Advertisement

ಸ್ವಯಂಪ್ರೇರಿತರಾಗಿ ತಂಬಾಕು ಉತ್ಪನ್ನ ತ್ಯಜಿಸಿ

02:49 PM Apr 08, 2022 | Team Udayavani |

ದಾವಣಗೆರೆ: ತಂಬಾಕು ಉತ್ಪನ್ನಗಳಿಂದಾಗುವ ದುಷ್ಪರಿಣಾಮಗಳನ್ನು ಅರಿತು ಜನರೇ ಸ್ವಯಂಪ್ರೇರಿತವಾಗಿ ತಂಬಾಕು ಉತ್ಪನ್ನಗಳ ಸೇವನೆ ತ್ಯಜಿಸುವುದು ಸೂಕ್ತ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪ್ರವೀಣ್‌ ನಾಯಕ್‌ ಸಲಹೆ ನೀಡಿದರು.

Advertisement

ವಿಶ್ವ ಆರೋಗ್ಯ ದಿನಾಚರಣೆ ಅಂಗವಾಗಿ ಗುರುವಾರ ಕುವೆಂಪು ಕನ್ನಡ ಭವನದಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾ ತಂಬಾಕು ನಿಯಂತ್ರಣ ಕೋಶ ಸಹಯೋಗದಲ್ಲಿ ನಡೆದ ವಿಶೇಷ ವಿಕಲಚೇತನರಿಗೆ ತಂಬಾಕು ಉತ್ಪನ್ನ ಮತ್ತು ಮಾದಕ ವಸ್ತುಗಳ ದುಷ್ಪರಿಣಾಮಗಳ ಕುರಿತ ಅರಿವು ಮತ್ತು ಆರೋಗ್ಯ ತಪಾಸಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ತಂಬಾಕು ಸೇವನೆ ಆರೋಗ್ಯಕ್ಕೆ ಹಾನಿಕಾರಕ ಎಂದು ಸಿಗರೇಟ್‌ ಪ್ಯಾಕ್‌ ಮೇಲೆ ಬರೆದಿರುತ್ತಾರೆ. ಆದರೂ ಎಲ್ಲಾ ಗೊತ್ತಿರುವ ಜನರು ತಪ್ಪು ಮಾಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು. ತಂಬಾಕು ಮತ್ತು ಉತ್ಪನ್ನಗಳ ಸೇವನೆಯಿಂದ ಉಂಟಾಗುವ ಅಡ್ಡ ಪರಿಣಾಮಗಳ ಬಗ್ಗೆ ಎಷ್ಟೇ ಜಾಗೃತಿ ಮೂಡಿಸಿ ದರೂ ಬಹಳಷ್ಟು ಜನರು ತಂಬಾಕು ಉತ್ಪನ್ನಗಳನ್ನು ಸೇವಿಸುತ್ತಿದ್ದಾರೆ. ಆರೋಗ್ಯ ಶಿಕ್ಷಣದಿಂದ ತಂಬಾಕು ಸೇವನೆ ಕಡಿಮೆ ಆಗಬಹುದೆಂದು ಭಾವಿಸಲಾಗಿದ್ದರೂ, ಸಮಾಜದಲ್ಲಿ ಇದು ಹೆಚ್ಚಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ತಂಬಾಕು ಸೇವನೆ ಬಗ್ಗೆ ನಗರ ಪ್ರದೇಶಗಳಲ್ಲಿ ಅರಿವು ಮೂಡಿಸಲಾಗುತ್ತಿದೆ. ಅದೇ ರೀತಿಯಲ್ಲಿ ಗ್ರಾಮೀಣ ಪ್ರದೇಶದಲ್ಲೂ ಸಹ ತಂಬಾಕು ಮತ್ತು ಉತ್ಪನ್ನಗಳ ಸೇವನೆಯಿಂದ ಉಂಟಾಗುವ ದುಷ್ಪರಿಣಾಮಗಳ ಕುರಿತು ಅರಿವು ಮೂಡಿಸಬೇಕು. ತಂಬಾಕಿನ ದುಷ್ಪರಿಣಾಮಗಳು ಹಾಗೂ ಅರಿವಿನ ಮಹತ್ವ ತಿಳಿದು ಕಾರ್ಯಕ್ರಮದ ಪ್ರಯೋಜನವನ್ನು ಜನರು ಪಡೆದುಕೊಳ್ಳಬೇಕು ಎಂದರು.

ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಅಧಿಕಾರಿ ಕೃಷ್ಣ ಪ್ರಕಾಶ್‌ ಮಾತನಾಡಿ, ಭೌತಿಕ ವಿಕಲಚೇತನರಿಗೆ ಪೋಷಕತ್ವ ಎಂಬುದು ಹುಟ್ಟಿನಿಂದ ಬಂದಿರುವುದಿಲ್ಲ. ಭೌತಿಕ ವಿಕಲಚೇತನರು 18 ವರ್ಷದ ನಂತರ ಪೋಷಕತ್ವವನ್ನು ಪಡೆಯುತ್ತಾರೆ. 18 ವರ್ಷದ ನಂತರ ಜಿಲ್ಲಾಸ್ಪತ್ರೆಯಲ್ಲಿ ಪೋಷಕರು ವಿವಿಧ ಇಲಾಖೆಗಳಿಂದ ಅನೇಕ ಉಪಯೋಗಗಳನ್ನು ಪಡೆಯಬಹುದು. ಸೌಲಭ್ಯಗಳ ಬಗ್ಗೆ ಪೋಷಕರು ಮಾಹಿತಿ ಪಡೆದು ಪೋಷಕತ್ವ ಕಾಯ್ದೆಯಡಿ ನೋಂದಣಿ ಮಾಡಿಕೊಳ್ಳಬೇಕು ಎಂದು ತಿಳಿಸಿದರು.

Advertisement

ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ| ಜಿ.ಡಿ. ರಾಘವನ್‌ ಮಾತನಾಡಿ, ಭಾರತದಲ್ಲಿ ಕೆಲ ಹದಿಹರೆಯದ ಮಕ್ಕಳು ಯಾವುದಾದರೂ ಒಂದು ತಂಬಾಕಿನ ಚಟದ ಅಭ್ಯಾಸವನ್ನು ಮಾಡಿಕೊಂಡಿರುತ್ತಾರೆ. 12ರಿಂದ 18 ವರ್ಷದ ಮಕ್ಕಳಿಗೆ ತಂಬಾಕು ಉತ್ಪನ್ನಗಳ ಮಾರಾಟ ಮಾಡುವುದು ಹಾಗೂ ಅಪ್ರಾಪ್ತ ವಯಸ್ಕರ ಮಕ್ಕಳಿಂದ ತಂಬಾಕು ಉತ್ಪನ್ನಗಳ ಮಾರಾಟ ಮಾಡಿಸುವುದು ಶಿಕ್ಷಾರ್ಹ ಅಪರಾಧವಾಗಿದೆ. ಪೋಷಕರು ಸಣ್ಣ ವಯಸ್ಸಿನಲ್ಲಿಯೇ ಮಕ್ಕಳಲ್ಲಿ ಅಭ್ಯಾಸವಾಗದಂತೆ ತಂಬಾಕು ನಿಯಂತ್ರಣದ ಬಗ್ಗೆ ಅರಿವು ಮೂಡಿಸಬೇಕು ಎಂದರು.

ನಿವೃತ್ತ ಹೆಚ್ಚುವರಿ ಪೊಲೀಸ್‌ ಅಧೀಕ್ಷಕ ರವಿನಾರಾಯಣ್‌, ಜಿಲ್ಲಾ ಸಿಆರ್‌ಸಿ ಕೇಂದ್ರದ ಡಾ| ಉಮಾಶಂಕರ್‌ ಮೊಹಾಂತಿ, ಜಿಲ್ಲಾ ಮಲೇರಿಯಾ ನಿಯಂತ್ರಣಾ ಧಿಕಾರಿ ಡಾ| ನಟರಾಜ್‌, ಸಂವೇದ ಸಂಸ್ಥೆಯ ಡಾ| ಸುರೇಂದ್ರನಾಥ್‌ ನಿಶಾನಿಮಠ್ ಎಸ್‌. ನಾಗರಾಜ್‌ ಇತರರು ಇದ್ದರು.

ತಂಬಾಕು ನಿಯಂತ್ರಣ ಅಧಿಕಾರಿಗಳು ದಾವಣಗೆರೆಯ ತಂಬಾಕು ಮಾರಾಟ ಮಾಡುವ ಅಂಗಡಿಗಳಿಗೆ ಭೇಟಿ ನೀಡಿ ತಂಬಾಕು ಮಾರಾಟ ನಿಯಂತ್ರಣ ಮಾಡಿದ್ದಾರೆ. ನಗರ ಹಾಗೂ ಜಿಲ್ಲಾ ಮಟ್ಟದಲ್ಲಿ ತಂಬಾಕು ನಿಯಂತ್ರಣ ಕಾರ್ಯ ಮುಗಿದಿದ್ದು, ದಾವಣಗೆರೆಯನ್ನು ತಂಬಾಕು ಮುಕ್ತ ನಗರವನ್ನಾಗಿ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಗ್ರಾಮ ಮಟ್ಟದಲ್ಲಿ ತಂಬಾಕು ನಿಯಂತ್ರಣ ಕುರಿತು ಜಾಗೃತಿ ಮೂಡಿಸಲಾಗುವುದು. ಡಾ| ಜಿ.ಡಿ. ರಾಘವನ್‌, ಜಿಲ್ಲಾ ಸರ್ವೇಕ್ಷಣಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next