ಹುಬ್ಬಳ್ಳಿ: ರಾಜ್ಯ ಒಲಿಂಪಿಕ್ಸ್ ಕ್ರೀಡಾಕೂಟದ ವಾಲಿಬಾಲ್‌ನ ಮಹಿಳೆಯರ ವಿಭಾಗದಲ್ಲಿ ಧಾರವಾಡ ತಂಡ ಹಾಗೂ ಪುರುಷರ ವಿಭಾಗದಲ್ಲಿ ಬೆಂಗಳೂರು ತಂಡ ಚಾಂಪಿಯನ್‌ಗಳಾಗಿ ಹೊರಹೊಮ್ಮಿವೆ. ಮಹಿಳೆಯರ ಫೈನಲ್‌ನಲ್ಲಿ ಧಾರವಾಡ 3-1ರಿಂದ ಬಳ್ಳಾರಿ ತಂಡವನ್ನು ಮಣಿಸಿತು.
ರೋಚಕ ಪಂದ್ಯದಲ್ಲಿ ಧಾರವಾಡ ಜಿಲ್ಲೆಯನ್ನು ಪ್ರತಿನಿಧಿಸಿದ ಬ್ಯಾಹಟ್ಟಿ ತಂಡ ಮೊದಲ ಸೆಟ್ 20-25ರಿಂದ ಸೋತ ನಂತರ ಚೇತರಿಸಿಕೊಂಡು 25-22ರಿಂದ ದ್ವಿತೀಯ ಸೆಟ್, 25-20ರಿಂದ ತೃತೀಯ ಹಾಗೂ 25-16ರಿಂದ ಚತುರ್ಥ ಸೆಟ್ ಗೆದ್ದುಕೊಂಡು ಟ್ರೋಫಿ ತನ್ನದಾಗಿಸಿಕೊಂಡಿತು. ನೆಹರು ಮೈದಾನದಲ್ಲಿ ನಡೆದ ಫೈನಲ್ ಪಂದ್ಯಗಳಿಗೆ ಸಾವಿರಾರು ಪ್ರೇಕ್ಷಕರು ಸಾಕ್ಷಿಯಾದರು.
ಪಂದ್ಯ ಆರಂಭವಾದಾಗಿನಿಂದ ಮುಗಿಯುವವರೆಗೂ ತವರು ತಂಡಕ್ಕೆ ಪ್ರೇಕ್ಷಕರು ಬೆಂಬಲ ನೀಡಿ, ಚಪ್ಪಾಳೆ ಮೂಲಕ ತಂಡದ ಆಟಗಾರ್ತಿಯರನ್ನು ಪ್ರೋತ್ಸಾಹಿಸಿದರು. ಚತುರ್ಥ ಸೆಟ್‌ನಲ್ಲಿ ಎದುರಾಳಿ ತಂಡ ಬಳ್ಳಾರಿ ಆತ್ಮವಿಶ್ವಾಸ ಕಳೆದುಕೊಂಡಂತೆ ಕಂಡು ಬಂತು. ಧಾರವಾಡ ತಂಡ ಅಂತರ ಹೆಚ್ಚಿಸಿಕೊಳ್ಳುತ್ತ, ಪ್ರೇಕ್ಷಕರ ನಿರೀಕ್ಷೆಯಂತೆ ಚಾಂಪಿಯನ್ ಪಟ್ಟ ಪಡೆಯಿತು.
ಪುರುಷರ ಫೈನಲ್‌ನಲ್ಲಿ ಬೆಂಗಳೂರು ತಂಡ 25-21, 25-22, 25-14ರಿಂದ ಚಾಮರಾಜನಗರವನ್ನು ಪರಾಭವಗೊಳಿಸಿತು. ಮೊದಲೆರಡು ಸೆಟ್‌ಗಳು ಹಣಾಹಣಿಯಿಂದ ಕೂಡಿದ್ದರೂ ತೃತೀಯ ಸೆಟ್‌ನಲ್ಲಿ ಬೆಂಗಳೂರು ತಂಡ ನಿರಾಯಾಸವಾಗಿ ಅಂಕಗಳನ್ನು ಪಡೆದುಕೊಳ್ಳುತ್ತ ಸಾಗಿತು. ಒತ್ತಡಕ್ಕೆ ಸಿಲುಕಿದ ಎದುರಾಳಿ ಚಾಮರಾಜನಗರ ತಂಡ 3ನೇ ಸೆಟ್‌ನಲ್ಲಿ ಪಂದ್ಯ ಉಳಿಸಿಕೊಳ್ಳಲು ಪ್ರಯತ್ನ ಮಾಡಿತಾದರೂ ಯಾವುದೇ ಫಲ ಸಿಗಲಿಲ್ಲ.
ಇದಕ್ಕೂ ಮುನ್ನ ಪುರುಷರ ವಿಭಾಗದಲ್ಲಿ ತೃತೀಯ ಸ್ಥಾನಕ್ಕೆ ನಡೆದ ಪಂದ್ಯದಲ್ಲಿ ಶಿವಮೊಗ್ಗ 3-2ರಿಂದ ಬಳ್ಳಾರಿ ತಂಡವನ್ನು ಸೋಲಿಸಿತು. ಶಿವಮೊಗ್ಗ ಹಾಗೂ ಬಳ್ಳಾರಿ ಪಂದ್ಯ ತೀವ್ರ ಜಿದ್ದಾಜಿದ್ದಿನಿಂದ ಕೂಡಿತ್ತು. ಉಭಯ ತಂಡಗಳು 2 ಸೆಟ್ ಜಯಿಸಿದ್ದರಿಂದ ಪಂದ್ಯ 5ನೇ ಸೆಟ್ ನಡೆಯಿತು. ಶಿವಮೊಗ್ಗ 25-22, 18-25, 25-23, 24-26, 15-11ರಿಂದ ಎದುರಾಳಿ ತಂಡವನ್ನು ಹೊಸಕಿತು.
ತೃತೀಯ ಸ್ಥಾನಕ್ಕೆ ನಡೆದ ಮಹಿಳೆಯರ ಪಂದ್ಯದಲ್ಲಿ ಕೋಲಾರ 3-0 ನೇರ ಸೆಟ್‌ಗಳಿಂದ ಮೈಸೂರು ತಂಡವನ್ನು ಸೋಲಿಸಿತು. ಕೋಲಾರ 25-16, 25-16, 26-24 ಅಂತರದಿಂದ ಮೈಸೂರು ತಂಡವನ್ನು ಪರಾಭವಗೊಳಿಸಿತು. ಸಂಸದ ಪ್ರಹ್ಲಾದ ಜೋಶಿ, ಜಿಲ್ಲಾಧಿಕಾರಿ ಎಸ್.ಬಿ. ಬೊಮ್ಮನಹಳ್ಳಿ, ಮಾಜಿ ಶಾಸಕ ಶಂಕರಪಾಟೀಲ ಮುನೇನಕೊಪ್ಪ, ತಹಶೀಲ್ದಾರ ಶಶಿಧರ ಮಾಡ್ಯಾಳ, ಪಾಲಿಕೆ ಆಯುಕ್ತ ಸಿದ್ದಲಿಂಗಯ್ಯ ಹಿರೇಮಠ, ಮಹಾನಗರ ಪೊಲೀಸ್ ಆಯುಕ್ತ ಪಾಂಡುರಂಗ ರಾಣೆ ಪಂದ್ಯ ವೀಕ್ಷಿಸಿದರಲ್ಲದೆ ವಿಜೇತರಿಗೆ ಪದಕ, ಟ್ರೋಫಿ ವಿತರಿಸಿದರು.