Advertisement

ಹಿರಿಯರಿಂದ ಸ್ವಯಂಪ್ರೇರಿತ ಗ್ರಂಥಾಲಯ 

11:43 AM Dec 29, 2019 | Suhan S |

ಮುಧೋಳ: ಸೇವೆಯಿಂದ ನಿವೃತ್ತರಾಗಿದ್ದರೂ ಯುವ ಜನರನ್ನು ಓದಿನತ್ತ ಸೆಳೆಯುವ ಮಹದಾಸೆಯಿಂದ ಸಮುದಾಯದ ಶಕ್ತಿಯೊಂದಿಗೆ ಸ್ವಯಂ ಪ್ರೇರಣೆಯಿಂದ ಗ್ರಂಥಾಲಯ ನಡೆಸುತ್ತಿರುವ ನಗರದ ಹಿರಿಯ ನಾಗರಿಕರು ಇತರರಿಗೆ ಮಾದರಿಯಾಗಿ ನಿಲ್ಲುತ್ತಾರೆ.

Advertisement

ನಿವೃತ್ತಿ ನಂತರದ ಜೀವನವನ್ನು ಸಾರ್ವಜನಿಕರ ಸೇವೆಗೆ ಮೀಸಲಿಟ್ಟಿರುವ ಹಿರಿಯ ಜೀವಿಗಳು ನಾಗರಿಕ ಹಿತರಕ್ಷಣಾ ಹಾಗೂ ಅಭಿವೃದ್ಧಿ ವೇದಿಕೆ ಸಂಘ ನಿರ್ಮಿಸಿಕೊಂಡು ಆ ಮೂಲಕ ಸಾರ್ವಜನಿಕರಲ್ಲಿ ಓದುವ ಸದಭಿರುಚಿ ಹೆಚ್ಚಿಸಲು ಶ್ರಮಿಸುತ್ತಿದೆ. ನಗರದ ಸಾಯಿನಗರದ ಪೊಲೀಸ್‌ ಕಾಲೋನಿಯಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹೆಚ್ಚುವರಿ ಕೊಠಡಿಯಲ್ಲಿ ಸಾರ್ವಜನಿಕ ಗ್ರಂಥಾಲಯ ಸಹಯೋಗದಲ್ಲಿ ಗ್ರಂಥಾಲಯ ನಿರ್ಮಿಸಿಕೊಂಡಿರುವ ಹಿರಿಯ ಜೀವಿಗಳು ಎರಡು ತಿಂಗಳಿನಿಂದ ಸ್ವಯಂಪ್ರೇರಣೆಯಿಂದ ಗ್ರಂಥಾಲಯ ನಿರ್ವಹಣೆ ಕಾರ್ಯದಲ್ಲಿ ತೊಡಗಿದ್ದಾರೆ.

ಸರದಿಯಂತೆ ಕಾರ್ಯನಿರ್ವಹಣೆ: 30ಕ್ಕಿಂತ ಹೆಚ್ಚು ಸದಸ್ಯರನ್ನು ಹೊಂದಿರುವ ಸಂಘದಲ್ಲಿ ಹೆಚ್ಚಿನವರು ನಿವೃತ್ತ ನೌಕರರಿದ್ದಾರೆ. ಗ್ರಂಥಾಲಯ ನಿರ್ವಹಣೆಗೆ ಸರ್ಕಾರ ಯಾವುದೇ ರೀತಿಯ ಸಿಬ್ಬಂದಿ ನೆರವು ನೀಡದ ಕಾರಣ ಹಿರಿಯರೆಲ್ಲ ದಿನಕ್ಕೆ ಇಬ್ಬರಂತೆ ಸರದಿಯಲ್ಲಿ ಗ್ರಂಥಾಲಯದ ಮೇಲ್ವಿಚಾರಣೆ ಮಾಡುತ್ತಿದ್ದಾರೆ.

ಬೆಳಗ್ಗೆ 9.30ರಿಂದ ಮಧ್ಯಾಹ್ನ 12.30 ಹಾಗೂ ಸಂಜೆ 5ರಿಂದ 8ರವರೆಗೆ ಗ್ರಂಥಾಲಯವನ್ನು ತೆರೆದು ಮೇಲ್ವಿಚಾರಣೆ ಮಾಡುತ್ತಾರೆ. ಸಾರ್ವಜನಿಕ ಗ್ರಂಥಾಲಯ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಹಳ್ಳೂರ ಅವರು ಗ್ರಂಥಾಲಯದ ಮೇಲ್ವಿಚಾರಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ದಾನಿಗಳ ನೆರವು: ಸಾರ್ವಜನಿಕ ಗ್ರಂಥಾಲಯ ಇಲಾಖೆ ಸಹಯೋಗದಲ್ಲಿ ಗ್ರಂಥಾಲಯ ನಿರ್ಮಿಸಿದ್ದರೂ ಗ್ರಂಥಾಲಯಕ್ಕೆ ಅನೇಕ ದಾನಿಗಳು ಹಲವೊಂದು ಪತ್ರಿಕೆ ಹಾಗೂ ನಿಯತಕಾಲಿಕೆ ತರಿಸುತ್ತಿದ್ದಾರೆ. ವಿಲೇಜ್‌ ಫೌಂಡೇಶನ್‌, ಮಹೇಶ, ಬಸವರಾಜ ಮರಡಿ ಸೇರಿದಂತೆ ಹಲವಾರು ಜನರು ಗ್ರಂಥಾಲಯಕ್ಕೆ ಕೈಲಾದಷ್ಟು ಮಟ್ಟಿಗೆ ನೆರವು ನೀಡುತ್ತಿದ್ದಾರೆ. ಮುಖ್ಯ ಗ್ರಂಥಾಲಯ ಮೂರು ಕಿ.ಮೀ: ಸಾಯಿ ಕಾಲನಿಯಿಂದ ನಗರದಲ್ಲಿರುವ ರನ್ನ ಗ್ರಂಥಾಲಯ ಹಾಗೂ ಗಾಂಧಿ ವೃತ್ತದಲ್ಲಿರುವ ಗ್ರಂಥಾಲಯ ಅಂದಾಜು 3 ಕಿ.ಮೀ ಅಂತರವಿದೆ. ಇದರಿಂದಾಗಿ ಈ ಭಾಗದ ಓದುಗರಿಗೆ ಈ ಗ್ರಂಥಾಲಯದಿಂದ ಹೆಚ್ಚು ಅನುಕೂಲವಾಗಿದೆ.

Advertisement

ಕಾಲನಿ ಅಭಿವೃದ್ಧಿಗೂ ಸೈ: ಕೇವಲ ಗ್ರಂಥಾಲಯ ಉಸ್ತುವಾರಿಯೊಂದೆ ಅಲ್ಲದೆ ಸಾಯಿ ನಗರದ ಅಭಿವೃದ್ಧಿಗೂ ಹಿರಿಯರ ಸಂಘ ಶ್ರಮಿಸುತ್ತಿದೆ. ಸಂಘದಲ್ಲಿ 18ರಿಂದ ಮೇಲ್ಪಟ್ಟವರಿರುವುದರಿಂದ ಕಾಲನಿಯ ಸ್ವತ್ಛತೆ, ಮನೆಗಳಿಗೆ ವಿಳಾಸ ಬರೆಯುವುದು, ಬೀದಿಗಳಿಗೆ ದೇಶಭಕ್ತರ ನಾಮಕರಣ ಮಾಡುವುದು ಸೇರಿದಂತೆ ಹಲವಾರು ಕಾರ್ಯದಲ್ಲಿ ತೊಡಗಿರುವುದರಿಂದ ಕಾಲನಿ ಅಭಿವೃದ್ಧಿಗಾಗಿ ವಿಶೇಷ ಸೇವೆ ಸಲ್ಲಿಸುತ್ತಿದ್ದಾರೆ.

ಜಿಲ್ಲೆಯಲ್ಲಿ ಎರಡನೇ ಗ್ರಂಥಾಲಯ: ಸಾರ್ವಜನಿಕರ ಸಹಭಾಗಿತ್ವದಲ್ಲಿ ಬಾಗಲಕೋಟೆ ಹೊರತುಪಡಿಸಿದರೆ ಮುಧೋಳದ ಗ್ರಂಥಾಲಯ ಎರಡನೇಯದ್ದಾಗಿದೆ. ನಿವೃತ್ತ ಆಸಕ್ತಿಯಿಂದ ನಡೆಯುತ್ತಿರುವ ಗ್ರಂಥಾಲಯಕ್ಕೆ ಇಲಾಖೆಯಿಂದ ಹೆಚ್ಚಿನ ಮಟ್ಟದ ನೆರವು ನೀಡಲಾಗುತ್ತಿದೆ ಎನ್ನುತ್ತಾರೆ ಜಿಲ್ಲಾ ಗ್ರಂಥಾಲಯ ಅಧಿಕಾರಿ ರೆಬಿನಾಳ.

ನಾಗರಿಕ ಹಿತರಕ್ಷಣಾ ವೇದಿಕೆಯಿಂದ ಸ್ವಯಂಪ್ರೇರಿತರಾಗಿ ಗ್ರಂಥಾಲಯ ನಡೆಸುತ್ತಿರುವುದು ಉತ್ತಮ ಬೆಳವಣಿಗೆ. ಶಾಲೆಯ ಕೊಠಡಿಯಲ್ಲಿ ಗ್ರಂಥಾಲಯವಿರುವುದರಿಂದ ವಿದ್ಯಾರ್ಥಿಗಳಿಗೂ ಅನುಕೂಲವಾಗುತ್ತದೆ. ಇದೇ ರೀತಿ ಸಾರ್ವಜನಿಕರು ಸ್ವಯಂ ಪ್ರೇರಿತರಾಗಿ ಮುಂದೆ ಬಂದರೆ ನಮ್ಮ ಕಡೆಯಿಂದಾಗುವ ನೆರವನ್ನು ನೀಡುತ್ತೇವೆ. –ಮಲ್ಲನಗೌಡ ರೆಬಿನಾಳ, ಮುಖ್ಯ ಗ್ರಂಥಪಾಲಕ ಬಾಗಲಕೋಟೆ ಗ್ರಂಥಾಲಯ

 

-ಗೋವಿಂದಪ್ಪ ತಳವಾರ

Advertisement

Udayavani is now on Telegram. Click here to join our channel and stay updated with the latest news.

Next