Advertisement
ಮುಖ್ಯಮಂತ್ರಿ ಸಿದ್ದರಾಮಯ್ಯ ಶೀಘ್ರವೇ ದೆಹಲಿಗೆ ತೆರಳಿ ಖಾಲಿ ಇರುವ ಮೂರು ಸ್ಥಾನ ಭರ್ತಿ ಮಾಡಲು ಹೈ ಕಮಾಂಡ್ ಅನುಮತಿ ಪಡೆಯುವ ಸಾಧ್ಯತೆ ಇದೆ. ಹೀಗಾಗಿ ಸಚಿವಾಕಾಂಕ್ಷಿಗಳು ರಾಜ್ಯ ಹಾಗೂ ದೆಹಲಿ ಮಟ್ಟದಲ್ಲಿ ಲಾಬಿ ಆರಂಭಿಸಿದ್ದು, ಇಂದು ಅನೇಕರು ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ.
Related Articles
Advertisement
ಇನ್ನು ವಿಧಾನ ಸಭೆಯಲ್ಲಿ ದಲಿತ ಸಮುದಾಯಕ್ಕೆ ಸೇರಿದ ಮಳವಳ್ಳಿ ಶಾಸಕ ಪಿ.ಎಂ. ನರೇಂದ್ರಸ್ವಾಮಿ, ಈಗಾಗಲೇ ಸಚಿವ ಸ್ಥಾನ ಕಳೆದುಕೊಂಡಿರುವ ಶಿವರಾಜ್ ತಂಗಡಗಿ ಅವರೂ ತೀವ್ರ ಲಾಬಿ ನಡೆಸುತ್ತಿದ್ದಾರೆ. ಶಿವರಾಜ್ ತಂಗಡಗಿ ಭೋವಿ ಸಮುದಾಯದ ಏಕೈಕ ಆಡಳಿತ ಪಕ್ಷದ ಶಾಸಕರಾಗಿರುವುದರಿಂದ ತಮ್ಮ ಸಮುದಾಯಕ್ಕೆ ಸಂಪುಟದಲ್ಲಿ ಸ್ಥಾನ ಸಿಗದೇ ಅನ್ಯಾಯವಾಗಿದೆ. ಮತ್ತು ತಮ್ಮ ವಿರುದ್ಧ ಯಾವುದೇ ಆರೋಪ ಇಲ್ಲದಿದ್ದರೂ ಸಂಪುಟದಿಂದ ಕೈ ಬಿಡಲಾಗಿದೆ. ಹೀಗಾಗಿ ಬೋವಿ ಸಮುದಾಯ ಹಾಗೂ ಹೈದರಾಬಾದ್ ಕರ್ನಾಟಕ ಲೆಕ್ಕಾಚಾರದ ಹಿನ್ನೆಲೆಯಲ್ಲಿ ತಮಗೆ ಸ್ಥಾನ ನೀಡುವಂತೆ ದೆಹಲಿ ಮಟ್ಟದಲ್ಲಿ ಒತ್ತಡ ಹೇರುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಪಿಎಂ ನರೇಂದ್ರ ಸ್ವಾಮಿ, ಅಂಬರೀಶ್‌ರನ್ನು ಸಚಿವ ಸ್ಥಾನ ದಿಂದ ಕೈ ಬಿಟ್ಟಿರುವುದರಿಂದ ಮಂಡ್ಯ ಜಿಲ್ಲೆಗೆ ಪ್ರಾತಿನಿಧ್ಯವಿಲ್ಲದಂತಾಗಿದೆ. ಅಲ್ಲದೇ ಹಳೆ ಮೈಸೂರು ಭಾಗದ ಪ್ರಭಾವಿ ದಲಿತ ಸಚಿವರಾಗಿದ್ದ ಶ್ರೀನಿವಾಸ್ ಪ್ರಸಾದ್ ಅವರೂ ಪಕ್ಷ ತೊರೆದಿರುವದರಿಂದ ಆ ಭಾಗದಲ್ಲಿ ಜಾತಿ ಮತ್ತು ಜಿಲ್ಲಾ ಪ್ರಾತಿನಿಧ್ಯದಲ್ಲಿ ತಮಗೇ ಸ್ಥಾನ ನೀಡಬೇಕೆಂಬ ಬೇಡಿಕೆ ಮುಂದಿಟ್ಟಿದ್ದಾರೆ ಎನ್ನಲಾಗಿದೆ. ಹೈ ಕಮಾಂಡ್ ಕೃಪೆ ದೊರೆತರೆ, ದಲಿತ ಕೋಟಾದಲ್ಲಿ ಮೋಟಮ್ಮಗೆ ಹೆಚ್ಚಿನ ಅವಕಾಶವಿದೆ ಎನ್ನುವ ಲೆಕ್ಕಾಚಾರ ಶುರುವಾಗಿದೆ.
ಇನ್ನು ಲಿಂಗಾಯತರ ಕೋಟಾದಲ್ಲಿ ಪರಮೇಶ್ವರ್ ಅವರು ತಮ್ಮ ಜಿಲ್ಲೆಯ ತಿಪಟೂರು ಶಾಸಕ ಷಡಕ್ಷರಿ ಅವರನ್ನು ಸಚಿವರನ್ನಾಗಿ ಮಾಡುವ ಇಚ್ಚೆ ಹೊಂದಿದ್ದಾರೆ ಎನ್ನಲಾಗುತ್ತಿದೆ. ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಆಪ್ತ ಸಚಿವರಾಗಿರುವ ಎಚ್.ಸಿ. ಮಹದೇವಪ್ಪ, ಗೀತಾ ಮಹದೇವ ಪ್ರಸಾದ್ ಅವರನ್ನು ಮಾಡುವಂತೆ ಒತ್ತಡ ಹೇರುತ್ತಿದ್ದಾರೆ ಎಂದು ತಿಳಿದು ಬಂದಿದೆ. ಹಳೆ ಮೈಸೂರು ಭಾಗದಲ್ಲಿ ಲಿಂಗಾಯತ ಸಮುದಾಯದವರಿಗೆ ಆದ್ಯತೆ ನೀಡದಿದ್ದರೆ, ಚುನಾವಣೆಯಲ್ಲಿ ಸಮಸ್ಯೆ ಎದುರಾಗುವ ಸಾಧ್ಯತೆ ಇದೆ ಎಂದು ಮಹದೇವಪ್ಪ ಗೀತಾ ಮಹದೇವ ಪ್ರಸಾದ್ ಪರ ಲಾಬಿ ನಡೆಸುತ್ತಿದ್ದಾರೆ ಎನ್ನಲಾಗುತ್ತಿದೆ. ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಳಗಾವಿ ಜಿಲೆಯ ರಾಮದುರ್ಗ ಶಾಸಕ ಅಶೋಕ್ ಪಟ್ಟಣ ಅವರಿಗೆ ಮಂತ್ರಿ ಸ್ಥಾನ ನೀಡಿ, ಬೆಳಗಾವಿ ಜಿಲ್ಲೆಗೆ ಇನ್ನೊಂದು ಪ್ರಾತಿನಿಧ್ಯ ನೀಡುವ ಮೂಲಕ ಜಿಲ್ಲೆಯಲ್ಲಿ ಹೆಚ್ಚು ವಿಧಾನಸಭಾ ಕ್ಷೇತ್ರಗಳನ್ನು ಗೆಲ್ಲುವ ಲೆಕ್ಕಾಚಾರ ಹಾಕಿದ್ದಾರೆ ಎಂದು ತಿಳಿದು ಬಂದಿದೆ.
ಇದಲ್ಲದೇ ಸ್ವಜಾತಿಯ ಸಮುದಾಯದವರಿಗೂ ಒಬ್ಬರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಸಿಎಂ ಒಲವು ತೋರಿರುವುರದಿಂದ ಎಚ್.ಎಂ. ರೇವಣ್ಣ, ಸಿ.ಎಸ್. ಶಿವಳ್ಳಿ, ಲೈಂಗಿಕ ಹಗರಣದಲ್ಲಿ ಸಿಲುಕಿ ಕ್ಲೀನ್ ಚಿಟ್ ಪಡೆದುಕೊಂಡಿರುವ ಎಚ್.ವೈ ಮೇಟಿ ಕೂಡ ಮತ್ತೂಂದು ಪ್ರಯತ್ನ ಆರಂಭಿಸಿದ್ದಾರೆ ಎನ್ನಲಾಗುತ್ತಿದೆ. ಇವರಲ್ಲಿ ಮುಖ್ಯಮಂತ್ರಿ ಅಭಯ ಯಾರಿಗೆ ದೊರೆಯುತ್ತದೆ ಎನ್ನುವುದು. ಬೇರೆ ಸ್ಥಾನಗಳನ್ನು ಭರ್ತಿ ಮಾಡುವ ಲೆಕ್ಕಾಚಾರದ ಮೇಲೆ ನಿರ್ಧಾರವಾಗಲಿದೆ ಎಂದು ಹೇಳಲಾಗುತ್ತಿದೆ.
ಗೃಹ ಖಾತೆಗೆ ಹಿರಿಯ ಸಚಿವರ ನಿರಾಕರಣೆಡಾ.ಜಿ ಪರಮೇಶ್ವರ್ ಅವರಿಂದ ತೆರವಾಗಿರುವ ಗೃಹ ಖಾತೆಯನ್ನು ಯಾರಿಗೆ ನೀಡಬೇಕೆಂಬುದು ಸಿಎಂಗೆ ದೊಡ್ಡ ಸಮಸ್ಯೆಯಾಗಿದೆ ಎನ್ನಲಾಗುತ್ತಿದೆ. ಹಾಲಿ ಸಂಪುಟದಲ್ಲಿರುವ ಹಿರಿಯ ಸಚಿವರಿಗೆ ಗೃಹ ಖಾತೆ ಜವಾಬ್ದಾರಿ ವಹಿಸಲು ಮುಖ್ಯಮಂತ್ರಿ ಮುಂದಾದರೂ, ಯಾವ ಹಿರಿಯ ಸಚಿವರೂ ಆ ಖಾತೆ ಒಪ್ಪಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಹಿರಿಯ ಸಚಿವರಾದ ಆರ್Ì.ವಿ. ದೇಶಪಾಂಡೆ, ಕೆ.ಜೆ. ಜಾರ್ಜ್, ರೋಷನ್ ಬೇಗ್, ಎಚ್.ಸಿ. ಮಹದೇವಪ್ಪ ಗೃಹ ಖಾತೆ ವಹಿಸಿಕೊಳ್ಳಲು ತಮ್ಮದೇ ಆದ ಕಾರಣ ನೀಡಿ ಹಿಂದೇಟು ಹಾಕುತ್ತಿದ್ದಾರೆ. ಇನ್ನು, ಇಂಧನ ಸಚಿವ ಡಿ.ಕೆ. ಶಿವಕುಮಾರ್ ಇಲಾಖೆ ಜವಾಬ್ದಾರಿ ವಹಿಸಿಕೊಳ್ಳಲು ಮುಂದಾಗಿದ್ದರೂ, ಅವರಿಗೆ ಜವಾಬ್ದಾರಿ ನೀಡಲು ಸಿಎಂ ಗೆ ಮನಸಿಲ್ಲ. ಹೀಗಾಗಿ ಕಾನೂನು ಸಚಿವ ಟಿ.ಬಿ. ಜಯಚಂದ್ರ ಅಥವಾ ಎಚ್.ಸಿ. ಮಹದೇವಪ್ಪ ಅವರಿಗೆ ಗೃಹ ಖಾತೆಯ ಜವಾಬ್ದಾರಿ ವಹಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಚಿಂತನೆ ನಡೆಸಿದ್ದಾರೆ ಎಂದು ಸಿಎಂ ಆಪ್ತ ಮೂಲಗಳು ತಿಳಿಸಿವೆ. – ಮೋಟಮ್ಮ, ಆರ್.ಬಿ. ತಿಮ್ಮಾಪುರ, ಪಿ.ಎಂ. ನರೇಂದ್ರಸ್ವಾಮಿ, ಶಿವರಾಜ್ ತಂಗಡಗಿ ಅವರಿಂದ ರಾಷ್ಟ್ರೀಯ ನಾಯಕರ ಮೇಲೆ ಒತ್ತಡ