ಹುಣಸೂರು: ಎಲ್ಲರೂ ಕಡ್ಡಾಯವಾಗಿ ಮತದಾನದಲ್ಲಿ ಪಾಲ್ಗೊಳ್ಳುವಂತೆ ಪ್ರೇರೇಪಿಸುವ ಸಲುವಾಗಿ ಹುಣಸೂರು ಸ್ವೀಪ್ ಸಮಿತಿ ಆಯೋಜಿಸಿದ್ದ ಬೈಕ್ ರ್ಯಾಲಿಗೆ ಜಿಪಂ ಸಿಇಒ ಶಿವಶಂಕರ್, ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ಚಾಲನೆ ನೀಡಿದರು.
ನಗರದ ಮೈಸೂರು ರಸ್ತೆಯ ದೇವರಾಜೇ ಅರಸು ಪುತ್ಥಳಿ ಬಳಿಯಿಂದ ಹೊರಟ ಬೈಕ್ ರ್ಯಾಲಿಗೆ ಶಿವಶಂಕರ್, ಚುನಾವಣಾಧಿಕಾರಿ ಕೆ.ನಿತೀಶ್, ಸ್ವೀಪ್ ಸಮಿತಿ ಸಂಚಾಲಕ ಕೃಷ್ಣಕುಮಾರ್, ನಗರಸಭೆ ಆಯುಕ್ತ ಶಿವಪ್ಪನಾಯ್ಕ ಬೈಕ್ ಚಲಾಯಿಸುವ ಮೂಲಕ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಶಿವಶಂಕರ್, ಪ್ರಜಾಪ್ರಭುತ್ವ ಹಬ್ಬವನ್ನು ಮತದಾನ ಮಾಡಿ ಆಚರಿಸುವಂತೆ ಜನ ಜಾಗೃತಿ ಮೂಡಿಸುವ ಸಲುವಾಗಿ ಚುನಾವಣಾ ಆಯೋಗದ ನಿರ್ದೇಶನದಂತೆ ಮತದಾನ ಪ್ರಮಾಣ ಹೆಚ್ಚಿಸಿ, ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಸ್ವೀಪ್ ಸಮಿತಿ ಬೈಕ್ ರ್ಯಾಲಿ,
ಹಳ್ಳಿಗಳಲ್ಲಿ ಶಾಲಾ-ಕಾಲೇಜು ವಿದ್ಯಾರ್ಥಿಗಳು, ಅಧಿಕಾರಿಗಳು, ಅಂಗನವಾಡಿ-ಆಶಾ, ಅಡುಗೆ ಸಿಬ್ಬಂದಿ ಮತ್ತು ಆರೋಗ್ಯ ಕಾರ್ಯಕರ್ತರಿಂದ ಜಾಥಾ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಮತದಾನದ ಮಹತ್ವ ಸಾರಲಾಗುತ್ತಿದೆ ಎಂದು ಹೇಳಿದರು.
ತಾಪಂ ಇಒ ಕೃಷ್ಣಕುಮಾರ್ ಮಾತನಾಡಿ, ಹುಣಸೂರು ತಾಲೂಕು ಕಳೆದ ಚುನಾವಣೆಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದು, ಈ ಬಾರಿ ಶೇಕಡಾವಾರು ಮತದಾನದಲ್ಲಿ ಮೊದಲ ಸ್ಥಾನಕ್ಕೆ ತರಲು ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದರು.
ಈ ವೇಳೆ ಬಿಇಒ ರೇವಣ್ಣ, ಸಿಡಿಪಿಒ ಬಸವರಾಜು, ಸಂಜೀವಿನಿ ಯೋಜನೆ ಮುಖ್ಯಸ್ಥೆ ಮಂಜುಳ ಇತರರು ಭಾಗವಹಿಸಿದ್ದರು. ರ್ಯಾಲಿಯಲ್ಲಿ ಪಿಡಿಒಗಳು, ಶಿಕ್ಷಕರು, ಕಂದಾಯ ಇಲಾಖೆ ಸಿಬ್ಬಂದಿ, ಆರೋಗ್ಯ ಕಾರ್ಯಕರ್ತರು ಭಾಗವಹಿಸಿ ಮತದಾರರಲ್ಲಿ ಜಾಗೃತಿ ಮೂಡಿಸಿದರು.