌ ಎಚ್‌.ಕೆ. ಕೃಷ್ಣಮೂರ್ತಿ ಹೇಳಿದ್ದಾರೆ. ಸಾರ್ವಜನಿಕರು, ರಾಜಕಾರಣಿಗಳು, ಅಧಿಕಾರಿಗಳು, ಮಾಧ್ಯಮಗಳ ಸಮನ್ವಯ ಮತ್ತು ನೀತಿ ಪಾಲ ನೆಯ ನಡೆಯಿಂದ ಅಹಿತಕರ, ಅಶಾಂತಿಯ ಘಟನೆಗಳಿಲ್ಲದೆ ಚುನಾವಣೆ ನಡೆಸಿದ ಖುಷಿ ಇದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಮತದಾರನ ಜವಾಬ್ದಾರಿ
ಮತಯಂತ್ರಗಳ ದೋಷಗಳ ಕುರಿತಂತೆ ಸಾರ್ವಜನಿಕರಿಂದ ಬಂದ ಕರೆಗಳನ್ನು ಕೂಡಲೇ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗಿದೆ. ಚುನಾವಣಾ ಆಯೋಗ ನೂತನ ತಂತ್ರಜ್ಞಾನ ಅಳವಡಿಸಿರುವುದರಿಂದ ಕೆಲವರ ಹೆಸರು ಬಿಟ್ಟುಹೋಗಿದೆ. ಚುನಾವಣೆಗೆ ಮೊದಲು ಮತದಾರರ ಪಟ್ಟಿಯಲ್ಲಿ ಹೆಸರಿರುವ ಕುರಿತು ಪರಿಶೀಲನೆಗೆ ಗ್ರಾ.ಪಂ.ಗಳಲ್ಲಿ ಅವಕಾಶ ನೀಡಲಾಗಿತ್ತು. ಮತದಾರರಿಗೂ ಜವಾಬ್ದಾರಿ ಇದೆ. ಮುಂದಿನ ದಿನಗಳಲ್ಲಿ ಈ ತಪ್ಪುಗಳು ಆಗಬಾರದು ಎಂದರು. ಕಳೆದ 12 ವರ್ಷಗಳ ಸೇವೆಯಲ್ಲಿ ಲೋಕಸಭೆ, ವಿಧಾನಸಭೆ, ಜಿ. ಪಂ., ತಾ. ಪಂ., ನಗರಸಭೆ, ಸಾಹಿತ್ಯ ಪರಿಷತ್‌, ಡಿಸಿಸಿ ಬ್ಯಾಂಕ್‌, ಎಪಿಎಂಸಿ ಸಹಿತ 25ಕ್ಕೂ ಹೆಚ್ಚು ಚುನಾವಣೆಗಳನ್ನು ನಿರ್ವಹಿಸಿದ್ದೇನೆ. ಈ ಬಾರಿಯ ಚುನಾವಣೆ ಅತ್ಯಂತ ನೀಟ್‌ ಆಗಿದ್ದಕ್ಕೆ ಖುಷಿ ಇದೆ ಎಂದು ಹೇಳಿದರು.

ಗಂಭೀರ ಪ್ರಕರಣಗಳಿಲ್ಲ
ಚುನಾವಣೆ ವಿಚಾರಕ್ಕೆ ಸಂಬಂಧಿಸಿ ದಂತೆ ಪುತ್ತೂರು ಪುತ್ತೂರು ವಿಧಾ ನಸಭಾ ಕ್ಷೇತ್ರ ಸಿವಿಜಿಲ್‌ನಲ್ಲಿ ಒಟ್ಟು 8 ಪ್ರಕರಣಗಳು ದಾಖಲಾ ಗಿವೆ. ಇವೆಲ್ಲ ಸಣ್ಣಪುಟ್ಟ ದೂರುಗ ಳಾಗಿರುವುದರಿಂದ ತತ್‌ಕ್ಷಣ ಬಗೆಹರಿಸಲಾಗಿದೆ. ಯಾವುದೇ ಅಕ್ರಮ ಹಣ ಪತ್ತೆಯಾಗಿಲ್ಲ. 5 ಅಕ್ರಮ ಮದ್ಯ ಮಾರಾಟ ಪ್ರಕರಣ ಗಳು ಪತ್ತೆಯಾಗಿವೆ ಎಂದು ಮಾಹಿತಿ ನೀಡಿದರು.

ಬಂದೋಬಸ್ತ್ ಮುಂದುವರಿಕೆ
ಚುನಾವಣೆ ಮುಗಿದರೂ ಗಡಿ ಭಾಗಗಳಲ್ಲಿ ನಾಕಾಬಂಧಿ ಹಾಗೆಯೇ ಮುಂದುವರೆಯಲಿದೆ. ಕೇರಳ ರಾಜ್ಯದ ಮತದಾನ ಎ. 23ರಂದು ನಡೆಯುತ್ತಿರುವುದರಿಂದ ಮತ್ತು ಮುಂದಕ್ಕೆ ಮತ ಎಣಿಕೆ ಪ್ರಕ್ರಿಯೆ ಇರುವುದರಿಂದ ಬಂದೋಬಸ್ತ್ ಮುಂದುವರೆಯಲಿದೆ ಎಂದು ಎಚ್‌.ಕೆ. ಕೃಷ್ಣಮೂರ್ತಿ ಹೇಳಿದರು.

ರಾಜೇಶ್‌ ಪಟ್ಟೆ

Advertisement

Udayavani is now on Telegram. Click here to join our channel and stay updated with the latest news.

Next