ಚಿಕ್ಕಬಳ್ಳಾಪುರ: ಮತದಾನದ ಮಹತ್ವ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಜಿಲ್ಲಾ ಕೇಂದ್ರದ ಸರ್‌ಎಂವಿ ಕ್ರೀಡಾಂಗಣದಲ್ಲಿ ಶುಕ್ರವಾರ ಪ್ಯಾರಾ ಗ್ಲೆ„ಡರ್ ಮೂಲಕ ಅಭಿಯಾನ ಹಮ್ಮಿಕೊಳ್ಳುವ ಮೂಲಕ ಮತದಾರರಲ್ಲಿ ಜಾಗೃತಿ ಮೂಡಿಸಲಾಯಿತು.
ಅಭಿಯಾನದಲ್ಲಿ ಜಿಲ್ಲೆಯ ವಿಧಾನಸಭಾ ಚುನಾವಣೆಗಾಗಿ ವೆಚ್ಚ ವೀಕ್ಷಕರಾಗಿ ಆಗಮಿಸಿರುವ ಉದಯ್ ಮಾದವ್ ರಾವ್ ಶಿಂಧೆ ಪ್ಯಾರಾ ಗ್ಲೆ„ಡರ್ ಮೂಲಕ ನಗರ ಪ್ರದಕ್ಷಿಣೆ ಮಾಡಿ ಗಮನ ಸೆಳೆದರು. ಬಳಿಕ ಮಾತನಾಡಿ, ಇದೊಂದು ಅದ್ಭುತ ಅನುಭವ, ಮತದಾರರಲ್ಲಿ ಮತದಾನದ ಮಹತ್ವ ಕುರಿತು ಅರಿವು ಮೂಡಿಸುವ ದಿಸೆಯಲ್ಲಿ ಜಿಲ್ಲೆಯಲ್ಲಿ ಸ್ವೀಪ್ ಸಮಿತಿ ವತಿಯಿಂದ ವಿವಿಧ ಕಾರ್ಯ ಕ್ರಮಗಳು ನಡೆದಿವೆ. ಜಿಲ್ಲೆಯಲ್ಲಿ ಶೇಕಡಾವಾರು ಮತದಾನ ಹೆಚ್ಚಳಕ್ಕೆ ಅರ್ಹರೆಲ್ಲರೂ ಕಡ್ಡಾಯವಾಗಿ ಮತದಾನ ಮಾಡುವಂತಾಗಬೇಕೆಂದರು.
ಮತದಾರರ ಜಾಗೃತಿಗಾಗಿ ಗಾಳಿಪಟ ಉತ್ಸವ: ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಮತದಾರರ ಜಾಗೃತಿಗಾಗಿ ಗಾಳಿ ಪಟ ಉತ್ಸವ ಸಹ ಆಯೋಜಿಸಲಾಗಿತ್ತು. ನಗರದ ವಿವಿಧ ಶಾಲಾ, ಕಾಲೇಜುಗಳ ನೂರಾರು ವಿದ್ಯಾರ್ಥಿಗಳು ಗಾಳಿಪಟಗಳನ್ನು ಆಗಸದಲ್ಲಿ ಹಾರಾಡಿಸುವ ಮೂಲಕ ಮತದಾನ ಮಾಡುವ ಪ್ರತಿಜ್ಞೆ ಸ್ವೀಕರಿಸಿದರು. ಗಾಳಿಪಟ್ಟ ಉತ್ಸವದಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಜಿಲ್ಲಾಡಳಿತ ಬಹುಮಾನ ನೀಡಿ ಉತ್ತೇಜಿಸಿತು.
ಜಿಪಂ ಸಿಇಒ ಹಾಗೂ ಜಿಲ್ಲಾಸ್ವೀಪ್ ಸಮಿತಿ ಅಧ್ಯಕ್ಷ ಗುರುದತ್ ಹೆಗಡೆ ಮಾತನಾಡಿ, ಪ್ಯಾರಾ ಗ್ಲೆ„ಡರ್ ಮೂಲಕ ಆಗಸದಲ್ಲಿ ಸುತ್ತಾಡಿದ್ದು ಒಳ್ಳೆಯ ಅನುಭವ. ಕಳೆದ ವರ್ಷ ಕೂಡ ಜಿಲ್ಲೆಯಲ್ಲಿ ಶೇಕಡ ವಾರು ಮತದಾನ ಪ್ರಮಾಣದಲ್ಲಿ ಇಡೀ ರಾಜ್ಯಕ್ಕೆ ಚಿಕ್ಕಬಳ್ಳಾಪುರ ಜಿಲ್ಲೆ ಪ್ರಥಮ ಸ್ಥಾನದಲ್ಲಿದೆ. ಈ ಬಾರಿಯೂ ಕಳೆದ ಬಾರಿಗಿಂತ ಹೆಚ್ಚಿನ ಮತದಾನ ಆಗಬೇಕು. ಕಳೆದ ತಿಂಗಳನಿಂದ ಇಡೀ ಜಿಲ್ಲೆಯಲ್ಲಿ ಮತದಾನ ಜಾಗೃತಿಗಾಗಿ ಅನೇಕ ಕಾರ್ಯಕ್ರಮ ಗಳನ್ನು ಆಯೋಜಿಸಿ ಅರಿವು ಮೂಡಿಸಲಾಗಿದೆ ಎಂದರು.
ಈ ವೇಳೆ ವಿಧಾನಸಭಾ ಚುನಾವಣೆಯ ವೆಚ್ಚ ವೀಕ್ಷಕರಾದ ಅನಂತ್ ಆರ್.ರಾಜೇಶ್ ಕುಮಾರ್, ಜಿಲ್ಲಾ ಸ್ವೀಪ್ ಸಮಿತಿ ಸದಸ್ಯರು, ಅಧಿಕಾರಿಗಳು ಉಪಸ್ಥಿತರಿದ್ದರು. ಸಾರ್ವಜನಿಕರು ಸಹ ಪಾಲ್ಗೊಂಡು ಪ್ಯಾರಾ ಗ್ಲೆ„ಡರ್ ಮೂಲಕ ಆಗಸದಲ್ಲಿ ಸುತ್ತಾಡಿ ಖುಷಿ ಪಟ್ಟರು.