Advertisement
ರಾಜ್ಯ ರಾಜಕೀಯ ಮೇಲೆ ತನ್ನದೇ ಪ್ರಭಾವ ಬೀರಬಹುದೆಂಬ ನಿರೀಕ್ಷೆ ಹೊಂದಲಾದ ಎರಡು ಕ್ಷೇತ್ರಗಳ ಉಪ ಚುನಾವಣೆಯ ಫಲಿತಾಂಶ ಏನೆಂಬುದನ್ನು ಮತದಾರರು ರವಿವಾರ ನಿರ್ಧರಿಸಲಿದ್ದಾರೆ. ಸಂಖ್ಯಾ ದೃಷ್ಟಿಯಿಂದ ಅಲ್ಲದಿದ್ದರೂ ರಾಜ್ಯ ರಾಜಕೀಯ ವಾತಾವರಣದ ಮೇಲೆ ಉಪ ಚುನಾವಣೆ ಪ್ರಭಾವ ಮಹತ್ವದಾಗಿದೆ ಎಂದು ರಾಜಕೀಯವಾಗಿ ವಿಶ್ಲೇಷಿಸಲಾಗುತ್ತಿದೆ.
Related Articles
Advertisement
ವಿವಾದಗಳಿಗೆ ವೇದಿಕೆ: ಉಪ ಚುನಾವಣೆಗಳು ಎಂದ ಕೂಡಲೇ ಪ್ರಮುಖ ರಾಜಕೀಯ ಪಕ್ಷಗಳು ಕ್ಷೇತ್ರವನ್ನೇ ಕೇಂದ್ರೀಕರಿಸುತ್ತವೆ. ಶಾಸಕರು, ಸಚಿವರು, ಸಂಸದರು ಹಾಗೂ ಪಕ್ಷಗಳ ನಾಯಕರ ದಂಡೇ ಕ್ಷೇತ್ರದಲ್ಲಿ ಠಿಕಾಣಿ ಹೂಡುತ್ತಾರೆ. ಪ್ರಚಾರ-ತಂತ್ರಗಾರಿಕೆ ನಡೆಸುತ್ತಾರೆ. ಪರಸ್ಪರ ಆರೋಪ-ಪ್ರತ್ಯಾರೋಪ, ನಿಂದನೆಗೆ ಮುಂದಾಗುತ್ತಾರೆ. ಕುಂದಗೋಳ-ಚಿಂಚೊಳಿ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಆಗಿದ್ದು ಇದೆ.
ರಾಜ್ಯದ ವಿವಿಧ ಪಕ್ಷಗಳ ಘಟಾನುಘಟಿ ನಾಯಕರ ಪ್ರಚಾರ, ಭಾಷಣ, ವ್ಯಕ್ತಿಗತ ನಿಂದನೆ, ಆಕ್ಷೇಪಾರ್ಹ ಹಾಗೂ ವಿವಾದಾತ್ಮಕ ಹೇಳಿಕೆಗಳಿಗೆ ಎರಡು ವಿಧಾನಸಭೆ ಕ್ಷೇತ್ರಗಳ ಉಪ ಚುನಾವಣೆ ವೇದಿಕೆಯಾಯಿತು. ಪ್ರಮುಖ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ಎಚ್.ಡಿ.ಕುಮಾರಸ್ವಾಮಿ, ಡಾ| ಜಿ.ಪರಮೇಶ್ವರ, ಬಿ.ಎಸ್.ಯಡಿಯೂರಪ್ಪ, ಸಿದ್ದರಾಮಯ್ಯ, ದಿನೇಶ ಗುಂಡೂರಾವ್, ಜಗದೀಶ ಶೆಟ್ಟರ, ಡಿ.ಕೆ.ಶಿವಕುಮಾರ, ಕೆ.ಎಸ್.ಈಶ್ವರಪ್ಪ, ಎಂ.ಬಿ.ಪಾಟೀಲ, ಸತೀಶ ಜಾರಕಿಹೊಳಿ, ಗೋವಿಂದ ಕಾರಜೋಳ, ಎಚ್.ಕೆ.ಪಾಟೀಲ, ಬಸವರಾಜ ಹೊರಟ್ಟಿ, ಶ್ರೀರಾಮುಲು, ಶೋಭಾ ಕರಂದ್ಲಾಜೆ, ಪ್ರಹ್ಲಾದ ಜೋಶಿ ಸೇರಿದಂತೆ ಅನೇಕ ನಾಯಕರು ತಮ್ಮದೇ ಪ್ರಭಾವ ಬೀರುವ ಯತ್ನ ತೋರಿದ್ದರು. ವಿವಾದಾತ್ಮಕ ಅಸ್ತ್ರಗಳನ್ನು ತೇಲಿಬಿಟ್ಟಿದ್ದರು.
ಚಿಂಚೊಳಿ ವಿಧಾನಸಭೆ ಉಪ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕರು ಪ್ರಧಾನಿ ವಿರುದ್ಧ ಏಕ ವಚನ ಪದ ಬಳಕೆ ಮಾಡಿದ್ದರಲ್ಲದೆ, ಆಪರೇಷನ್ ಕಮಲದ 50 ಕೋಟಿಗೆ ಡಾ| ಉಮೇಶ ಜಾಧವ ಮಾರಾಟವಾಗಿದ್ದಾರೆಂದು ಆರೋಪಿಸಿದ್ದರು. ಇದಕ್ಕೆ ಪ್ರತಿಯಾಗಿ ಬಿಜೆಪಿಯವರು ಮಲ್ಲಿಕಾರ್ಜುನ ಖರ್ಗೆ 50 ಸಾವಿರ ಕೋಟಿ ರೂ. ಆಸ್ತಿ ಮಾಡಿದ್ದಾರೆಂದು ಆರೋಪಿಸಿದ್ದರು. ವೀರೇಂದ್ರ ಪಾಟೀಲರಿಗೆ ಕಿರುಕುಳ ನೀಡಿದ್ದ ಕಾಂಗ್ರೆಸ್‌ಗೆ ವೀರಶೈವರು ಮತ ಹಾಕಬಾರದೆಂಬ ಯಡಿಯೂರಪ್ಪ ಅವರ ಹೇಳಿಕೆ ವಿವಾದ ರೂಪ ಪಡೆದಿತ್ತು. ಖರ್ಗೆಯವರು ಎಂದೋ ಮುಖ್ಯಮಂತ್ರಿ ಆಗಬೇಕಿತ್ತು ಎಂಬ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿಕೆ ಮಿತ್ರಪಕ್ಷಗಳ ಜಟಾಪಟಿಗೂ ಕಾರಣವಾಗಿತ್ತು.
ಕುಂದಗೋಳದಲ್ಲಿ ಸಿ.ಎಸ್.ಶಿವಳ್ಳಿ ಅವರ ಸಾವಿಗೆ ಕಾಂಗ್ರೆಸ್-ಸಮ್ಮಿಶ್ರ ಸರ್ಕಾರದ ಕಿರುಕುಳ ಕಾರಣವೆಂಬ ಶ್ರೀರಾಮುಲು ಹೇಳಿಕೆ ವಿವಾದಕ್ಕೆ ಕಾರಣವಾಗಿತ್ತು. ಕಾಂಗ್ರೆಸ್ ನಾಯಕರು ನರಸತ್ತವರು, ಗಂಡಸ್ತನ ಇಲ್ಲದವರು, ಸಿದ್ದರಾಮಯ್ಯ ಕೈ ಬಳೆ ಹಾಕಿಕೊಳ್ಳಲಿ, ನೂರು ಡಿ.ಕೆ.ಶಿವಕುಮಾರ ಬಂದರೂ ಏನು ಮಾಡಲಾಗದು, ಬಿಜೆಪಿ ಕಾರ್ಯಕರ್ತರ ಸೆಳೆಯಲೆತ್ನಿಸಿದರೆ ಪರಿಸ್ಥಿತಿ ನೆಟ್ಟಗಿರದು, ಡಿಕೆಶಿ ಕೋಣ ಇದ್ದಂತೆ ಎಂಬ ಹೇಳಿಕೆಗಳು ವಿವಾದ ರೂಪ ಪಡೆದಿದ್ದವು.
ನಾಯಕರ ಹೇಳಿಕೆ, ಪ್ರತಿ ಹೇಳಿಕೆ, ವಾಗ್ವಾದಗಳ ನಡುವೆ ಕುಂದಗೋಳ-ಚಿಂಚೊಳಿಯಲ್ಲಿ ಮತಬೇಟೆ ಮುಗಿದಿದೆ. ಎರಡು ಕ್ಷೇತ್ರಗಳಲ್ಲಿ ನೇರ ಸ್ಪರ್ಧೆ ಏರ್ಪಟ್ಟಿರುವ ಹಿನ್ನೆಲೆಯಲ್ಲಿ ಮೂವರು ಅಭ್ಯರ್ಥಿಗಳು ವಿಧಾನಸಭೆ ಪ್ರವೇಶಕ್ಕೆ ಕಾತುರರಾಗಿದ್ದಾರೆ, ಒಬ್ಬರು ಮಾಜಿ ಶಾಸಕ ಮತ್ತೂಮ್ಮೆ ವಿಧಾನಸಭೆ ಪ್ರವೇಶಕ್ಕೆ ಸರ್ಕಸ್ ನಡೆಸಿದ್ದಾರೆ. ಮತದಾರರು ಯಾರಿಗೆ ವಿಧಾನಸಭೆ ಪ್ರವೇಶಕ್ಕೆ ಅನುಮತಿ ನೀಡುವರೋ ಎಂಬ ಕುತೂಹಲ, ಆತಂಕ ಅಭ್ಯರ್ಥಿಗಳಲ್ಲಿ ಮನೆ ಮಾಡಿದ್ದು, ರವಿವಾರ ಮತದಾರರ ಅನುಮತಿ ಮತಯಂತ್ರದೊಳಗೆ ಬಂಧಿಯಾಗಲಿದೆ.
•ಅಮರೇಗೌಡ ಗೋನವಾರ