ವಿಜಯಪುರ: ಸ್ವಯಂ ಪ್ರೇರಣೆಯಿಂದ ಹಾಗೂ ಅಭಿವೃದ್ಧಿಯ ಪೂರಕವಾಗಿ ಮುಂದಾಲೋಚನೆಯೊಂದಿಗೆ ಬರುವ ವಿಧಾನಸಭಾ ಚುನಾವಣೆಯಲ್ಲಿ ಕಡ್ಡಾಯ ಮತದಾನ ಮಾಡುವಂತೆ ಜಿಪಂ ಸಿಇಒ ಎಂ.ಸುಂದರೇಶಬಾಬು ಕರೆ ನೀಡಿದರು. ನಗರದ ರೂಪಂ ಗಾರ್ಮೆಂಟ್ಸ್ ಕಾರ್ಖಾನೆಯ ಕಾರ್ಮಿಕರಿಗೆ ಮತದಾನದ ಮಹತ್ವ ಕುರಿತಂತೆ ಜಿಲ್ಲಾ ಸ್ವೀಪ್ ಸಮಿತಿಯಿಂದ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ರಾಜ್ಯದ ವಿಧಾನಸಭೆ ಚುನವಣೆಗಾಗಿ ಮೇ 12ರಂದು ನಡೆಯುವ ಮತದಾನ ಕಾರ್ಯಕ್ರಮದಲ್ಲಿ ಪ್ರತಿಯೊಬ್ಬ ಮತದಾರರೂ ತಪ್ಪದೇ ಮತದಾನ ಮಾಡಬೇಕು. ಆ ಮೂಲಕ ವಿಜಯಪುರ ಜಿಲ್ಲೆಯನ್ನು ಮತದಾನದಲ್ಲಿ ಪ್ರತಿಶತ ಸಾಧನೆ ಜಿಲ್ಲೆಯ ಸ್ಥಾನಕ್ಕೆ ತರಬೇಕು. ಇದಕ್ಕಾಗಿ ನೀವು ಮತದಾನ ಮಾಡುವ ಜೊತೆಗೆ ಇತರರನ್ನು ಮತದಾನಕ್ಕೆ ಪ್ರೇರೇಪಿಸಬೇಕು ಎಂದರು. ಅಸಂಘಟಿತ ಕಾರ್ಮಿಕರ ಸಂಖ್ಯಾಬಲ ಹೆಚ್ಚಾಗಿದೆ. ವಿಶೇಷವಾಗಿ ವಿವಿಧ ಕಟ್ಟಡಗಳ ನಿರ್ಮಾಣ ಸೇರಿದಂತೆ ಅನೇಕ ರೀತಿಯ ಕಾರ್ಖಾಣೆಗಳಲ್ಲಿ
ಕಾರ್ಯ ನಿರ್ವಹಿಸುತ್ತಿರುವ ಕಾರ್ಮಿಕರು ತಪ್ಪದೇ ಮತದಾನ ಮಾಡಬೇಕು. ಈ ಬಾರಿಯ ಚುನಾವಣೆ ಅನೇಕ ವಿಶೇಷತೆ ಹೊಂದಿದ್ದು, ಮತಗಟ್ಟೆಗಳಲ್ಲಿ ಅಗತ್ಯ ಮೂಲ ಸೌಕರ್ಯ ಒದಗಿಸಲಾಗಿದೆ. ಇದೇ ಪ್ರಥಮ ಬಾರಿಗೆ ಮತ ಖಾತ್ರಿಯಂತ್ರ ಸಹ ಬಳಸಲಾಗುತ್ತಿದೆ. ಕಾರ್ಮಿಕರು ಈ ಕುರಿತು ಮಾಹಿತಿ ಪಡೆದು ಮತ ಚಲಾಯಿಸುವಂತೆ ಕರೆ ನೀಡಿದರು.
ಜಿಲ್ಲೆಯಲ್ಲಿ ಕಳೆದ ಬಾರಿ ಚುನಾವಣೆಯಲ್ಲಿ ಶೇ. 66ರಷ್ಟು ಮತದಾನವಾಗಿದ್ದು, ವಿಧಾನಸಭಾ ಚುನಾವಣೆಯಲ್ಲಿ ಶೇ. 100ರಷ್ಟು ಮತದಾನ ಮಾಡಬೇಕು. ಇದಕ್ಕಾಗಿ ಚುನಾವಣಾ ಆಯೋಗ ನಿರ್ದೇಶನದಂತೆ ಹಲವು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಕಡಿಮೆ ಮತದಾನದಿಂದ ಯೋಗ್ಯ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಹಾಗೂ ಅಭಿವೃದ್ಧಿ ಕುಂಠಿತಕ್ಕೆ ಕಾರಣವಾಗಲಿದೆ. ಕಾರಣ 18 ವರ್ಷ ಪೂರೈಸಿದವರೆಲ್ಲರೂ ತಪ್ಪದೇ ಮತದಾನ ಮಾಡಿ ಸುಭದ್ರ ಸಮಾಜ ಹಾಗೂ ರಾಷ್ಟ್ರ ನಿರ್ಮಾಣಕ್ಕೆ ನೆರವಾಗಬೇಕೆಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ರೂಪಂ ಗಾರ್ಮೆಂಟ್ಸ ಮಾಲೀಕ ನಿತಿನ ರುಣವಾಲ ಅವರು ಬರುವ ಮೇ 12ರಂದು ಕಾರ್ಮಿಕರು ತಮ್ಮ ಮತದಾನ ಹಕ್ಕು ಚಲಾಯಿಸಲು ಕಾರ್ಖಾನೆಗೆ ರಜೆ ನೀಡಲಾಗುವುದು. ಮತದಾನ ಪವಿತ್ರ ಕೆಲಸ. ಅತ್ಯಂತ ಅಮೂಲ್ಯ ಕರ್ತವ್ಯ. ಹೀಗಾಗಿ ಯೋಗ್ಯ ಅಭ್ಯರ್ಥಿ ಆಯ್ಕೆಗೆ ತಪ್ಪದೇ ಮತದಾನ ಮಾಡಲು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಜಿಪಂ ಮುಖ್ಯಯೋಜನಾಧಿಕಾರಿ ಜಿ.ವಿ. ದಶವಂತ, ಯೋಜನಾ ನಿರ್ದೇಶಕ ಸಿ.ಬಿ. ಕುಂಬಾರ, ವಾರ್ತಾ ಇಲಾಖೆ ಸಹಾಯಕ ನಿರ್ದೇಶಕ ಎಸ್.ಡಿ. ನದಾಫ್ ಇದ್ದರು. ಜಿಲ್ಲಾ ಕಾರ್ಮಿಕ ಅಧಿಕಾರಿ ಅಶೋಕ ಭಾವಿಕಟ್ಟಿ ಪ್ರಾಸ್ತಾವಿಕ ಮಾತನಾಡಿದರು.