ಬೆಂಗಳೂರು: ಅನೇಕ ವರ್ಷದಿಂದ ಸುಣ್ಣಬಣ್ಣ ಕಾಣದ ನಗರದ ಸರ್ಕಾರಿ ಶಾಲೆಗಳನ್ನು ಗುರುತಿಸಿ ಸ್ವಯಂಪ್ರೇರಿತವಾಗಿ ಬಣ್ಣ ಬಳಿಯುವ ಜತೆಗೆ ಅಗತ್ಯ ಮೂಲಭೂತ ಸೌಕರ್ಯವನ್ನು ಒದಗಿಸುವ ಕೆಲಸವನ್ನು ನಮೋ ಸಮಾಜ ಸಂಘಟನೆ ಮಾಡುತ್ತಿದೆ.
ಕಳೆದ ಐದು ವರ್ಷದಿಂದ ಸಮಾಜಮುಖೀ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಈ ಸಂಘಟನೆಯ ಕಾರ್ಯಕರ್ತರು ತಮ್ಮದೇ ಸ್ವಂತ ಖರ್ಚಿನಲ್ಲಿ ಸರ್ಕಾರಿ ಶಾಲೆಗೆ ಬಣ್ಣ ಬಳಿಯುವುದು, ಶೌಚಾಲಯ ಸ್ವತ್ಛಮಾಡುವುದು ಹಾಗೂ ಸೂಕ್ತ ಪರಿಕರಗಳನ್ನು ಅವಳವಡಿಸುವುದನ್ನು ಮಾಡುತ್ತಿದ್ದಾರೆ. ಇದರ ಜತೆಗೆ ಮಕ್ಕಳಿಗೆ ಕುಡಿಯುವ ನೀರಿನ ವ್ಯವಸ್ಥೆಗೆ ಬೇಕಾದ ಕ್ರಮ ಇತ್ಯಾದಿ ಹಲವು ಕಾರ್ಯಕ್ರಮ ಮಾಡಿಕೊಂಡು ಬರುತ್ತಿದ್ದಾರೆ.
ಬಸವನಗುಡಿ ರಸ್ತೆಯ ಹನುಮಂತನಗರದ ಸುಂಕೇನಹಳ್ಳಿಯಲ್ಲಿರುವ ಸರ್ಕಾರಿ ಶಾಲೆಯ ಗೋಡೆಗಳಿಗೆ ಸುಣ್ಣಬಣ್ಣ ಬಳಿಯುತ್ತಿದ್ದಾರೆ. ಜತೆಗೆ ಮಕ್ಕಳನ್ನು ಶಾಲೆಗೆ ಆಕರ್ಷಿಸುವ ನಿಟ್ಟಿನಲ್ಲಿ ಕೆಲವೊಂದು ಚಿತ್ತಾರವನ್ನು ಗೋಡೆಯ ಮೇಲೆ ಮಾಡಿದ್ದಾರೆ. ಬ್ಯಾಗ್ ಹಾಕಿಕೊಂಡು ಶಾಲೆಗೆ ಹೋಗುವುದು, ಬ್ಯಾಡ್ಮಿಂಟನ್ ಆಟ ಆಡುವುದು, ಸಂಗೀತ ಪರಿಕರಗಳು, ನಗರ ಸ್ವತ್ಛತೆಗೆ ಸಂಬಂಧಿಸಿದಂತೆ ನಾಗರಿಕರ ಹೊಣೆಗಾರಿಕೆ ಸೇರಿದಂತೆ ಹಲವು ಚಿತ್ರ ಹಾಗೂ ಸಂದೇಶ ಶಾಲೆಯ ಗೋಡೆಯ ಮೇಲೆ ಕುಂಚದಿಂದ ಸೃಷ್ಟಿಸಿದ್ದಾರೆ.
ಸಂಘಟನೆಯ ಸದಸ್ಯರು ಹಾಗೂ ಕಲಾವಿದರು ಸೇರಿದಂತೆ ಸುಮಾರು 30 ಮಂದಿ ಈ ಕೆಲಸವನ್ನು ಕಳೆದ ಮೂರು ದಿನಗಳಿಂದ ಮಾಡುತ್ತಿದ್ದಾರೆ. ಈ ಶಾಲೆಯಲ್ಲಿ 180 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಕಳೆದ ಐದಾರು ವರ್ಷದಿಂದ ಶಾಲೆಗೆ ಸುಣ್ಣಬಣ್ಣ ಮಾಡಿರಲಿಲ್ಲ. ಸಂಘಟನೆಯ ಸದಸ್ಯರು ಸ್ವಯಂ ಪ್ರೇರಿತರಾಗಿ ಸುಮಾರು 5 ಲಕ್ಷ ರೂ.ಗಳ ಬಜೆಟ್‌ನಲ್ಲಿ ಈ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಕಳೆದ ಐದು ವರ್ಷದಿಂದ ಈ ರೀತಿಯ ಸಮಾಜಮುಖೀ ಕಾರ್ಯ ಮಾಡುತ್ತಿದ್ದೇವೆ.
ನಿರೀಕ್ಷೆಗೂ ಮೀರಿ ಸಾರ್ವಜನಿಕರ ಬೆಂಬಲ ದೊರೆತಿದೆ. ಕಳೆದ ವರ್ಷ ದೀಪಾಂಜಲಿ ನಗರದ ಸರ್ಕಾರಿ ಶಾಲೆಯಲ್ಲಿ ಸ್ವತ್ಛತಾ ಕಾರ್ಯ ನಡೆಸಿ, ಮೈದಾನವನ್ನು ಮಕ್ಕಳ ಉಪಯೋಗಕ್ಕಾಗಿ ಸಜ್ಜುಗೊಳಿಸಿದ್ದೇವೆ. ಪುಸ್ತಕ ಸಮಿತಿಯ ಸದಸ್ಯರ ಸಹಾಯದೊಂದಿಗೆ ಶಿಕ್ಷಕರಿಗೆ ವಿಜ್ಞಾನ ಮತ್ತು ಗಣಿತದ ತರಬೇತಿ ನೀಡುತ್ತೇವೆ. ಎಸ್ಸೆಸ್ಸೆಲ್ಸಿ ಮಕ್ಕಳಿಗೆ ಪರೀಕ್ಷಾ ತಯಾರಿಗೆ ಬೇಕಾದ ಮಾರ್ಗದರ್ಶನವನ್ನು ಸೂಕ್ತ ತಜ್ಞರಿಂದ ನೀಡುತ್ತೇವೆ ಎಂಬ ಸಂಘಟನೆಯ ಪ್ರಮುಖರಾದ ಅನಿಲ್ ಕುಮಾರ್ ಮಾಹಿತಿ ನೀಡಿದರು.