Advertisement

Vogga; ಚಾಕು ತೋರಿಸಿ ದರೋಡೆ ನಡೆಸಿದ್ದ ಪ್ರಕರಣ: ಏಳು ಮಂದಿ ಬಂಧಿಸಿದ ವಿಶೇಷ ತಂಡ

11:42 PM Jan 22, 2024 | Team Udayavani |

ಪುಂಜಾಲಕಟ್ಟೆ/ಬಂಟ್ವಾಳ: ವಗ್ಗ ಸಮೀಪದ ಅಂಚಿಕಟ್ಟೆ ಮೇನಾಡುವಿನಲ್ಲಿ ಬೆಳ್ಳಂಬೆಳಗ್ಗೆ ತಾಯಿ – ಮಗಳಿಗೆ ಚಾಕು ತೋರಿಸಿ ಲಕ್ಷಾಂತರ ರೂ. ಮೌಲ್ಯದ ನಗ-ನಗದು ದೋಚಿದ ಪ್ರಕರಣಕ್ಕೆ ಸಂಬಂಧಿಸಿ ಬಂಟ್ವಾಳ ಪೋಲೀಸರ ವಿಶೇಷ ತಂಡ ಒಟ್ಟು 7 ಮಂದಿ ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.

Advertisement

ಕಾರ್ಕಳ ತಾಲೂಕಿನ ಮಾಳ ಗ್ರಾಮದ ಗಣೇಶ ನಾಯ್ಕ (26), ದಿನೇಶ್‌ ನಾಯ್ಕ (22), ಸಾಗರ ಶೆಟ್ಟಿ (21) ಮಂಗಳೂರು, ಐಕಳ ಗ್ರಾಮದ ರಾಕೇಶ್‌ ಎಲ್ . ಪಿಂಟೋ (29), ಕಡಬ ಬೆಳಂದೂರು ಗ್ರಾಮದ ಎಂ. ಸೀತಾರಾಮ ಪ್ರವೀಣ್‌ (36), ಸುಧೀರ್‌ (29) ಹಾಗೂ ದರೋಡೆಗೈದ ಚಿನ್ನಾಭರಣವನ್ನು ಸ್ವೀಕರಿಸಿದ ಮೂಲತಃ ಬಂಟ್ವಾಳ ತಾಲೂಕಿನ, ಇರಾ ಗ್ರಾಮದವನಾದ ಪ್ರಸ್ತುತ ಗೌರಿ ಕಾಲುವೆ, ಚಿಕ್ಕಮಗಳೂರು ಜಿಲ್ಲೆ ವಾಸಿ ಮಹಮ್ಮದ್‌ ಹನೀಫ್ (49) ಬಂಧಿತ ಆರೋಪಿಗಳು.

ಬಂಧಿತರಿಂದ ದರೋಡೆಗೈದ 3.15 ಲಕ್ಷ ರೂ. ಮೌಲ್ಯದ 54 ಗ್ರಾಂ. ಚಿನ್ನಾಭರಣ ಹಾಗೂ 10 ಲಕ್ಷ ರೂ. ಮೌಲ್ಯದ ಇನ್ನೋವಾ ಹಾಗೂ ಇಂಡಿಕಾ ಕಾರುಗಳನ್ನು ವಶಕ್ಕೆ ಪಡೆಯಲಾಗಿದೆ.

ಜ. 11ರಂದು ಬೆಳಗ್ಗೆ ವಗ್ಗ ಸಮೀಪದ ಅಂಚಿಕಟ್ಟೆ ಮೇನಾಡು ನಿವಾಸಿ ಮರೀಟಾ ಸಿಂಥಿಯಾ ಪಿಂಟೋ ಅವರ ಮನೆಗೆ ಬಂದ ಮುಸುಕುಧಾರಿಗಳು ಮನೆಯ ಬೆಲ್‌ ಹಾಕಿದ್ದು, ಮನೆಯಲ್ಲಿ ತಾಯಿ ಫ್ಲೋರಿನಾ ಪಿಂಟೊ ಹಾಗೂ ಮಗಳು ಮರಿಟಾ ಪಿಂಟೋ ಮಾತ್ರ ಇದ್ದರು. ಬಾಗಿಲು ತೆರೆದ ಕೂಡಲೇ ಮುಸುಕುಧಾರಿಗಳು ಮನೆಯೊಳಗೆ ನುಗ್ಗಿ, ಚೂರಿ ತೋರಿಸಿ ಬೀರುವಿನ ಕೀ ನೀಡುವಂತೆ ಹೆದರಿಸಿದ್ದರು. ಈ ವೇಳೆ ಮರಿಟಾ ಪಿಂಟೋ ಹೆದರಿ ಕೀ ನೀಡಿದ್ದಾರೆ. ಬಳಿಕ ಕಳ್ಳರು ಬೀರುವಿನಲ್ಲಿದ್ದ ಚಿನ್ನ ಹಾಗೂ ನಗದನ್ನು ದೋಚಿ ಪರಾರಿಯಾಗಿದ್ದರು.

ಬಹುಮಾನ ಘೋಷಣೆ
ಘಟನೆ ನಡೆದ ಸ್ಥಳಕ್ಕೆ ದ.ಕ. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್‌ ಅವರು ಭೇಟಿ ನೀಡಿ ಪ್ರಕರಣದ ತನಿಖೆಗೆ ವಿಶೇಷ ತಂಡ ರಚಿಸಿದ್ದರು. ಎಸ್ಪಿ ನಿರ್ದೇಶನದಂತೆ ಬಂಟ್ವಾಳ ಡಿವೈಎಸ್ಪಿ ಎಸ್‌. ವಿಜಯಪ್ರಸಾದ್‌ ನೇತೃತ್ವದಲ್ಲಿ ಬಂಟ್ವಾಳ ಗ್ರಾಮಾಂತರ ಇನ್‌ಸ್ಪೆಕ್ಟರ್‌ ಶಿವಕುಮಾರ್‌, ಪುಂಜಾಲಕಟ್ಟೆ ಎಸ್ಸೆ„ ನಂದಕುಮಾರ್‌, ಬಂಟ್ವಾಳ ಗ್ರಾಮಾಂತರ ಎಸ್ಸೆ„ ಹರೀಶ್‌ ಎಂ.ಆರ್‌. ಅವರು ಮೂರು ತಂಡಗಳ ಮೂಲಕ ತನಿಖೆ ಕೈಗೊಂಡಿದ್ದರು. ಆರೋಪಿಗಳ ಪತ್ತೆ ಕಾರ್ಯವನ್ನು ಮೆಚ್ಚಿ ತಂಡಗಳಿಗೆ ಬಹುಮಾನ ಘೋಷಣೆ ಮಾಡಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next